ಭಾರತ ಹಾಗೂ ಚೀನಾ ನಡುವಿನ ಲಡಾಖ್ ಸಂಘರ್ಷ ಕಿಚ್ಚು ಸಂಪೂರ್ಣವಾಗಿ ಆರಿಲ್ಲ. ಇದರ ಬೆನ್ನಲ್ಲೇ ಚೀನಾ ಮತ್ತೊಂದು ಖ್ಯಾತೆ ತೆಗೆದಿದೆ. ಈ ಬಾರಿ ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆ ಜೊತೆಗೆ ಸಂಘರ್ಷ ನಡೆಸಿದೆ. ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  

ನವದೆಹಲಿ(ಡಿ.12): ಭಾರತ ಹಾಗೂ ಚೀನಾ ನಡುವಿನ ಲಡಾಖ್ ಸಂಘರ್ಷ ಸಂಭವಿಸಿ ವರ್ಷಗಳೇ ಉರುಳಿದರೂ ಕಿಚ್ಚು ಇನ್ನೂ ಆರಿಲ್ಲ. ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಹಲವು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಭಾರತ ಯತ್ನಿಸುತ್ತಿದೆ. ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದ ರೀತಿ ಇದೆ. ಈ ಘಟನೆ ಹಚ್ಚ ಹಸಿರಿರುವಾಗಲೇ ಇದೀಗ ಅರುಣಾಚಲ ಪ್ರದೇಶದಲ್ಲಿ ಚೀನಾ ಕಿರಿಕ್ ಮಾಡಿದೆ. ಗಡಿ ನಿಯಂತ್ರಣ ರೇಖೆಯೊಳಕ್ಕೆ ನುಗ್ಗಲು ಯತ್ನಿಸಿದ ಚೀನಾ ಸೇನೆಗೆ ಭಾರತೀಯ ಸೇನೆ ಪ್ರತಿರೋಧ ವ್ಯಕ್ತಪಡಿಸಿದೆ. ಶಾಂತಿಯುತವಾಗಿದ್ದ ಗಡಿಯಲ್ಲಿ ಚೀನಾ ಸುಖಾಸುಮ್ಮನೆ ಕಿರಿಕ್ ತೆಗೆದಿದೆ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಇದರ ಪರಿಣಾಮ ಭಾರತ ಹಾಗೂ ಚೀನಾ ಯೋಧರು ಗಾಯಗೊಂಡಿದ್ದಾರೆ.

ಈ ಘಟನೆ ಕಳೆದ ವಾರ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ ಈ ಘರ್ಷಣೆ ನಡೆದಿದೆ. ಗಡಿ ನಿಯಂತ್ರಣ ರೇಖೆ ಮೂಲಕ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಚೀನಾ ಯತ್ನಿಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಚೀನಾ ಸೇನೆಯನ್ನು ಗಡಿಯೊಳಕ್ಕೆ ಪ್ರವೇಶಿಸಲು ಭಾರತೀಯ ಸೇನೆ ಅನುವು ಮಾಡಿಕೊಟ್ಟಿಲ್ಲ. ಇದರ ಬೆನ್ನಲ್ಲೇ ಘರ್ಷಣೆ ಹೆಚ್ಚಾಗಿದೆ. ಈ ವೇಳೆ ಚೀನಾ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ಗುಂಡಿನ ದಾಳಿ ನಡೆಸಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದೆ. 

LAC ಪರ್ವತ ಹಾದಿಗಳನ್ನು ಚೀನಾ ಸೇನೆಗೂ ಮುನ್ನವೇ ಭಾರತೀಯ ಸೇನೆ ಹೀಗೆ ತಲುಪಬಹುದು ನೋಡಿ..!

ಈ ಘರ್ಷಣೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರು ಗಾಯಗೊಂಡಿದ್ದಾರೆ. ಘರ್ಷಣೆ ಬಳಿಕ ಕಮಾಂಡರ್ ಸುತ್ತಿನ ಮಾತುಕತೆ ನಡೆಸಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದರೂ, ಇಲ್ಲಿ ಮತ್ತೆ ಘರ್ಷಣೆ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಚೀನಾದ ಅತೀ ಹೆಚ್ಚಿನ ಯೋಧರು ಗಾಯಗೊಂಡಿದ್ದಾರೆ. ಕೆವಲರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಚೀನಾ ಮತ್ತೆ ಖ್ಯಾತೆ ತೆಗೆಯುವ ಸಾಧ್ಯೆತೆಗಳಿವೆ ಎಂದು ಮೂಲಗಳು ಹೇಳಿವೆ.

ಭಾರತಕ್ಕೆ ಸೇರಿದ ಭಾಗದಲ್ಲಿ 200 ಟೆಂಟ್‌ಗಳ ನಿರ್ಮಾಣ
ಪೂರ್ವ ಲಡಾಖ್‌ ಭಾಗದ ದೆಪ್ಸಾಂಗ್‌ನಲ್ಲಿ ಭಾರತಕ್ಕೆ ಸೇರಿದ ಜಾಗವನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಚೀನಾ, ಇದೀಗ ಅದೇ ಸ್ಥಳದಲ್ಲಿ ಕಳೆದೊಂದು ತಿಂಗಳಿನಿಂದ ಸದ್ದಿಲ್ಲದೆ 200 ಟೆಂಟ್‌ಗಳನ್ನು ನಿರ್ಮಾಣ ಮಾಡಿರುವುದು ಕಳವಳಕ್ಕೆ ಕಾರಣವಾಗಿದೆ. ಟೆಂಟ್‌ಗಳ ಜತೆಗೆ ಹೆಚ್ಚುವರಿ ಬಂಕರ್‌ ಹಾಗೂ ಸೇನಾ ಶಿಬಿರಗಳನ್ನೂ ನಿರ್ಮಾಣ ಮಾಡಿದೆ ಎಂದು ಭದ್ರತಾ ಸಂಸ್ಥೆಗಳ ಮೂಲಗಳು ಮಾಹಿತಿ ನೀಡಿವೆ.

India China Disengagement: ಲಡಾಖ್‌ನ ಗೋಗ್ರಾ, ಹಾಟ್‌ಸ್ಪ್ರಿಂಗ್‌ನಿಂದ ಚೀನಾ ಸೇನೆ ವಾಪಸ್‌..!

2020ರಲ್ಲಿ ಪೂರ್ವ ಲಡಾಖ್‌ನ ವಿವಿಧ ಭಾಗಗಳನ್ನು ಚೀನಾ ಆಕ್ರಮಿಸಿಕೊಂಡಿತ್ತು. ಹಲವಾರು ಸುತ್ತಿನ ಮಾತುಕತೆ ಬಳಿಕ ವಿವಿಧೆಡೆಯಿಂದ ಜಾಗ ಖಾಲಿ ಮಾಡಿತ್ತು. ಆದರೆ ದೆಪ್ಸಾಂಗ್‌ ಅನ್ನು ಮಾತ್ರ ತೆರವುಗೊಳಿಸಿರಲಿಲ್ಲ. ದೆಪ್ಸಾಂಗ್‌ ಎಂಬುದು ಭಾರತಕ್ಕೆ ವ್ಯೂಹಾತ್ಮಕವಾಗಿ ಮಹತ್ವದ ಸ್ಥಳ. ಚೀನಾ ವಶದಲ್ಲೇ ಇರುವ ಭಾರತದ ಅಕ್ಸಾಯ್‌ ಚಿನ್‌ ಇದೀಗ ಟೆಂಟ್‌ ನಿರ್ಮಾಣಗೊಂಡಿರುವ ದೆಪ್ಸಾಂಗ್‌ನ ಪೂರ್ವಕ್ಕಿದೆ. ಅದೇ ರೀತಿ ಭಾರತ-ಪಾಕಿಸ್ತಾನಗಳು ಕಾದಾಡುತ್ತಿರುವ ಸಿಯಾಚಿನ್‌ ಭಾಗವು ದೆಪ್ಸಾಂಗ್‌ನ ವಾಯವ್ಯ ದಿಕ್ಕಿಗಿದೆ. 2020ರ ಮೇನಲ್ಲಿ ಭುಗಿಲೆದ್ದ ಪೂರ್ವ ಲಡಾಖ್‌ ಸಂಘರ್ಷದ ಸಂದರ್ಭದಲ್ಲಿ ದೆಪ್ಸಾಂಗ್‌ ಪ್ರಾಂತ್ಯದಲ್ಲಿ ಭಾರತ ನಡೆಸುತ್ತಿದ್ದ ಐದು ಪರಂಪರಾಗತ ಕಾವಲು ಸ್ಥಳಗಳನ್ನು ಚೀನಾ ಕಡಿತಗೊಳಿಸಿದೆ. ಅವು ಇನ್ನೂ ಭಾರತ ವಶವಾಗಿಲ್ಲ.