ಅಯ್ಯೋ ವಿಧಿಯೇ: ಭೂಕುಸಿತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡಿದ್ದ ಶ್ರುತಿಯ ಭಾವಿಪತಿಯೂ ಅಪಘಾತದಲ್ಲಿ ಸಾವು
ಕೇರಳದ ವಯನಾಡ್‌ನ ಚೂರಲ್ಮಲದಲ್ಲಿ ಜುಲೈ 30 ರಂದು ನಡೆದ ಭೂಕುಸಿತದಲ್ಲಿ ತನ್ನ ತಂದೆ ತಾಯಿ ಸೋದರಿ ಸೇರಿದಂತೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದ ಯುವತಿಗೆ ಮತ್ತೊಂದು ಆಘಾತ ಎದುರಾಗಿದ್ದು, ಭೂಕುಸಿತ ಘಟನೆ ನಡೆದು ಸರಿಸುಮಾರು ಒಂದು ತಿಂಗಳ ಬಳಿಕ ಈಗ ಅವರು ತಮ್ಮ ಭಾವಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ.
ವಯನಾಡ್: ಕೇರಳದ ವಯನಾಡ್‌ನ ಚೂರಲ್ಮಲದಲ್ಲಿ ಜುಲೈ 30 ರಂದು ನಡೆದ ಭೂಕುಸಿತದಲ್ಲಿ ತನ್ನ ತಂದೆ ತಾಯಿ ಸೋದರಿ ಸೇರಿದಂತೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದ ಯುವತಿಗೆ ಮತ್ತೊಂದು ಆಘಾತ ಎದುರಾಗಿದ್ದು, ಭೂಕುಸಿತ ಘಟನೆ ನಡೆದು ಸರಿಸುಮಾರು ಒಂದು ತಿಂಗಳ ಬಳಿಕ ಈಗ ಅವರು ತಮ್ಮ ಭಾವಿ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. ಒಂದು ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಬರಸಿಡಿಲಿನಂತೆ ಬಂದೆರಗಿದ ಮತ್ತೊಂದು ಆಘಾತದಿಂದ ಯುವತಿ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಚೂರಲ್ಮಲದ ನಿವಾಸಿ 24 ವರ್ಷ ಶ್ರುತಿ ಎಂಬುವವರೇ ಹೀಗೆ ಎಲ್ಲರನ್ನು ಕಳೆದುಕೊಂಡು ಒಂಟಿಯಾದ ನತದೃಷ್ಟ ಯುವತಿ. ವಯನಾಡ್ ಭೂಕುಸಿತದಲ್ಲಿ ತನ್ನವರೆಲ್ಲರನ್ನು ಕಳೆದುಕೊಂಡಿದ್ದ ಆಕೆಗೆ ಬದುಕುವ ಭರವಸೆ ನೀಡಿದ್ದು, ಆಕೆಯ ಭಾವಿ ಪತಿ ಹಾಗೂ ಬಾಲ್ಯದ ಗೆಳೆಯ 24 ವರ್ಷದ ಜೀಸನ್ ಅವರು. ಆದರೆ ಈಗ ಅವರು ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದು, ಶ್ರುತಿ ಬದುಕಿನ ಕೊನೆಯ ಭರವಸೆಯೂ ಕೂಡ ಇದರಿಂದ ನಂದಿದಂತಾಗಿದೆ.
Wayanad Landslide: ಮೃತ 58 ಮಂದಿಗೆ ವಾರಸುದಾರರೇ ಇಲ್ಲ, ಸರ್ಕಾರದ ಬಳಿಯೇ ಉಳಿದ ಪರಿಹಾರ ಹಣ!
ಬಾಲ್ಯದ ಗೆಳೆಯರಾದ ಶ್ರುತಿ ಹಾಗೂ ಜೀಸನ್ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಯ ಶಾಪಿಂಗ್‌ಗಾಗಿ ಇಬ್ಬರು ಕಾರಿನಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮಂಗಳವಾರ ಮಧ್ಯಾಹ್ನ ಜೀಸನ್ ಅವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ವಯನಾಡ್‌ನ ಕಲ್ಪೆಟ್ಟ ಬಳಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಜೀಸನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರಿಂದ ಶ್ರುತಿಯವರ ಬದುಕಿನ ಭರವಸೆಯೇ ಭಗ್ನವಾಗಿದೆ. ಕಾರಿನಲ್ಲಿದ್ದ ಇತರರು ಸಣ್ಣ ಪುಟ್ಟ ಗಾಯಗಳಿಂದಾಗಿ ಅನಾಹುತದಿಂದ ಪಾರಾಗಿದ್ದಾರೆ.
ಇಬ್ಬರು ಅನ್ಯಧರ್ಮಕ್ಕೆ ಸೇರಿದವರಾಗಿದ್ದು, ಬಾಲ್ಯದಿಂದಲೂ ಸಹಪಾಠಿಗಳಾಗಿದ್ದರು ಇವರ ಮದುವೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಭೂಕುಸಿತ ಸಂಭವಿಸುವ ಒಂದು ತಿಂಗಳ ಮೊದಲಷ್ಟೇ ಶ್ರುತಿ ಅವರ ಕುಟುಂಬ ಚೂರಲ್ಮಲದಲ್ಲಿ ಹೊಸದಾಗಿ ನಿರ್ಮಿಸಿದ ಮನೆಗೆ ಶಿಫ್ಟ್ ಆಗಿದ್ದರು. ಜೊತೆಗೆ ಆ ಮನೆಯಲ್ಲೇ ವಿವಾಹ ನಿಶ್ಚಿತಾರ್ಥವನ್ನು ಕೂಡ ನಡೆಸಿದ್ದರು.
ಭೂಕುಸಿತದ ನಂತರ ಟಿವಿ ಚಾನೆಲೊಂದರಲ್ಲಿ ಮಾತನಾಡಿದ ಜೇಸನ್, ಕಳೆದ 10 ವರ್ಷಗಳಿಂದಲೂ ನಾವು ಸ್ನೇಹಿತರು, ಆದರೆ ಈಗ ನಾವು ಶೂನ್ಯದಿಂದ ಬದುಕು ಆರಂಭಿಸಬೇಕಿದೆ. ಆದರೆ ನಾವು ಖುಷಿಯಿಂದ ಬದುಕುತ್ತೇವೆ. ನಾವು ಆಕೆಯನ್ನು ಒಬ್ಬಂಟಿಯಾಗಲು ಬಿಡುವುದಿಲ್ಲ, ನಾನು ಯಾವಾಗಲೂ ಆಕೆಯನ್ನು ನನ್ನ ಹೃದಯಕ್ಕೆ ಹತ್ತಿರವಿರುವಂತೆ ಹಿಡಿದುಕೊಳ್ಳುವೆ. ಆಕೆಗೊಂದು ಉದ್ಯೋಗ ಹಾಗೂ ಮನೆ ಕಟ್ಟುವುದು ನಮ್ಮ ಕನಸು, ನನ್ನ ಸಾವಿನ ನಂತರ ಆಕೆ ಒಬ್ಬಂಟಿಯಾಗಬಾರದು. ಆಕೆಗೊಂದು ಕೆಲಸ ಇರಬೇಕು ಎಂದು ಜೇನ್ಸಿನ್ ಹೇಳಿದ್ದರು. ಆದರೆ ಶ್ರುತಿ ಬದುಕಿಗೆ ಅಷ್ಟೊಂದು ಭರವಸೆ ತುಂಬಿದ್ದ ಜೇಸನ್ ಅವರೇ ಈಗ ಬದುಕಿಲ್ಲ.
ಜುಲೈ 30 ರಂದು ಸಂಭವಿಸಿದ ವಯನಾಡ್ ಭೂಕುಸಿತದಲ್ಲಿ ಶ್ರುತಿಯವರು ಮೇಸ್ತ್ರಿಯಾಗಿದ್ದ ತಮ್ಮ ತಂದೆ ಶಿವಣ್ಣ, ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಸವೀತಾ, ಕಾಲೇಜಿನಲ್ಲಿ ಓದುತ್ತಿದ್ದ ಸೋದರಿ ಶ್ರೇಯಾ ಹಾಗೂ ಮದುವೆಗಾಗಿ ಮಾಡಿಸಿಟ್ಟಿದ್ದ 15 ಪವನ್ ಬಂಗಾರ, 4 ಲಕ್ಷ ರೂಪಾಯಿ ನಗದು, ಶ್ರುತಿಯವರ ತಂದೆ ಹೊಸದಾಗಿ ಕಟ್ಟಿದ ಮನೆಯನ್ನು ಕಳೆದುಕೊಂಡಿದ್ದರು. ಆದರೆ ಶ್ರುತಿಯವರು ಕೋಜಿಕೋಡ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಿದ್ದರಿಂದಾಗಿ ಆ ಸಮಯದಲ್ಲಿ ಅವರು ಮನೆಯಲ್ಲಿಲ್ಲದ ಕಾರಣ ಅನಾಹುತದಿಂದ ಪಾರಾಗಿದ್ದರು. ಶ್ರುತಿಯವರ ಚಿಕ್ಕಪ್ಪ ಸಿದ್ದರಾಜು ಅವರ ಪತ್ನಿ ದಿವ್ಯ ಹಾಗೂ ಅವರ ಪುತ್ರನೂ ಈ ಪ್ರವಾಹದಲ್ಲಿ ಸಾವನ್ನಪ್ಪಿದ್ದ. ಆದರೆ ಇವರ ಪುತ್ರಿ ಲಾವಣ್ಯ ನವೋದಯ ಶಾಲೆಯಲ್ಲಿ ಓದುತ್ತಿದ್ದರಿಂದಾಗಿ ಶ್ರುತಿಯಂತೆ ಆಕೆಯೂ ಕೂಡ ಈ ಭೂಕುಸಿತ ದುರಂತದಿಂದ ಪಾರಾಗಿದ್ದರು.
ಇತ್ತ ಶ್ರುತಿ ಹಾಗೂ ಜೀಸನ್ ಅವರು ಡಿಸೆಂಬರ್‌ನಲ್ಲಿ ಮದುವೆಯಾಗುವವರಿದ್ದರು. ಆದರೆ ದುರಂತದ ನಂತರ ಮದುವೆಯನ್ನು ಮುಂದೂಡಲು ಜೀಸನ್ ಕುಟುಂಬದವರು ನಿರ್ಧರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಅಂಬಲವಯಲ್ ಪಂಚಾಯತ್ ಸದಸ್ಯ ಕೃಷ್ಣಕುಮಾರ್ ಮಾತನಾಡಿ, ಇಬ್ಬರು ಮದುವೆಯ ಸಿದ್ಧತೆಗಾಗಿ ಜೊತೆಯಾಗಿ ಪಯಣಿಸುತ್ತಿದ್ದರು. ನಾವು ಸಣ್ಣದಾಗಿ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೆವು. ವಯನಾಡ್‌ನ ಜನಪ್ರತಿನಿಧಿಗಳು ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿದ್ದರು. ಆದರೆ ಭೂಕುಸಿತ ದುರಂತದ ನಂತರ ಜೇನ್ಸಿನ್ ಸದಾ ಶ್ರುತಿಯ ಜೊತೆಗೆ ಇರುತ್ತಿದ್ದ. ಮೊದಲಿಗೆ ಪರಿಹಾರ ಕ್ಯಾಂಪ್‌ನಲ್ಲಿದ್ದ ಶ್ರುತಿ ನಂತರ ಕಲ್ಪೆಟದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ದರು. ಜೇನ್ಸಿನ್ ತನ್ನ ಜೊತೆಗಿರುವುದರಿಂದ ನನ್ನ ಪೋಷಕರು ನಾನು ಒಂಟಿಯಾಗಿಲ್ಲ ಎಂದು ಖುಷಿ ಪಡುತ್ತಾರೆ ಎಂದು ಶ್ರುತಿ ಆಗ ಹೇಳಿಕೊಂಡಿದ್ದರು. ಆದರೆ ಈಗ ಜೀವಕ್ಕೆ ಜೊತೆಯಾಗುವೆ ಸದಾ ಜೊತೆಗಿರುವೆ ಎಂದ ಗೆಳೆಯನೇ ಬಿಟ್ಟು ಜೀವನ ಯಾತ್ರೆ ಮುಗಿಸಿ ಹೊರಟು ಹೋಗಿದ್ದು, ಬದುಕಿನ ಕೊನೆಯದೊಂದು ಭರವಸೆಯನ್ನು ಕಳೆದುಕೊಂಡು ಶ್ರುತಿ ಕಂಗಾಲಾಗಿದ್ದಾರೆ.