Asianet Suvarna News Asianet Suvarna News

ವಯನಾಡ್‌ನ ಜನರ ರಕ್ಷಣೆಗೆ ನಿಂತ ಇವರನ್ನು ಬಿಪಿನ್‌ ರಾವತ್‌ ಕರೆದಿದ್ದು, 'ದಿ ಮೋಸ್ಟ್ ಫಿಯರ್‌ಲೆಸ್ ಮ್ಯಾನ್‌ ರಿಷಿ ರಾಜಲಕ್ಷ್ಮೀ!'

lieutenant colonel rishi rajalakshmi ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದ್ದಾಗ ಅಲ್ಲಿ ರಕ್ಷಣೆಗೆ ನಿಂತಿದ್ದು, ಅದೇ ನೆಲದ ಲೆಫ್ಟಿನೆಂಟ್‌ ಕರ್ನಲ್‌ ರಿಷಿ ರಾಜಲಕ್ಷ್ಮೀ. ಭಯೋತ್ಪಾದನೆ ಕಾರ್ಯಾಚರಣೆಯಲ್ಲಿ ತಮ್ಮ ಮುಕ್ಕಾಲು ಪಾಲು ಮುಖವನ್ನೇ ಕಳೆದುಕೊಂಡಿದ್ದ ಇವರು, ತನ್ನ ಮುಖವನ್ನು ಮಾಸ್ಕ್‌ನ ಸಹಾಯದಿಂದ ಮುಚ್ಚಿಡುತ್ತಾರೆ.

Lieutenant Colonel Rishi Rajalakshmi Who Called Bipin Rawat by most fearless man  san
Author
First Published Aug 15, 2024, 10:32 PM IST | Last Updated Aug 15, 2024, 10:40 PM IST

ಬೆಂಗಳೂರು (ಆ.15): ಸುಮ್ಮನೆ ಗೂಗಲ್‌ನಲ್ಲಿ ರಿಷಿ ರಾಜಲಕ್ಷ್ಮೀ ಎಂದು ಸರ್ಚ್‌ ಮಾಡಿ ನೋಡಿ. ಸ್ಫುರದ್ರೂಪಿಯಾದ ಹುಡುಗನೊಬ್ಬ ಗನ್‌ ಹಿಡಿದು ನಿಂತ ಚಿತ್ರ ಪ್ರಕಟವಾಗುತ್ತದೆ. ಅದರೊಂದಿಗೆ ಇನ್ನೊಂದು ಚಿತ್ರದಲ್ಲಿ ಮಾಸ್ಕ್‌ ಹಾಕಿಕೊಂಡಿರುವ ಮತ್ತೊಂದು ಚಿತ್ರ ಬರುತ್ತದೆ. ಹಾಗಂತೆ ಅವೆರಡೂ ಬೇರೆ ಬೇರೆ ಚಿತ್ರಗಳಲ್ಲ. ಇಬ್ಬರೂ ಒಬ್ಬರೇ. ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ವೇಳೆ ತನ್ನ ಮೂಗು ಹಾಗೂ ಗಲ್ಲವನ್ನು ಸಂಪೂರ್ಣವಾಗಿ ಆತ ಕಳೆದುಕೊಂಡಿದ್ದ ಇವರಿಗೆ ಆರ್ಮಿ ಹಾಸ್ಪಿಟಲ್‌ನಲ್ಲಿ 23 ಶಸ್ತ್ರಚಿಕಿತ್ಸೆ ನಡೆದಿದ್ದವು. ಆದರೆ, ಮುಖ ಮೊದಲಿನಂತೆ ಬರಲೇ ಇಲ್ಲ. ಹಾಗಂತ ಸೇನೆಗೆ ವಿದಾಯ ಹೇಳುವ ಮನಸ್ಸಿರಲಿಲ್ಲ. ವಿಕಾರವಾದ ಮುಖವನ್ನು ಜನರಿಗೆ ತೋರಿಸೋಕು ಇಷ್ಟವಿರಲಿಲ್ಲ. ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಸೇನೆಯ ಸಮವಸ್ತ್ರ ಧರಿಸಿದ್ದರು ಇವರನ್ನು ದೇಶದ ಮೊದಲ ಸಿಡಿಎಸ್‌ ದಿವಂಗತ ಬಿಪಿನ್‌ ರಾವತ್‌ ಹೆಮ್ಮೆಯಿಂದ ' ದಿ ಮೋಸ್ಟ್ ಫಿಯರ್‌ಲೆಸ್ ಮ್ಯಾನ್‌ ರಿಷಿ ರಾಜಲಕ್ಷ್ಮೀ..' ಎಂದು ಕರೆದಿದ್ದರು. ಇದೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ಇತ್ತೀಚೆಗೆ ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮರಳಿದ ಭಾರತ ಸೇನಾ ತಂಡದಲ್ಲಿ ಲೆಫ್ಟಿನೆಂಟ್‌ ಕರ್ನಲ್ ರಿಷಿ ರಾಜಲಕ್ಷ್ಮೀ ಇದ್ದರು. ಅದೆಂಥಾ ಪರಿಸ್ಥಿತಿಯಲ್ಲೂ ಅವರು ತಮ್ಮ ಮುಖದ ಚರ್ಮದಂತಿದ್ದ ಮಾಸ್ಕ್‌ ತೆಗೆದಿರಲೇ ಇಲ್ಲ. ಆಗಲೇ ಜನರಿಗೆ ಗೊತ್ತಾಗಿದ್ದು ಈತ ನಮ್ಮೂರ ಹುಡುಗ ರಿಷಿ ರಾಜಲಕ್ಷ್ಮೀ ಅನ್ನೋದು.

ಕೇರಳದ ಅಲ್ಲಪುಳ ನಿವಾಸಿ ರಿಷಿ ರಾಜಲಕ್ಷ್ಮೀ. ಇಂಜಿನಿಯರಿಂಗ್‌ ಪದವಿ ಪಡೆದಿದ್ದ. ಬೇಕಾದಂತೆ ಐಷಾರಾಮಿ ಜೀವನ ನಡೆಸಬಹುತ್ತಿತ್ತು. ಕೇರಳ ವಿದ್ಯುತ್‌ ಇಲಾಖೆ, ಏರ್‌ ಇಂಡಿಯಾ ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದರು. ಆದರೆ, ಬದುಕಿನಲ್ಲಿದ್ದು ದೇಶಸೇವೆ ಮಾಡುವ ಅದಮ್ಯ ಗುರಿ ಮಾತ್ರ. ಅದಕ್ಕಾಗಿ ಎಲ್ಲದಕ್ಕೂ ರಾಜೀನಾಮೆ ನೀಡಿ ಸೇನೆಗೆ ಎಂಟ್ರಿ ಪಡೆದುಕೊಂಡರು. ಅಂದಿನಿಂದ ಇವರ ಜೀವನ ಸಿನಿಮಾ ಶೈಲಿಯಲ್ಲೇ ಸಾಗುತ್ತದೆ.

ಒಳ್ಳೆ ಕೆಲಸ ಇತ್ತಲ್ವಾ, ಸೇನೆಯನ್ನ ಆಯ್ಕೆ ಮಾಡಿಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆಗಳು ಎದುರಾದಾಗ ರಿಷಿ ಹೇಳಿದ್ದು ಒಂದೇ ಮಾತು, 'ಕೇವಲ ಉದ್ಯೋಗಕ್ಕಾಗಿ ಭಾರತೀಯ ಸೇನೆಗೆ ನೀನು ಸೇರಬೇಡ, ನಿನ್ನ ಉದ್ದೇಶ ದೇಶಪ್ರೇಮವಾಗಿದ್ದರೆ ಮಾತ್ರ ನೀನು ಸೈನಿಕ‌ನಾಗು...' ಎಂದು ತಾಯಿ ಹೇಳಿದ್ದ ಮಾತನ್ನೇ ನಾನು ಪಾಲಿಸಿದೆ. ನನ್ನ ಬದುಕಿನಲ್ಲಿ ಆಕೆಯಷ್ಟು ಆದರ್ಶ ಕೊಟ್ಟ ಮಹಿಳೆ ನೋಡಿಯೇ ಇಲ್ಲ. ಇದಕ್ಕಾಗಿಯೇ ರಿಷಿ ತನ್ನ ತಾಯಿಯ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದರು. ಅಂದಿನಿಂದ ಇವರ ಹೆಸರು ರಿಷಿ ನಾಯರ್‌ ಬದಲಾಗಿ, ರಿಷಿ ರಾಜಲಕ್ಷ್ಮೀ ಎನಿಸಿಕೊಂಡಿತು.

ಅದು 2017ರ ಮಾರ್ಚ್‌ 4. ಕಾಶ್ಮೀರದ ಟ್ರಾಲ್‌ನಲ್ಲಿ ನಡೆದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ. ಮೇಜರ್‌ ಆಗಿ ಅಂದು ತನ್ನ ಪಡೆಯನ್ನು ರಿಷಿ ಮುನ್ನಡೆಸಿದ್ದರು. ದೀರ್ಘಕಾಲದಿಂದ ಸೇನೆಯ ಟಾರ್ಗೆಟ್‌ನಲ್ಲಿದ್ದ ಅಕ್ಯೂಬ್‌ ಮೌಲ್ವಿ ಸೇರಿದಂತೆ ಹಲವು ಭಯೋತ್ಪಾದಕರು ಮನೆಯಲ್ಲಿ ಇದ್ದಿದ್ದು ಗೊತ್ತಾಗಿತ್ತು. ಶರಣಾಗತಿಯ ಯಾವ ಆದೇಶವನ್ನು ಪಾಲಿಸದೇ ಇದ್ದಾಗ, ರಿಷಿ ರಾಜಲಕ್ಷ್ಮೀ ನೇತೃತ್ವದ ಟೀಮ್‌ ಎನ್‌ಕೌಂಟರ್‌ ಕಾರ್ಯಾಚರಣೆ ಆರಂಭಿಸಿತು. ಇಡೀ ಮನೆಗೆ ಬೆಂಕಿಯಟ್ಟು ಎಲ್ಲ ಭಯೋತ್ಪಾದಕರನ್ನು ಹೊರಹಾಕುವ ಪ್ರಯತ್ನ ಮಾಡಿತು. ಇದೂ ಕೂಡ ವರ್ಕ್‌ಔಟ್‌ ಆಗದೇ ಇದ್ದಾಗ, ಮನೆಯನ್ನು ಬಾಂಬ್‌ನಿಂದ ಧ್ವಂಸ ಮಾಡಿ, ಭಯೋತ್ಪಾದಕರನ್ನು ಕೊಲ್ಲುವ ನಿರ್ಧಾರ ಮಾಡಲಾಯಿತು.

ಮನೆಯ ಒಳ ಹೋಗುವಾಗ ರಿಷಿಯ ಬ್ಯಾಗ್‌ನಲ್ಲಿ 10 ಕೆಜಿ ಸ್ಪೋಟಕಗಳಿದ್ದವು. ಈ ವೇಳೆ ಟಾಪ್‌ ಫ್ಲೋರ್‌ನಲ್ಲಿದ್ದ ಉಗ್ರನೊಬ್ಬ ರಿಷಿ ಮೇಲೆ ಗುಂಡು ಹಾರಿಸಿದ. ಮೊದಲ ಬುಲೆಟ್‌ ಹೆಲ್ಮೆಟ್‌ನಿಂದ ಪಾಸ್‌ ಆಗಿ ರಿಷಿಯ ಮೂಗನ್ನೇ ಕತ್ತರಿಸಿ ಹಾಕಿತ್ತು. ತಲೆ ಮೇಲೇತ್ತಿ ನೋಡಿದಾಗ ಇನ್ನೊಂದು ಗುಂಡು ನೇರವಾಗಿ ಗಲ್ಲಕ್ಕೆ ಬಿದ್ದಿತ್ತು. ಮುಖದಲ್ಲಿ ಜೀವವೇ ಇದ್ದಿರಲಿಲ್ಲ. ರಕ್ತಸಿಕ್ತವಾಗಿದ್ದ ಇಡೀ ಮುಖದಲ್ಲಿ ಕಾಣುತ್ತಿದ್ದದ್ದು ಭಯವೇ ಇಲ್ಲದ ಎರಡು ಕಣ್ಣುಗಳು ಮಾತ್ರ. ಸಹ ಸೈನಿಕರನ್ನು ಕರೆಯದೇ ಮುಂದುವರಿದ ರಿಷಿ ಭಯೋತ್ಪಾದಕನ ಹೆಡೆಮುರಿ ಕಟ್ಟಿದ್ದರು. ಆದರೆ, ರಿಷಿ ಫೇಸ್‌ ಮೊದಲಿನ ಹಾಗೆ ಇದ್ದಿರಲಿಲ್ಲ. ರಿಷಿಯ ಮುಖವನ್ನು ನೋಡಿದ ವೈದ್ಯರು ಕೂಡ ಇನ್ನೆಂದೂ ಈತನ ಮುಖವನ್ನು ಕೂಡ ನೋಡೋಕೆ ಸಾಧ್ಯವಾಗೋದಿಲ್ಲ ಎಂದಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಿ ಒಂದು ಹಂತಕ್ಕೆ ಮುಖವನ್ನು ಸಿದ್ಧಮಾಡುವ ಭರವಸೆ ಕೊಟ್ಟಿದ್ದರು. ಅಂದು ಶ್ರೀನಗರದ ಸೇನಾ ಆಸ್ಪತ್ರೆಗೆ ರಿಷಿ ರಾಜಲಕ್ಷ್ಮೀಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದಾಗ, ಆತ ಥಂಬ್ಸ್‌ ಅಪ್‌ ಚಿಹ್ನೆ ತೋರಿಸ್ತಿದ್ದ ಎಂದು ವೈದ್ಯರು ಈಗಲೂ ಹೇಳುತ್ತಾರೆ..!

ವಯನಾಡಲ್ಲಿ 24 ಗಂಟೆಯೊಳಗೆ ಸೇತುವೆ ನಿರ್ಮಿಸಿದ ಭಾರತೀಯ ಸೇನೆ: ಮೇಲುಸ್ತುವಾರಿ ವಹಿಸಿದ್ದು ಮಹಿಳಾ ಮೇಜರ್

ಶ್ರೀನಗರದಿಂದ ದೆಹಲಿಯ ಸೇನಾ ಆಸ್ಪತ್ರೆಗೆ ಶಿಫ್ಟ್‌ ಆದ ರಿಷಿ ರಾಜಲಕ್ಷ್ಮೀಗೆ ವೈದ್ಯರು 23 ಶಸ್ತ್ರಚಿಕಿತ್ಸೆ ಮಾಡಿದ್ದರು. ಚೇತರಿಕೆ ಕಂಡ ಬಳಿಕ ಮತ್ತೆ ಸೇನಾ ಸಮವಸ್ತ್ರ ಧರಿಸಿದ್ದರು. ಆದರೆ, ದೇಶದ ಮುಖವನ್ನು ಉಳಿಸುವ ಸಲುವಾಗಿ ಶಾಶ್ವತವಾಗಿ ತನ್ನ ಮುಖವನ್ನೇ ಮುಚ್ಚಿಕೊಳ್ಳಲು ಅವರು ನಿರ್ಧಾರ ಮಾಡಿದ್ದರು.

'ಮನೆ ಕಟ್ಬೇಕು, ಅಪ್ಪ ಆಗ್ಬೇಕು.. 50 ವರ್ಷ ಜೊತೆಯಾಗಿ ಬದುಕಬೇಕು..' ನನ್ನ ಗಂಡನಿಗೆ ಇದೇ ಕನಸಾಗಿತ್ತು!

ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು ಅಸಹಾಯಕರಾಗಿ ನಿಂತಿದ್ದ ವ್ಯಕ್ತಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದವರು ರಿಷಿ ರಾಜಲಕ್ಷ್ಮೀ, ಕಾರ್ಯಾಚರಣೆ ಮುಗಿಸಿ ಹೊರಡುವಾಗ ಅವರು ಹೇಳಿದ್ದು ಒಂದೇ ಮಾತು, ಭಾರವಾದ ಹೃದಯದೊಂದಿಗೆ ನಾನು ವಯನಾಡ್‌ಅನ್ನು ತೊರೆಯುತ್ತಿದ್ದೇನೆ ಎಂದಿದ್ದರು. ಪ್ರಸ್ತುತ ಪಂಗೋಡ್‌ ಮಿಲಿಟಿರಿ ಕ್ಯಾಂಪ್‌ನ ಚೀಫ್‌ ಆಗಿ ಅವರು ಕರ್ತವ್ಯ ಸಲ್ಲಿಸುತ್ತಿದ್ದಾರೆ. ಇಂಥ ನಿಜ ಹೀರೋಗಳ ಕಥೆ ಕೇಳಿದಾಗಲೇ, ಭಾರತವನ್ನು ಯಾರೂ ಏನೂ ಮಾಡಲಾಗದು ಅನ್ನೋ ಧೈರ್ಯ ಪ್ರತಿ ನಾಗರೀಕನಿಗೆ ಬರುತ್ತದೆ ಅನ್ನೋದು ಸತ್ಯ.

Latest Videos
Follow Us:
Download App:
  • android
  • ios