ಚಲಾವಣೆಯಲ್ಲಿರುವ ಶೇ.93ರಷ್ಟು 2 ಸಾವಿರ ರೂಪಾಯಿ ನೋಟು ವಾಪಸ್; ವಿನಿಮಯಕ್ಕೆ ಸೆ.30 ಅಂತಿಮ ಗಡುವು
2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಲು ಅಥವಾ ಠೇವಣಿಯಿಡಲು ಸೆಪ್ಟೆಂಬರ್ 30 ಅಂತಿಮ ಗಡುವು. ಆರ್ ಬಿಐ ನೀಡಿರುವ ಮಾಹಿತಿ ಅನ್ವಯ ಚಲಾವಣೆಯಿಂದ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡ ಬಳಿಕ ಆಗಸ್ಟ್ 31ರ ತನಕ ಶೇ.93ರಷ್ಟು ನೋಟುಗಳು ವಾಪಸ್ ಆಗಿವೆ.
ಮುಂಬೈ (ಸೆ.2): 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಲು ಅಥವಾ ಠೇವಣಿಯಿಡಲು ಸೆಪ್ಟೆಂಬರ್ 30 ಅಂತಿಮ ದಿನಾಂಕ. ಇನ್ನು ಚಲಾವಣೆಯಿಂದ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡ ಬಳಿಕ ಆಗಸ್ಟ್ 31ರ ತನಕ ಶೇ.93ರಷ್ಟು ನೋಟುಗಳು ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಇನ್ನು 24,000 ಕೋಟಿ ಮೌಲ್ಯದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ. ಬ್ಯಾಂಕ್ ಗಳಿಂದ ಪಡೆದಿರುವ ಮಾಹಿತಿ ಅನ್ವಯ ಆಗಸ್ಟ್ 31, 2023ರ ತನಕ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆಯಲಾಗಿದೆ. ಹಾಗೆಯೇ ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ನೋಟುಗಳ ಮೌಲ್ಯ 24,000 ಕೋಟಿ ರೂ. ಇದೆ ಎಂದು ಆರ್ ಬಿಐ ಹೇಳಿದೆ. ಇನ್ನು ಪ್ರಮುಖ ಬ್ಯಾಂಕ್ ಗಳಿಂದ ಕಲೆ ಹಾಕಿದ ಮಾಹಿತ ಅನ್ವಯ ಚಲಾವಣೆಯಿಂದ ವಾಪಸ್ ಪಡೆಯಲಾದ 2 ಸಾವಿರ ರೂಪಾಯಿ ನೋಟುಗಳಲ್ಲಿ ಶೇ. 87ರಷ್ಟನ್ನು ಠೇವಣಿ ರೂಪದಲ್ಲಿಡಲಾಗಿದೆ. ಉಳಿದವನ್ನು ಇತರ ಮೌಲ್ಯದ ಬ್ಯಾಂಕ್ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರ್ ಬಿಐ ತಿಳಿಸಿದೆ.
ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಮಾರ್ಚ್ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು. ಇನ್ನು ಮೇ 19 ರಂದು ಆರ್‌ಬಿಐ ತನ್ನ ಅಧಿಕೃತ ಪ್ರಕಟಣೆ ನೀಡುವ ವೇಳೆ ಇದರ ಪ್ರಮಾಣ 3.56 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು.
ನೆನಪಿರಲಿ, ಸೆಪ್ಟೆಂಬರ್ ತಿಂಗಳಲ್ಲಿ ಈ 7 ಹಣಕಾಸು ಕೆಲಸ ಮಾಡದಿದ್ರೆ ನಷ್ಟ ಗ್ಯಾರಂಟಿ!
ಕಳೆದ ಆಗಸ್ಟ್ 1ರಂದು ಕೂಡ ಆರ್ ಬಿಐ ಎಷ್ಟು ಪ್ರಮಾಣ 2 ಸಾವಿರ ರೂಪಾಯಿ ನೋಟುಗಳು ಬ್ಯಾಂಕ್‌ಗೆ ವಾಪಾಸ್ ಬಂದಿವೆ ಎನ್ನುವ ಮಾಹಿತಿ ನೀಡಿತ್ತು. ಜುಲೈ 31ರ ವೇಳೆಗೆ ಒಟ್ಟು 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ಬ್ಯಾಂಕ್‌ಗೆ ಮರಳಿವೆ. ಇನ್ನು ಮಾರುಕಟ್ಟೆಯಲ್ಲಿ 42 ಸಾವಿರ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ಚಲಾವಣೆಯಲ್ಲಿದೆ ಎಂದು ತಿಳಿಸಿತ್ತು.
ಗಡುವು ವಿಸ್ತರಣೆ ಸಾಧ್ಯತೆ ಇಲ್ಲ
ಆರ್ ಬಿಐ 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಹಣಕಾಸು ಸಚಿವಾಲಯ ವಿಸ್ತರಿಸುವ ಸಾಧ್ಯತೆ ಕಾಣಿಸುತ್ತಿಲ್ಲ. ಜುಲೈ ಕೊನೆಯಲ್ಲಿ ಲೋಕಸಭೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಬ್ಯಾಂಕ್ ಗಳಲ್ಲಿ 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಸೆಪ್ಟೆಂಬರ್ 30ರ ಬಳಿಕ ಕೂಡ ವಿಸ್ತರಿಸುವ ಸಾಧ್ಯತೆಗಳಿವೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅಂಥ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆರ್‌ಬಿಐ ಮಾಹಿತಿ, 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸ್!
ವಿನಿಮಯಕ್ಕೆ ಬ್ಯಾಂಕ್ ಗ್ರಾಹಕನಾಗಿರಬೇಕಿಲ್ಲ
2,000ರೂ. ಮುಖಬೆಲೆಯ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಲು ವ್ಯಕ್ತಿಯು ಬ್ಯಾಂಕಿನ ಗ್ರಾಹಕರಾಗಿರುವುದು ಅನಿವಾರ್ಯವಲ್ಲ. ಖಾತೆದಾರರಲ್ಲದವರು 2,000 ರೂ. ಮೌಲ್ಯದ ಬ್ಯಾಂಕ್ ನೋಟುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಮ್ಮೆಗೆ 20,000ರೂ. ಮಿತಿಯವರೆಗೆ ಬದಲಾಯಿಸಬಹುದು. ಈ ವಿನಿಮಯ ಸೌಲಭ್ಯವನ್ನು ಪಡೆಯಲು ಜನರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.