ಮೋದಿ ಲಸಿಕೆ ಕೊಡಿಸಿದ್ದಕ್ಕೆ ನಾವು ಜೀವಂತ: ದೇವೇಂದ್ರ ಫಡ್ನವೀಸ್
ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಪುಣೆ(ಏ.28): 'ಕೋವಿಡ್ ವ್ಯಾಧಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಲಸಿಕೆ ಕೊಡಿಸಿದ್ದಕ್ಕೆ ಇಂದು ಭಾರತೀಯರು ಜೀವಂತವಾಗಿದ್ದಾರೆ. ಅವರಿಂದಲೇ ನಾವು ಬದುಕಿದ್ದೇವೆ . ಹಾಗಾಗಿ ಅವರಿಗೆ ಮತ ನೀಡಿ' ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ.
ಚುನಾವಣಾ ಪ್ರಚಾರ ನಡೆಸಿದ ಅವರು, ಕೊರೋನಾ ವೇಳೆ ಹಲವಾರು ಮಂದಿ ತಮ್ಮ ಆತ್ಮೀಯರನ್ನು, ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಯಾರೂ ಭಾರತದ ನೆರವಿಗೆ ಬಂದಿರಲಿಲ್ಲ. ಹೀಗಾಗಿ ದೇಶದಲ್ಲಿ 40- 50 ಕೋಟಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಆತಂಕವಿತ್ತು ಎಂದರು.
ಪ್ರಧಾನಿ ಮೋದಿ ಆಡಳಿತದ ಪಿಕ್ಚರ್ ಇನ್ನೂ ಬಾಕಿ ಇದೆ: ದೇವೇಂದ್ರ ಫಡ್ನವಿಸ್
'ಈ ವೇಳೆ ಮೋದಿಯವರು ವಿಜ್ಞಾನಿಗಳ ಜೊತೆ ಸಂವಹನ ನಡೆಸಿ ಲಸಿಕೆ ಕಂಡು ಹಿಡಿಯುವುದಕ್ಕೆ ನೆರವಾಗಿದ್ದರು. ಅದರಿಂದಲೇ ಇಂದು ನಾವೆಲ್ಲರೂ ಬದುಕಿದ್ದೇವೆ. ಎಲ್ಲರೂ ಇಲ್ಲಿದ್ದೇವೆ. ಮೋದಿ ನಮಗೆ ಲಸಿಕೆ ನೀಡದಿದ್ದರೆ ನಾವು ಇಂದು ಈ ರ್ಯಾಲಿ ವೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ' ಎಂದರು. ಇದೇ ವೇಳೆ ವಿದೇಶಗಳೊಂದಿಗೆ ಕೇಂದ್ರದ ವ್ಯಾಕ್ಸಿನ್ ಮೈತ್ರಿ ವಿಚಾರ ಪ್ರಸ್ತಾಪಿಸಿದ ಫಡ್ನವೀಸ್, 'ಜಗತ್ತಿನ 100 ದೇಶಗಳು, ಮೋದಿ ನೀಡಿದ ಲಸಿಕೆಯಿಂದಾಗಿ ತಮ್ಮ ದೇಶದ ಜನರು ಉಳಿದಿದ್ದಾರೆಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ' ಎಂದೂ ಹೇಳಿದರು.