ಮಹಾರಾಷ್ಟ್ರದಲ್ಲಿ ಮರಾಠಿಯೇತರ ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಮರಾಠಿ ಹೆಮ್ಮೆಯ ಹೆಸರಿನಲ್ಲಿ ನಡೆಸುವ ಗೂಂಡಾಗಿರಿಯನ್ನು ಸಹಿಸಲಾಗದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಚ್ಚರಿಸಿದ್ದಾರೆ.
ನವದೆಹಲಿ: ಮಹಾರಾಷ್ಟ್ರದಲ್ಲಿ ಮರಾಠಿಯೇತರ ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಮರಾಠಿ ಹೆಮ್ಮೆಯ ಹೆಸರಿನಲ್ಲಿ ನಡೆಸುವ ಗೂಂಡಾಗಿರಿಯನ್ನು ಸಹಿಸಲಾಗದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಚ್ಚರಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಮ್ಮ ಸ್ವಂತ ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು. ಆದರೆ ಅದನ್ನು ನೆಪವಾಗಿ ಬಳಸಿಕೊಂಡು ಗೂಂಡಾಗಿರಿಯಲ್ಲಿ ತೊಡಗಿದರೆ, ಅದನ್ನು ಸಹಿಸಲಾಗುವುದಿಲ್ಲ. ಭಾಷೆಯ ಆಧಾರದ ಮೇಲೆ ಯಾರಾದರೂ ಗೂಂಡಾಗಿರಿಯಲ್ಲಿ ತೊಡಗಿದರೆ, ನಮ್ಮ ಸರ್ಕಾರ ಅವರನ್ನು ಬಿಡುವುದಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಇತ್ತೀಚೆಗೆ ಹಿಂದಿ ಮಾತಾಡದ ಆಹಾರ ಮಳಿಗೆ ವ್ಯಾಪಾರಿಯ ಮೇಲೆ ಎಂಎನ್‌ಎಸ್ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಶಿವಸೇನಾ (ಯುಬಿಟಿ) ನಾಯಕ ರಾಜನ್ ವಿಚಾರೆ ಹಿಂದಿಯೇತರ ವ್ಯಾಪಾರಿಗಳನ್ನು ಕಚೇರಿಗೆ ಕರೆಸಿ ದೌರ್ಜನ್ಯ ಎಸಗಿದ್ದರು.
ವ್ಯಾಪಾರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ
ಮುಂಬೈ: ಮರಾಠಿ ಮಾತಾಡದ ಆಹಾರ ಮಳಿಗೆ ವ್ಯಾಪಾರಿ ಮೇಲೆ ಎಂಎನ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಬೆನ್ನಲ್ಲೆ, ಮರಾಠಿಯೇತರ ವ್ಯಾಪಾರಸ್ಥರನ್ನು ಕಚೇರಿಗೆ ಕರೆಸಿ ಶಿವಸೇನಾ (ಯುಬಿಟಿ) ನಾಯಕನೊಬ್ಬ ಥಳಿಸಿ, ನಿಂದಿಸಿದ ಆಘಾತಕಾರಿ ಘಟನೆ ನಡೆದಿತ್ತು. ಇದು ರಾಜ್ಯದಲ್ಲಿ ಮರಾಠಿಯೇತರ ವ್ಯಾಪಾರಸ್ಥರ ಸುರಕ್ಷತೆ ಕುರಿತು ಕಳವಳ ಹುಟ್ಟುಹಾಕಿತ್ತು.
ಶಿವಸೇನಾ (ಯುಬಿಟಿ) ಮಾಜಿ ಸಂಸದ ರಾಜನ್ ವಿಚಾರೆ ಪರಭಾಷಿಕ ವ್ಯಾಪಾರಿಗಳನ್ನು ಕಚೇರಿಗೆ ಕರೆಸಿ, ಹಿಂದಿ ಮಾತಾಡದಂತೆ ಬೆದರಿಕೆ ಹಾಕಿ ಬಳಿಕ ತಮ್ಮ ಕಾರ್ಯಕರ್ತನ ಕಾಲಿಗೆ ಬಿದ್ದು, ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದರು. ಇಬ್ಬರು ವ್ಯಾಪಾರಿಗಳು ವಿಚಾರೆ ಬೆಂಬಲಿಗನ ಬಳಿ ಬಂದು, ಕಿವಿ ಹಿಡಿದು ಕ್ಷಮೆ ಕೋರಿದ್ದರು. ಆತನ ಕಾಲಿಗೂ ಬಿದ್ದಿದ್ದಾರೆ. ಬಳಿಕ ಕಾರ್ಯಕರ್ತ ವ್ಯಾಪಾರಸ್ಥನ ಕಪಾಳಕ್ಕೆ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿತ್ತು
ಮಹಾರಾಷ್ಟ್ರದಲ್ಲಿ ಮರಾಠಿಗೆ ಅಗೌರವ ತೋರಿದರೆ ಕ್ರಮ: ಸಚಿವ
ಮುಂಬೈ: ‘ಮಹಾರಾಷ್ಟ್ರದಲ್ಲಿ ಮರಾಠಿಯನ್ನೇ ಮಾತಾಡಬೇಕು. ಯಾರಾದರೂ ಮರಾಠಿಗೆ ಅಗೌರವ ತೋರಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ ತಿಳಿಸಿದ್ದಾರೆ.ಮರಾಠಿಯಲ್ಲಿ ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಆಹಾರ ಮಳಿಗೆಯ ವ್ಯಾಪಾರಿಗೆ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಪಕ್ಷದ ಕಾರ್ಯಕರ್ತರು ಥಳಿಸಿದ ಬೆನ್ನಲ್ಲೆ ಸಚಿವರಿಂದ ಈ ಹೇಳಿಕೆ ಬಂದಿತ್ತು
‘ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ಮಾತಾಡಬೇಕು. ಮರಾಠಿ ಬರದಿದ್ದರೆ, ಏನೇ ಆದರೂ ನಾವು ಮರಾಠಿಯಲ್ಲಿ ಮಾತಾಡುವುದಿಲ್ಲ ಎಂಬ ಅಹಂಕಾರ ತೋರಬಾರದು. ಇದನ್ನು ನಾವು ಸಹಿಸಲ್ಲ. ಬದಲಾಗಿ, ನಾವು ಮರಾಠಿಯಲ್ಲಿ ಮಾತಾಡಲು ಯತ್ನಿಸುತ್ತೇವೆ ಎಂದು ಹೇಳಬೇಕು. ಯಾರಾದರೂ ಮರಾಠಿಗೆ ಅಗೌರವ ತೋರಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದರು.
