ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಿದೆ: ಮೋದಿ

ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಿದೆ: ಮೋದಿ| ರೈತರ ಪ್ರತಿಭಟನೆ ಸಂದರ್ಭವೇ ಸಮರ್ಥನೆ

PM Modi defends farm bills amid massive protests by farmers pod

ನವದೆಹಲಿ(ನ 30): ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಚಲೋ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಾರಿಯಾದ ಅಲ್ಪಾವಧಿಯಲ್ಲೇ ಕಾಯ್ದೆಗಳು ರೈತ ಸಮುದಾಯದ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿವೆ. ರೈತರಿಗೆ ಅವಕಾಶಗಳ ಹೊಸ ಬಾಗಿಲನ್ನು ತೆರೆಯುವ ಜೊತೆಗೆ ಅವರಿಗೆ ಹೊಸ ಹಕ್ಕುಗಳನ್ನು ನೀಡಿವೆ ಎಂದಿದ್ದಾರೆ. ಈ ಮೂಲಕ ಕಾಯ್ದೆ ಹಿಂದಕ್ಕೆ ಪಡೆಯುವ ಸಾಧ್ಯತೆ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಭಾನುವಾರದ ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ನಲ್ಲಿ ಕೃಷಿ ಕಾಯ್ದೆ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಅವರು ‘ಕಳೆದ ಸೆಪ್ಟೆಂಬರ್‌ನಲ್ಲಿ ಅಂಗೀಕಾರಗೊಂಡು ಜಾರಿಗೆ ಬಂದ ಅಲ್ಪಾವಧಿಯಲ್ಲೇ ರೈತರ ಹಲವು ಸಮಸ್ಯೆಗಳನ್ನು ಕಾಯ್ದೆಗಳು ನಿವಾರಿಸಿವೆ. ಹಣ ನೀಡುವುದಾಗಿ ನಂಬಿಸಿ ಕೈಕೊಟ್ಟಮಹಾರಾಷ್ಟ್ರ ವರ್ತಕನ ವಿರುದ್ಧ ಸ್ಥಳೀಯ ರೈತನೊಬ್ಬ ಕಾಯ್ದೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದೇ ಇದಕ್ಕೆ ಸಾಕ್ಷ್ಯ’ ಎಂದು ಪ್ರಧಾನಿ ಉದಾಹರಣೆ ನೀಡಿದರು.

ಇದೇ ವೇಳೆ ಪ್ರತಿಭಟನಾ ನಿರತ ರೈತ ಸಂಘಟನೆಗಳೊಂದಿಗೆ ಸರ್ಕಾರ ಮಾತುಕತೆಗೂ ಮುಂದಾಗಿದೆ. ಆದರೆ ಕಾಯ್ದೆಗಳಲ್ಲಿನ ಕೆಲ ಅಂಶಗಳ ಕುರಿತು ಸಂಘಟನೆಗಳು ಪ್ರಸ್ತಾಪಿಸಿರುವ ಅಂಶಗಳು ತಪ್ಪಾಗಿ ಅರ್ಥೈಸಿಕೊಂಡಿರುವಂಥದ್ದು. ಸದ್ಯ ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ ಮತ್ತು ಸರ್ಕಾರಿ ಸ್ವಾಮ್ಯದ ಮಂಡಿಗಳು ಹಿಂದಿನಂತೆಯೇ ಮುಂದುವರೆಯಲಿವೆ. ರೈತರ ಪ್ರತಿಭಟನೆ ತಪ್ಪು ಮಾಹಿತಿಯಿಂದ ಆಯೋಜನೆಗೊಂಡಿದೆ ಎಂದು ಪರೋಕ್ಷವಾಗಿ ದೂರಿದರು.

ಉಳಿದಂತೆ ತಮ್ಮ ಭಾಷಣದಲ್ಲಿ 1913ರಲ್ಲಿ ವಾರಾಣಸಿಯಿಂದ ಕಳವಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾ ದೇಶ ಮರಳಿಸಿದ ವಿಷಯ, ಸೋಮವಾರದ ಗುರುನಾನಕ್‌ ದೇವ್‌ ಅವರ ಜನ್ಮಜಯಂತಿ, ಡಿ.5ರಂದು ನಡೆಯಲಿರುವ ಶ್ರೀ ಅರಬಿಂದೋ ಅವರ ಜನ್ಮಜಯಂತಿ, ಡಿ.6ರಂದು ನಡೆಯಲಿರುವ ಅಂಬೇಡ್ಕರ್‌ ಜಯಂತಿ, ಪಕ್ಷಿ ತಜ್ಞ ಸಲೀಂ ಅಲಿ, ನ್ಯೂಜಿಲೆಂಡ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಗೌರವ್‌ ಶರ್ಮಾ, ಕೊರೋನಾ ವಿಷಯಗಳ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

ಹೊಸ ಕಾಯ್ದೆಯಿಂದಾಗಿ ಕೃಷಿ ಮತ್ತು ಕೃಷಿ ವಲಯ ಕುರಿತ ಹೊಸ ಆಯಾಮಗಳು ಬೆಳಕಿಗೆ ಬಂದಿವೆ. ರೈತರಿಗೆ ಅವಕಾಶದ ಹೊಸ ಬಾಗಿಲನ್ನು ತೆರೆದಿದೆ. ಕಾಯ್ದೆ ಕುರಿತು ದಶಕಗಳಿಂದ ರೈತರು ಇಟ್ಟಿದ್ದ ಬೇಡಿಕೆ ಮತ್ತು ಒಂದಲ್ಲಾ ಒಂದು ಸಮಯದಲ್ಲಿ ಈ ಕುರಿತು ಅಧಿಕಾರದಲ್ಲಿದ್ದ ಸರ್ಕಾರಗಳು ನೀಡಿದ್ದ ಭರವಸೆನ್ನು ನಾವು ಪೂರ್ಣಗೊಳಿಸಿದ್ದೇವೆ. ಕೃಷಿ ವಲಯದ ಈ ಸುಧಾರಣೆಗಳು ರೈತರನ್ನು ಕೇವಲ ಹಲವು ಅಡೆತಡೆಯಿಂದ ಮುಕ್ತ ಮಾಡಿದ್ದು ಮಾತ್ರವಲ್ಲದೇ, ಅವರಿಗೆ ಹೊಸ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿದೆ ಎಂದು ಪ್ರಧಾನಿ ಮೋದಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.

Latest Videos
Follow Us:
Download App:
  • android
  • ios