ದೆಹಲಿಯ ದ್ವಾರಕೆಯಲ್ಲಿನ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿದೆ. ಇಬ್ಬರು ಮಕ್ಕಳ ರಕ್ಷಿಸಲು ತಂದೆ 7ನೇ ಮಹಡಿಯಿಂದ ಹಾರಿದ ಘಟನೆ ನಡೆದಿದೆ. ಮುಂದೇನಾಯ್ತು?
ದೆಹಲಿ(ಜೂ.10) ಹಲವು ಕುಟುಂಬಗಳು ನೆಲೆಸಿದ್ದ ಅಪಾರ್ಟ್‌ಮೆಂಟ್ ಕಟ್ಟಟದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಭಾರಿ ಅವಘಡ ನಡೆದ ಘಟನೆ ವರದಿಯಾಗಿದೆ. ದೆಹಲಿಯ ದ್ವಾರಕಾ ಸೆಕ್ಟರ್ 13ರಲ ಅಪಾರ್ಟ್‌ಮೆಂಟ್ ಒಂದರಲ್ಲಿ ಭೀಕರ ಅಗ್ನಿ ದುರಂತ ನಡೆದಿದೆ. ಮನೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಮನೆಯೊಳಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳನ್ನು ಅಪಾಯದಲ್ಲಿ ಸುಲಿಕಿಸಿದೆ. ಹೊರಡೆ ಹೋಗಲು ಸಾಧ್ಯವಾಗದೇ, ಅತ್ತ ಬೆಂಕಿಯ ಕೆನ್ನಾಲಗೆಯಿಂದ ಮಕ್ಕಳ ಪ್ರಾಣ ಉಳಿಸಲು ಇಬ್ಬರು ಮಕ್ಕಳನ್ನು ಹಿಡಿದು ತಂದೆ 7ನೇ ಮಹಡಿಯಿಂದ ಜಿಗಿದಿದ್ದಾರೆ. ದುರದೃಷ್ಟವಶಾತ್ ಮೂವರು ಮೃತಪಟ್ಟಿದ್ದಾರೆ.
35 ವರ್ಷದ ಯಶ್ ಯಾದವ್ ತನ್ನ 10 ವರ್ಷದ ಮಗ ಹಾಗೂ ಕಿರಿಯ ಪುತ್ರಿಯನ್ನು ಬೆಂಕಿಯಿಂದ ರಕ್ಷಿಸಲು ಇನ್ಯಾವ ದಾರಿಯೂ ಉಳಿದಿರಲಿಲ್ಲ. ಬೆಂಕಿ ತೀವ್ರವಾಗುತ್ತಾ ಹೋಗಿದೆ. ರಕ್ಷಣೆ ಪಡೆಯಲು ಯಾವುದೇ ಸ್ಥಳ ಇರಲಿಲ್ಲ. ಅಲ್ಲೇ ಇದ್ದರೆ ಬೆಂಕಿಗೆ ಆಹುತಿಯಾಗುವುದು ಖಚಿತವಾಗಿತ್ತು. ಬೇರೆ ದಾರಿ ಕಾಣದ ತಂದೆ ಯಶ್ ಯಾದವ್ ಇಬ್ಬರು ಮಕ್ಕಳನ್ನು ಹಿಡಿದು 7ನೇ ಮಹಡಿಯಿಂದ ಜಿಗಿದಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಮಕ್ಕಳು ಹಾಗೂ ಯಶ್ ಯಾದವ್ ಮೃತಪಟ್ಟಿದ್ದಾರೆ.
ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಪ್ರಾರಂಭವಾದ ಬೆಂಕಿ ಕ್ಷಿಪ್ರವಾಗಿ ಕಟ್ಟಡದ ಮೇಲಿನ ಮಹಡಿಗಳಿಗೆ ಹರಡಿತು, ಇದರಿಂದ ನಿವಾಸಿಗಳು ತಪ್ಪಿಸಿಕೊಳ್ಳಲು ಹರಸಾಹಸಪಟ್ಟರು. ಕೆಳಕ್ಕೆ ಜಿಗಿದ ಮೂವರನ್ನು ತಕ್ಷಣವೇ ಐಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಮೂವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ಮೊದಲು ಇಬ್ಬರು ಮಕ್ಕಳು ಮಹಡಿಯಿಂದ ಜಿಗದರೆ ಕೊನೆಗೆ ತಂದೆಕೂಡ ಜಿಗಿದಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ. ಬಳಿಕ ಬೆಂಕಿ ನಂದಿಸಲು ಹರಸಾಹಸ ಮಾಡಬೇಕಾಗಿದೆ. ಹಲವು ಗಂಟೆಗಳ ಕಾಲ ಅಗ್ನಿಶಾಮಕ ದಳ ಸಿಬ್ಬಂದಿಗಳು ಪ್ರಯತ್ನ ಮಾಡಿದ್ದಾರೆ. ಬೆಂಕಿಯ ಕೆನ್ನಾಲಗಿ ತೀವ್ರವಾಗಿ ಹರಡಿ ಇಡೀ ಕಟ್ಟಡಕ್ಕೆ ಆವರಿಸಿತ್ತು. ಸದ್ಯ ಬೆಂಕಿ ನಂದಿಸಿದರೂ ದಟ್ಟ ಹೊಗೆ ಕಡಿಮೆಯಾಗಿಲ್ಲ. ಕಟ್ಟಡದೊಳಗೆ ಮತ್ಯಾರು ಸುಲಿಕಿದ್ದಾರೋ ಅನ್ನೋ ಕುರಿತು ಶೋಧ ಕಾರ್ಯ ಆರಂಭಗೊಂಡಿದೆ.
ದೆಹಲಿಯಲ್ಲಿ ಹಲವೆಡೆ ಅಗ್ನಿ ದುರಂತಗಳು ನಡೆದಿದೆ. ಪಿಂಕ್ ಲೈನ್‌ನಲ್ಲಿರುವ ತ್ರಿಲೋಕಪುರಿ ಸಂಜಯ್ ಲೇಕ್ ಮೆಟ್ರೋ ನಿಲ್ದಾಣದಲ್ಲಿ ಸೋಮವಾರದಂದು ಸಂಭವಿಸಿದ ಮತ್ತೊಂದು ಅಗ್ನಿ ಅವಘಡದಿಂದಾಗಿ ರೈಲು ಸಂಚಾರ ವಿಳಂಬವಾಗಿತ್ತು. ಈ ಘಟನೆಗಳು ದೆಹಲಿಯಾದ್ಯಂತ ವಸತಿ ಮತ್ತು ಸಾರ್ವಜನಿಕ ಸಾರಿಗೆ ಸೌಲಭ್ಯಗಳಲ್ಲಿ ಅಗ್ನಿಶಾಮಕ ಸಿದ್ಧತೆ ಮತ್ತು ಸುರಕ್ಷತಾ ಮೂಲಸೌಕರ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.