ಭೋಪಾಲ್‌ನಲ್ಲಿ 8 ವರ್ಷದ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ಆತನ 51 ವರ್ಷದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿದ್ಯುತ್ ಕಡಿತದ ನಂತರ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂಬ ಚಿಂತೆಯಿಂದ ತಂದೆಗೆ ಹೃದಯಾಘಾತವಾಗಿದೆ.
ನವದೆಹಲಿ (ಮೇ.28): ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ 8 ವರ್ಷದ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ಶಾಕ್‌ಗೆ ಒಳಗಾದ ಆತನ ತಂದೆ, 51 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಸೋಮವಾರ ರಾತ್ರಿ (ಮೇ 26) ನಗರದ ಮಿಸ್‌ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ಜಟ್‌ಖೇಡಿ ಪ್ರದೇಶದಲ್ಲಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ರಿಷಿರಾಜ್ ಭಟ್ನಾಗರ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಈ ಪ್ರದೇಶದ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರು.
ಘಟನೆಯ ದಿನ ರಾತ್ರಿ ವ್ಯಕ್ತಿ ಕೆಳಗೆ ಬಂದು ತನ್ನ ಕಿರಿಯ ಮಗನನ್ನು ಕರೆದುಕೊಂಡು ಹೋಗಲು ಮುಂದಾಗಿದ್ದರು. ಬಳಿಕ ತನ್ನ ಮಗನಿಗೆ ಮನೆಗೆ ಹೋಗುವಂತೆ ತಿಳಿಸಿದಾಗ ಆತ ಲಿಫ್ಟ್ ಏರಿದ್ದ. ಆದರೆ ಕೆಲವು ಕ್ಷಣಗಳ ನಂತರ ವಿದ್ಯುತ್ ಕಡಿತಗೊಂಡಿತು. ಇದರಿಂದಾಗಿ ಆತನ ತಂದೆ ಶಾಕ್‌ಗೆ ಒಳಗಾಗಿದ್ದರಿಂದ ಅಲ್ಲಿಯೇ ಹೃದಯಾಘಾತವಾಗಿದೆ. ಆದರೆ, ಕಟ್ಟಡದ ವಿದ್ಯುತ್ ಕೆಲವೇ ನಿಮಿಷದಲ್ಲಿ ವಾಪಾಸ್ ಬಂದಿದ್ದು, ಮಗು ಲಿಫ್ಟ್‌ನಿಂದ ಸುರಕ್ಷಿತವಾಗಿ ಹೊರಬಂದಿದೆ.
ಮಿಸ್‌ರೋಡ್ ಪೊಲೀಸ್ ಠಾಣೆಯ ಉಸ್ತುವಾರಿ ಮನೀಶ್ ರಾಜ್ ಸಿಂಗ್ ಭದೌರಿಯಾ ಮಾತನಾಡಿದ್ದು, "ಮೇ 26 ರಂದು ರಾತ್ರಿ ಖಾಸಗಿ ಆಸ್ಪತ್ರೆಯಿಂದ ರಿಷಿ ಭಟ್ನಾಗರ್ ಎಂಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಗಿದೆ ಮತ್ತು ಅವರನ್ನು ಮೃತ ಎಂದು ಘೋಷಿಸಲಾಗಿದೆ. ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆ, ಘಟನೆ ನಡೆದ ದಿನ ರಾತ್ರಿ 10:30 ರ ಸುಮಾರಿಗೆ ಅವರು ತಮ್ಮ ಮಗನಿಗೆ ಮನೆಗೆ ಹೋಗಲು ಹೇಳಿದರು ಮತ್ತು ಸೂಚನೆಯನ್ನು ಅನುಸರಿಸಿ ಆತ ಲಿಫ್ಟ್ ಏರಿದ್ದ. ಈ ಮಧ್ಯೆ, ಕಟ್ಟಡದಲ್ಲಿ ವಿದ್ಯುತ್ ಕಡಿತಗೊಂಡಿತು ಮತ್ತು ಅವರು ತಮ್ಮ ಮಗು ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಚಿಂತಿಸಿ ರಿಷಿ ಶಾಕ್‌ಗೆ ಒಳಗಾಗಿದ್ದು, ಇದರ ಪರಿಣಾಮವಾಗಿ, ಅವರು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿ ಪ್ರಜ್ಞಾಹೀನರಾದರು' ಎಂದು ತಿಳಿಸಿದ್ದಾರೆ.
ನಂತರ, ಕಾಲೋನಿಯ ನಿವಾಸಿಗಳು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರನ್ನು ಮೃತ ಎಂದು ಘೋಷಿಸಲಾಯಿತು. ಪ್ರಾಥಮಿಕ ತನಿಖೆಯಲ್ಲಿ, ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿಯ ನಂತರ ನಿಜವಾದ ಕಾರಣ ತಿಳಿದುಬರುತ್ತದೆ ಎಂದು ಅವರು ಹೇಳಿದರು.
ಮಗುವಿನ ಬಗ್ಗೆ ಕೇಳಿದಾಗ, ಅಧಿಕಾರಿಯು ಅವನು ಸಂಪೂರ್ಣವಾಗಿ ಚೆನ್ನಾಗಿದ್ದಾನೆ ಮತ್ತು ಅವನಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ವಿದ್ಯುತ್ ಕಡಿತದಿಂದಾಗಿ ಲಿಫ್ಟ್ ನಿಂತಿತ್ತು. ಎರಡು-ಮೂರು ನಿಮಿಷಗಳಲ್ಲಿ, ವಿದ್ಯುತ್ ಪುನಃಸ್ಥಾಪನೆಯಾಯಿತು ಮತ್ತು ಅವನು ಲಿಫ್ಟ್‌ನಿಂದ ಸುರಕ್ಷಿತವಾಗಿ ಹೊರಬಂದಿದ್ದಾನೆ ಎಂದಿದ್ದಾರೆ.
