ಕೃಷಿ ಮಂಡಿ ರದ್ದು ಮಾಡಿಲ್ಲ, ಬೆಂಬಲ ಬೆಲೆಯೂ ನಿಂತಿಲ್ಲ: ರೈತರಿಗೆ ಮೋದಿ ಅಭಯ!
ಕೃಷಿ ಮಂಡಿ ರದ್ದು ಮಾಡಿಲ್ಲ: ಮೋದಿ| ಕನಿಷ್ಠ ಬೆಂಬಲ ಬೆಲೆಯನ್ನೂ ಕೈಬಿಟ್ಟಿಲ್ಲ| ಹಳೆಯ ವ್ಯಾಪಾರ ವ್ಯವಸ್ಥೆ ಈಗಲೂ ಲಭ್ಯ ಇದೆ| ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ಮತ್ತಷ್ಟುಅವಕಾಶ| ವಿಪಕ್ಷಗಳಿಂದ ಕೃಷಿಕರ ಜತೆ ಚೆಲ್ಲಾಟ
ವಾರಾಣಸಿ(ಡಿ.01): ರೈತರು ತಮ್ಮ ಉತ್ಪನ್ನಗಳನ್ನು ಮಂಡಿಯಲ್ಲಿ ವ್ಯಾಪಾರ ಮಾಡಲು ಬಯಸಿದರೆ ಅದಕ್ಕೆ ಈಗಲೂ ಅವಕಾಶವಿದೆ. ಹಳೆಯ ವ್ಯವಸ್ಥೆ ಈಗಲೂ ಲಭ್ಯವಿದೆ. ಮೂರು ಹೊಸ ಕೃಷಿ ಕಾಯ್ದೆಗಳು ಬೆಳೆಗಳನ್ನು ಮಾರಾಟ ಮಾಡುವುದಕ್ಕೆ ಹೊಸ ಅವಕಾಶಗಳನ್ನು ನೀಡುತ್ತವೆ ಎಂದು ಕೃಷಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ದಶಕಗಳ ಕಾಲ ರೈತರಿಗೆ ವಂಚನೆ ಎಸಗಿದವರು ರೈತರ ಜತೆ ಮತ್ತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
'ದೆಹಲಿ ಬಿಟ್ಟು ಕದಲಲ್ಲ, ನಿರ್ಣಾಯಕ ಸಮರಕ್ಕೆಂದೇ ರಾಜಧಾನಿಗೆ ಬಂದಿದ್ದೇವೆ'
ಸ್ವಕ್ಷೇತ್ರ ವಾರಾಣಸಿಯಲ್ಲಿ 73 ಕಿ.ಮೀ. ಉದ್ದದ ಷಟ್ಪಥ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆಯನ್ನು ರದ್ದುಗೊಳಿಸುವ ಉದ್ದೇಶ ಸರ್ಕಾರಕ್ಕೆ ಇದ್ದಿದ್ದರೆ ಮಂಡಿಗಳನ್ನು ಭಾರಿ ಹಣ ವೆಚ್ಚ ಮಾಡಿ ಸರ್ಕಾರ ಏಕೆ ಆಧುನೀಕರಣಗೊಳಿಸುತ್ತಿತ್ತು? ಹಳೆಯ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಯಾರಾದರೂ ಹೇಳಿದರೆ, ಈ ಕಾನೂನು ಎಲ್ಲಿ ಅದನ್ನು ತಡೆಯುತ್ತಿದೆ? ಹೊಸ ಮುಕ್ತ ಮಾರುಕಟ್ಟೆವ್ಯವಸ್ಥೆ ಎಂದರೆ ಸಾಂಪ್ರದಾಯಿಕ ಮಂಡಿಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯ ಅಂತ್ಯ ಎಂದರ್ಥವಲ್ಲ ಎಂದು ಸ್ಪಷ್ಟನೆ ನೀಡಿದರು.
ರೈತರಿಗೆ ಮಂಡಿಯಿಂದಾಚೆಗೂ ಮಾರುವ ಅವಕಾಶ ನೀಡುವುದರಿಂದ ಅವರಿಗೆ ಹೊಸ ಅವಕಾಶ ಸಿಗುತ್ತದೆ. ಮಂಡಿಯಿಂದ ಹೊರಗೆ ನಡೆಯುವ ವ್ಯವಹಾರಗಳಲ್ಲೂ ಕಾನೂನು ಕ್ರಮವನ್ನು ರೈತರು ಜರುಗಿಸಬಹುದಾಗಿರುತ್ತದೆ ಎಂದು ಹೇಳಿದರು.
ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಿದೆ: ಮೋದಿ
‘ವಿಪಕ್ಷಗಳು ಈ ಹಿಂದೆ ದಶಕಗಳ ಕಾಲ ಕನಿಷ್ಠ ಬೆಂಬಲ ಬೆಲೆ, ಸಾಲಮನ್ನಾ ಹಾಗೂ ರಸಗೊಬ್ಬರ ಸಬ್ಸಿಡಿಯ ಹೆಸರಿನಲ್ಲಿ ರೈತರ ಜೊತೆ ಚೆಲ್ಲಾಟವಾಡಿದ್ದವು. ಈಗ ಐತಿಹಾಸಿಕ ಕೃಷಿ ಕಾಯ್ದೆಗಳ ವಿಷಯದಲ್ಲಿ ರೈತರನ್ನೂ, ಸಮಾಜವನ್ನೂ ತಪ್ಪು ದಾರಿಗೆ ಎಳೆಯುತ್ತಿವೆ’ ಎಂದು ಕಿಡಿಕಾರಿದರು.
ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳೇ ರೈತರನ್ನು ಈ ಕಾಯ್ದೆಯ ವಿರುದ್ಧ ಎತ್ತಿಕಟ್ಟುತ್ತಿವೆ. ಹಿಂದೆ ಸುದೀರ್ಘ ಅವಧಿಯವರೆಗೆ ದೇಶದ ರೈತರನ್ನು ವಂಚಿಸಲಾಗುತ್ತಿತ್ತು. ಈಗ ಅವರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.