ನವದೆಹಲಿ(ಡಿ.01): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ಕಾಯ್ದೆಗಳ ವಿರುದ್ಧ ಪಂಬಾಬ್‌ ಹಾಗೂ ಹರ್ಯಾಣ ಕೃಷಿಕರು ದಿಲ್ಲಿ ಪ್ರವೇಶಿಸುವ ರಸ್ತೆಗಳಲ್ಲಿ ನಡೆಸುತ್ತಿರುವ ಚಳವಳಿ ಸೋಮವಾರ 5ನೇ ದಿನ ಪೂರೈಸಿದೆ. ಇದರ ನಡುವೆಯೇ, ಇವರ ಹೋರಾಟಕ್ಕೆ ಸಾಥ್‌ ನೀಡಲು ಉತ್ತರ ಪ್ರದೇಶದ ರೈತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಹೊಂದಿಕೊಂಡಿರುವ ಗಾಜಿಪುರ ಗಡಿಯಲ್ಲಿ ಪೊಲೀಸರು ಕಾಂಕ್ರೀಟ್‌ ತಡೆಗೋಡೆಗಳನ್ನು ಇರಿಸಿ, ಗಡಿ ಸೀಲ್‌ ಮಾಡಿದ್ದಾರೆ ಹಾಗೂ ಭದ್ರತೆ ಹೆಚ್ಚಿಸಿದ್ದಾರೆ.

ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಿದೆ: ಮೋದಿ

ಈ ನಡುವೆ, ಸುದ್ದಿಗಾರರ ಜತೆ ಮಾತನಾಡಿದ ರೈತ ನಾಯಕರು, ನಿರ್ಣಾಯಕ ಸಮರ ನಡೆಸುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮನ್‌ ಕೀ ಬಾತ್‌ ಕೂಡ ಕೇಳಬೇಕು. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎನ್ನುವ ಮೂಲಕ ದೆಹಲಿ ಬಿಟ್ಟು ಕದಲುವುದಿಲ್ಲ ಎಂದು ಗುಡುಗಿದ್ದಾರೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಆಡಳಿತಾರೂಢ ಪಕ್ಷ ಭಾರಿ ಬೆಲೆ ತೆರಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

"

ಇದೇ ವೇಳೆ, ಹರ್ಯಾಣ ಗಡಿಯಲ್ಲಿನ ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ರೈತರು ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸರ್ಕಾರದ ಸೂಚನೆಯಂತೆ ಪ್ರತಿಭಟನೆಯ ನಿಗದಿತ ಸ್ಥಳವಾದ ಬುರಾರಿ ಮೈದಾನಕ್ಕೆ ತೆರಳಲು ನಿರಾಕರಿಸಿದ್ದು, ‘ಜಂತರ್‌ ಮಂತರ್‌ಗೆ ತೆರಳಲು ಅವಕಾಶ ನೀಡಿದರಷ್ಟೇ ಇಲ್ಲಿಂದ ಹಿಂದೆ ನಿರ್ಗಮಿಸುತ್ತೇವೆ’ ಎಂದಿದ್ದಾರೆ. ಕೆಲವು ರೈತರು ಬುರಾರಿ ಮೈದಾನದಲ್ಲೂ ಬೀಡುಬಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ.

ಒಟ್ಟಾರೆ ಈ ಪ್ರತಿಭಟನೆಯಿಂದಾಗಿ ಗಡಿ ರಸ್ತೆಗಳು ಬಂದ್‌ ಆಗಿ ಈ ಭಾಗದಲ್ಲಿ ಭಾರೀ ಟ್ರಾಫಿಕ್‌ ಸಮಸ್ಯೆ ಆಗುತ್ತಿದೆ.

ಕೃಷಿ ಮಂಡಿ ರದ್ದು ಮಾಡಿಲ್ಲ, ಬೆಂಬಲ ಬೆಲೆಯೂ ನಿಂತಿಲ್ಲ: ರೈತರಿಗೆ ಮೋದಿ ಅಭಯ!

ವೈದ್ಯರ ಕ್ಯಾಂಪ್‌:

ಪ್ರತಿಭಟನೆ ನಡೆಯುತ್ತಿರುವ ಸಿಂಘ-ಸಿಕ್ರಿ ಗಡಿ ಹೆದ್ದಾರಿಯಲ್ಲಿ ವೈದ್ಯರಿಬ್ಬರು ಕ್ಯಾಂಪ್‌ ಹಾಕಿದ್ದಾರೆ. ‘ಈ ರೈತರಿಗೆ ಕೊರೋನಾ ಬಗ್ಗೆ ಅಷ್ಟುಅರಿವಿಲ್ಲ. ಹೀಗಾಗಿ ಜ್ವರ, ಕೆಮ್ಮು, ನೆಗಡಿಗೆ ಔಷಧಿಗಳನ್ನು ಇಟ್ಟುಕೊಂಡಿದ್ದು, ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್‌ ಹಂಚುತ್ತಿದ್ದೇವೆ’ ಎಂದು ವೈದ್ಯೆ ಡಾ| ಸಾರಿಕಾ ಶರ್ಮಾ ತಿಳಿಸಿದ್ದಾರೆ.

ಸಚಿವರ ಮನವಿ:

ಈ ನಡುವೆ, ಯಾವುದೇ ಷರತ್ತಿಲ್ಲದೇ ಮಾತುಕತೆಗೆ ಸರ್ಕಾರ ಸಿದ್ಧ ಎಂದು ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.