Ukraine Crisis ಅಂತಿಮ ಪೂಜೆ ಸಲ್ಲಿಸಿ ನವೀನ್ ಮೃತದೇಹ ಮೆಡಿಕಲ್ ಕಾಲೇಜಿಗೆ ನೀಡಲು ಕುಟುಂಬಸ್ಥರ ನಿರ್ಧಾರ!
- 20 ದಿನಗಳ ಬಳಿಕ ನವೀನ್ ಮೃತದೇಹ ಭಾರತಕ್ಕೆ
- ಪುತ್ರನ ಮುಖ ನೋಡಲು ದುಃಖ ಹಿಡಿದಿಟ್ಟ ಪೋಷಕರು
- ಮೃತದೇಹ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲು ನಿರ್ಧಾರ
ಹಾವೇರಿ(ಮಾ.18): ರಷ್ಯಾ ಶೆಲ್ ದಾಳಿಗೆ ಉಕ್ರೇನ್‌ನಲ್ಲಿ ಬಲಿಯಾದ ಕರ್ನಾಟಕದ ರಾಣೆಬೆನ್ನೂರಿನ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಕರಪ್ಪ ಮೃತದೇಹ ಸೋಮವಾರ(ಮಾ.21) ಬೆಂಗಳೂರಿಗೆ ಆಗಮಿಸುತ್ತಿದೆ. ಪುತ್ರನ ಕಳೆದುಕೊಂಡ ಶೋಕದಲ್ಲಿ ಪೋಷಕರು ದಿನದೂಡುತ್ತಿದ್ದಾರೆ. ಇದೀಗ ಕೊನೆಯ ಬಾರಿಗೆ ಮಗನ ಮುಖ ನೋಡಲು ಪೋಷಕರು ದುಃಖ ಹಿಡಿದಿಟ್ಟು ಕುಳಿತಿದ್ದಾರೆ. ಈ ಶೋಕದ ನಡುವೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ನವೀನ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಲು ನಿರ್ಧರಿಸಿದ್ದಾರೆ.
ಸೋಮವಾರ ಮುಂಜಾನೆ 3 ಗಂಟೆಗೆ ನವೀನ್ ಮೃತದೇಹ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಇಲ್ಲಿಂದ ನೇರವಾಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮಕ್ಕೆ ಪಾರ್ಥೀವ ಶರೀರವನ್ನು ರವಾನಿಸಲಾಗುತ್ತದೆ. ಮಗನ ಪಾರ್ಥೀವ ಶರೀರಕ್ಕೆ ಅಂತಿಮ ಪೂಜೆ ಹಾಗು ವಿಧಿವಿಧಾನಗಳನ್ನು ಕುಟುಂಬಸ್ಥರು ನೇರವೇರಸಲಾಗುತ್ತದೆ. ಬಳಿಕ ದಾವಣಗೆರೆಯ ಎಸ್ ಎಸ್ ಮೆಡಿಕಲ್ ಕಾಲೇಜಿಗೆ ನೀಡಲು ನವೀನ್ ತಂದೆ ಶೇಕರಪ್ಪ ನಿರ್ಧರಿಸಿದ್ದಾರೆ.
ನವೀನ್ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ, ಖಚಿತ ಪಡಿಸಿದ ಸಿಎಂ ಬೊಮ್ಮಾಯಿ!
ನವೀನ್ ಮೃತಪಟ್ಟು 20 ದಿನದ ಬಳಿಕ ಮೃತದೇಹ ಭಾರತಕ್ಕೆ ಬರುತ್ತಿದೆ. ನವೀನ್ ಮೃತದೇಹ ಭಾರತಕ್ಕೆ ತರಿಸಲು ನವೀನ್ ಪೋಷಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಳಿ ಮನವಿ ಮಾಡಿದ್ದರು. ಇತ್ತ ಕೇಂದ್ರ ಸರ್ಕಾರ ನವೀನ್ ಮೃತದೇಹ ಕರೆತರಲು ಸತತ ಪ್ರಯತ್ನ ನಡೆಸಿತ್ತು.
ಪಾರ್ಥೀವ ಶರೀರ ಸಿಗುವ ಭರವಸೆ ಇಲ್ಲದ ತಿಥಿ ನೇರವೇರಿಸಿದ್ದ ಪೋಷಕರು
ಉಕ್ರೇನ್ ದೇಶದಲ್ಲಿ ಮಗ ಅಸುನೀಗಿದ ಬಳಿಕ ಪಾರ್ಥೀವ ಶರೀರ ವಾಪಸ್ ತರುವ ಕುರಿತು ಅನುಮಾನಗಳು ವ್ಯಕ್ತವಾಗಿತ್ತು. ಯುದ್ಧದ ಕಾರಣ ಇದು ಅಸಾಧ್ಯವಾಗಿ ಗೋಚರಿಸಿತ್ತು. ಇತ್ತ ಪುತ್ರನ ಕಳೆದುಕೊಂಡ ಮೂರು ದಿನಗಳ ಬಳಿಕ ಪೋಷಕರು ನವೀನ್ ಆತ್ಮ ಶಾಂತಿಗಾಗಿ ಚಳಗೇರಿ ಗ್ರಾಮದ ನವೀನ್ ಮನೆಯಲ್ಲಿ ಆತನ ಪೋಷಕರು ತಿಥಿ ಕಾರ್ಯ ನೆರವೇರಿಸಿದ್ದರು.
ತಿಥಿ ಪೂಜೆ ನೆರವೇರಿಸುವಾಗ ನವೀನ್ ತಾಯಿ ವಿಜಯಲಕ್ಷ್ಮೇ ಮಗನನ್ನು ನೆನೆದು ‘ಮತ್ತೆ ಹುಟ್ಟಿಬಾ ಮಗನೇ’ ಎಂದು ಕಂಬನಿ ಮಿಡಿಯುತ್ತಾ ಹಾಡು ಹೇಳಿ ಮನದಲ್ಲಿ ಮಡುಗಟ್ಟಿದ ನೋವನ್ನು ಹೊರಚೆಲ್ಲಿದರು. ಈ ಪ್ರಸಂಗ ನೆರೆದವರೆಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು. ಪೂಜೆ ವೇಳೆ ನವೀನ್ ತಂದೆ, ಹಿರಿಯ ಸಹೋದರ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಒಬ್ಬರನ್ನೊಬ್ಬರು ಸಮಾಧಾನ ಮಾಡುವ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಇರಲಿಲ್ಲ.
ನವೀನ್ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ
ನವೀನ್ ಪಾರ್ಥೀವ ಶರೀರ ಆಗಮನದ ಸುದ್ದಿ ತಿಳಿಯುತ್ತಿದ್ದ ನವೀನ್ ಮನೆಗೆ ಕುಟುಂಬಸ್ಥರು, ಗಣ್ಯರು ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ನವೀನ ಅಗಲಿಕೆಯಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ನವೀನ್ ತಂದೆಗೆ ಮೋದಿ ಸಾಂತ್ವನ
ಉಕ್ರೇನ್‌ನಲ್ಲಿ ಮೃತಪಟ್ಟಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಯುವಕ ನವೀನ್ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದರು. ಈ ವೇಳೆ ಪಾರ್ಥೀವ ಶರೀರ ತರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದರು. ನವೀನ್ ತಂದೆ ಶೇಖರಗೌಡ ಗ್ಯಾನಗೌಡರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೋದಿ, ನವೀನ್ ಸಾವಿಗೆ ಸಂತಾಪ ವ್ಯಕ್ತಪಡಿಸಿ ಧೈರ್ಯ ತುಂಬಿದರು.