ದೀಪಾವಳಿ ಹಬ್ಬಕ್ಕಾಗಿ ಮನೆಯನ್ನು ಸ್ವಚ್ಛಗೊಳಿಸುವಾಗ, ಕುಟುಂಬವೊಂದಕ್ಕೆ ಹಳೆಯ ಸೆಟ್-ಟಾಪ್ ಬಾಕ್ಸ್‌ನಲ್ಲಿ 2 ಲಕ್ಷ ಮೌಲ್ಯದ 2000 ರೂಪಾಯಿ ನೋಟುಗಳು ಸಿಕ್ಕಿವೆ. 2023ರಲ್ಲಿಯೇ ಈ ನೋಟುಗಳನ್ನು ಬ್ಯಾನ್ ಮಾಡಲಾಗಿದ್ದು, ಈ ಹಣವನ್ನು ಈಗ ಏನು ಮಾಡುವುದೆಂದು ತಿಳಿಯದೆ ಕುಟುಂಬವು ಆನ್‌ಲೈನ್‌ನಲ್ಲಿ ಸಲಹೆ ಕೇಳಿದೆ.
ದೀಪಾವಳಿ ಬರ್ತಿದ್ದಂತೆ ಮನೆ ಸ್ವಚ್ಛಗೊಳಿಸಲು ಶುರು
ದೀಪಾವಳಿಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇವೆ. ಇದು ಬರೀ ಬೆಳಕಿನ ಹಬ್ಬವಲ್ಲ, ಮನೆ ಮನವನ್ನು ಬೆಳಗಿಸುವ ಹಬ್ಬ ಹೀಗಾಗಿ ಈ ಹಬ್ಬದ ಸಮಯದಲ್ಲೇ ಜನ ಇಡೀ ಮನೆಯನ್ನು ಸ್ವಚ್ಛಗೊಳಿಸಲು ಶುರು ಮಾಡುತ್ತಾರೆ. ಒಂದು ಕೈಯಲ್ಲಿ ಪೊರಕೆ, ಇನ್ನೊಂದು ಕೈಯಲ್ಲಿ ಬಟ್ಟೆ ಹಿಡಿದು ಮನೆಯ ಮೂಲೆ ಮೂಲೆಯನ್ನು ತೊಳೆದು ಕ್ಲೀನ್ ಮಾಡುತ್ತಾರೆ. ಇದೇ ಸಮಯದಲ್ಲಿ ಕೆಲವೊಮ್ಮೆ ಕಳೆದು ಹೋದ ಬೇಕಾದಾಗ ಸಿಗದೇ ಇದ್ದ ವಸ್ತುಗಳೆಲ್ಲವೂ ಸಿಗುತ್ತದೆ. ಅದೇ ರೀತಿ ಈ ಬಾರಿ ಮನೆಯನ್ನು ಹಬ್ಬಕ್ಕೆಂದು ಶುಚಿಗೊಳಿಸುವುದಕ್ಕೆ ಹೋದ ಒಬ್ಬರಿಗೆ ಖುಷಿ ಹಾಗೂ ದುಃಖ, ಒಟ್ಟೊಟ್ಟಿಗೆ ಆಗಿದೆ.
ಸೆಟ್‌ಟಾಪ್ ಬಾಕ್ಸ್‌ನಲ್ಲಿ ಸಿಕ್ತು 2 ಲಕ್ಷ ರೂಪಾಯಿ
ಏಕೆಂದರೆ ಮನೆಯ ಮೂಲೆಯಲೆಲ್ಲೋ ಅವರಿಗೆ 2 ಸಾವಿರ ರೂಪಾಯಿಯ 2 ಲಕ್ಷ ಮೌಲ್ಯದ ನೋಟುಗಳು ಸಿಕ್ಕಿವೆ. ಮನೆಯ ಹಳೆಯ ಡಿಟಿಹೆಚ್ ಪಿಆರ್ ಸೆಟ್-ಟಾಪ್ ಬಾಕ್ಸ್‌ನ್ನು ತೆರವುಗೊಳಿಸುತ್ತಿರುವಾಗ ಅವರ ತಾಯಿಗೆ 2 ಲಕ್ಷ ರೂಪಾಯಿ ಹಳೆಯ ನೋಟುಗಳು ಸಿಕ್ಕಿದ್ದು, ಇದು ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಏಕೆಂದರೆ 2023ರಲ್ಲಿಯೇ ಈ ನೋಟುಗಳನ್ನು ಬ್ಯಾನ್ ಮಾಡಲಾಗಿದೆ.
2025 ರ ಅತಿದೊಡ್ಡ ದೀಪಾವಳಿ ಸ್ವಚ್ಛತೆ ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿ ರೆಡ್ಡಿಟರ್ ಆನ್‌ಲೈನ್‌ನಲ್ಲಿ ಅನುಭವವನ್ನು ಹಂಚಿಕೊಂಡಿದ್ದು, ದೀಪಾವಳಿ ಸಫಾಯಿ ಸಮಯದಲ್ಲಿ, ನನ್ನ ತಾಯಿಗೆ 2 ಲಕ್ಷ ರೂಪಾಯಿ ಮೌಲ್ಯದ ಹಳೆಯ 2000 ರೂಪಾಯಿ ನೋಟುಗಳು ಸಿಕ್ಕಿತು. ಅದನ್ನು ಹಳೆಯ ಡಿಟಿಗಹೆಚ್ ಪೆಟ್ಟಿಗೆಯೊಳಗೆ ಮುಚ್ಚಿಡಲಾಗಿತ್ತು., ಬಹುಶಃ ನೋಟು ರದ್ದತಿಯ ಸಮಯದಲ್ಲಿ ನನ್ನ ತಂದೆ ಅಲ್ಲಿ ಇಟ್ಟಿರಬಹುದು. ನಾವು ಈ ವಿಚಾರವನ್ನು ಅವರಿಗೆ ಇನ್ನೂ ಹೇಳಿಲ್ಲ. ಇದನ್ನು ಏನು ಮಾಡಬಹುದು ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ ಎಂದು ಬರೆದು 2 ಸಾವಿರ ರೂಪಾಯಿ ನೋಟುಗಳ ಬಂಡಲ್ ಫೋಟೋಗಳನ್ನು ಕಳುಹಿಸಿದ್ದಾರೆ.
2 ಲಕ್ಷ ರೂಪಾಯಿ ನೋಟು ಇಟ್ಟು ಮರೆತಿದ್ದಕ್ಕೆ ಅಚ್ಚರಿಪಟ್ಟ ಜನ
ಈ ಪೋಸ್ಟ್ ನೋಡಿ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ಹೀಗೂ ಮರೆಯುವುದು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹಾಗೆಯೇ 2 ಲಕ್ಷ ರೂಪಾಯಿ ಹಣವನ್ನು ಎಲ್ಲಿಯೋ ಇಟ್ಟು ಮರೆಯುವಷ್ಟು ನನ್ನನ್ನು ಶ್ರೀಮಂತನಾಗಿಸು ದೇವರೆ ಎಂದು ಬರೆದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇದನ್ನು ಎಸೆಯಬೇಡಿ ನನಗೆ ಕೊಡಿ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇಷ್ಟೊಂದು ಹಣವನ್ನು ಇಟ್ಟು ಒಬ್ಬರು ಹೇಗೆ ಮರೆಯಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಗುಜುರಿಗೆ ಕೊಟ್ಟರೆ ಇದಕ್ಕೆ ಪ್ರತಿಯಾಗಿ ಆತ ನಿಮಗೆ 8ರಿಂದ 10 ರೂಪಾಯಿ ನೀಡಬಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಹೋದರ 4ರಿಂದ 5 ನೋಟು ನನಗೆ ಕಳುಹಿಸಿ 10ರಿಂದ 15 ವರ್ಷ ಕಳೆದ ನಂತರ ನಾನು ಅದನ್ನು ನನ್ನ ಮಕ್ಕಳಿಗೆ ತೋರಿಸುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ತಮಾಷೆಯ ಜೊತೆಗೆ ಮುಂದೇನು ಮಾಡಬಹುದು ಎಂಬ ಬಗ್ಗೆ ಕೆಲವರು ಸಲಹೆ ನೀಡಿದ್ದಾರೆ. ಈ ನೋಟುಗಳನ್ನು ಹಂತ ಹಂತವಾಗಿ ರದ್ದುಗೊಳಿಸಿದರೂ ಅವು ಇನ್ನೂ ಕಾನೂನುಬದ್ಧ ಟೆಂಡರ್ ಆಗಿವೆ. 20,000 ಮಿತಿಯೊಂದಿಗೆ ಗೊತ್ತುಪಡಿಸಿದ RBI ಕಚೇರಿಗಳಲ್ಲಿ ಮಾತ್ರ ನೀವು ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿ ಗಮನ ಸೆಳೆದಿದ್ದಾರೆ.
ನಿಮ್ಮ ಹತ್ತಿರದ ಆರ್‌ಬಿಐಗೆ ಹೋಗಿ ಡಿಕ್ಲರೇಷನ್ ಫೈಲ್ ಮಾಡಿ ನಂತರ ವಿನಿಮಯ ಮಾಡಿಕೊಳ್ಳಿ. ಈ 2000 ರೂ. ನೋಟುಗಳನ್ನು ರದ್ದುಗೊಳಿಸಲಾಗಿಲ್ಲ, ಆದರೆ ಚಲಾವಣೆಯಿಂದ ತೆಗೆದು ಹಾಕಲಾಗಿದೆ. ಆದರೆ 5ರಿಂದ 10 ಬ್ಯಾಚ್‌ಗಳಲ್ಲಿ ನೀವು ಈ ಹಣವನ್ನು ವಿನಿಮಯ ಮಾಡಿಕೊಳ್ಳಲು ಮರೆಯಬೇಡಿ, ಒಂದೇ ಬ್ಯಾಚ್‌ನಲ್ಲಿ 2 ಲಕ್ಷ ರೂ. ವಿನಿಮಯ ಮಾಡಿಕೊಳ್ಳುವುದರಿಂದ ನಿಮಗೆ ಸ್ವಲ್ಪ ತೊಂದರೆಯಾಗಬಹುದು. ನಿಮಗೆ ವಿಭಿನ್ನ ವ್ಯಕ್ತಿಗಳು ಸಹ ಸಹಾಯ ಮಾಡುತ್ತಾರೆ ಎಂದು ಮತ್ತೊಂದು ಕಾಮೆಂಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
2,000 ರೂ. ನೋಟು ಚಲಾವಣೆಯಿಂದ ರದ್ದು
ನೋಟು ರದ್ದತಿಯ ನಂತರ 2016 ರಲ್ಲಿ 2,000 ರೂ. ನೋಟನ್ನು ಪರಿಚಯಿಸಲಾಯಿತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಕ್ಲೀನ್ ನೋಟ್ ನೀತಿಯ ಪ್ರಕಾರ, ಅದನ್ನು ಅಧಿಕೃತವಾಗಿ ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಯಿತು. ಬ್ಯಾಂಕುಗಳು 2023ರ ಅಕ್ಟೋಬರ್ 7ರವರೆಗೆ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಈಗ ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ ಮತ್ತು ಪ್ರತಿ ವಹಿವಾಟಿಗೆ 20,000 ರೂ.ಗಳ ಮಿತಿ ಇದೆ.
ಇದನ್ನೂ ಓದಿ: ಮೈಸೂರಿನ ಹುಡುಗನಿಗೆ ಡಿವೋರ್ಸ್: ಮೂರನೇ ಮದ್ವೆಯಾಗ್ತಿದ್ದಾರಾ ರಾಖಿ ಸಾವಂತ್?
ಇದನ್ನೂ ಓದಿ: ನಟಿ ಮದ್ವೆಯಲ್ಲಿ ಮಂಗಳಸೂತ್ರವೇ ಮಿಸ್, ಇಲ್ಲೂ ಬೇಕಾ ನಾಟಕವೆಂದ ನೆಟ್ಟಿಗರು?
