ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಜಬಲ್ಪುರ ದುರಂತದ ತಾಯಿ-ಮಗುವಿನ ಫೋಟೋ ಎಐ ನಿರ್ಮಿತ ಎಂದು ಫ್ಯಾಕ್ಟ್‌ಚೆಕ್‌ನಿಂದ ತಿಳಿದುಬಂದಿದೆ. ಆದರೆ, ಬಾರ್ಗಿ ಅಣೆಕಟ್ಟಿನಲ್ಲಿ ನಡೆದ ನೈಜ ದೋಣಿ ದುರಂತದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ತಾಯಿ-ಮಗು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ತಾಯಿ ಮತ್ತು ಮಗುವಿನ ಹೃದಯವಿದ್ರಾವಕ ಫೋಟೋ ಸಾಕಷ್ಟು ವೈರಲ್​ ಆಗಿದೆ. ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದ ಕ್ರೂಸ್ ದುರಂತದಲ್ಲಿ ಮಗುವನ್ನು ಅಪ್ಪಿಕೊಂಡೇ ಅಮ್ಮ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಈ ಫೋಟೋ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಎಂಥವರ ಹೃದಯವೂ ಒಡೆದು ಚೂರಾಗುವುದು ಇದೆ. ಎಂಥವರು ಕಣ್ಣೀರು ಹಾಕುವಂಥ ದೃಶ್ಯ ಇದಾಗಿದೆ. ತನ್ನ ಕಂದನನ್ನು ಉಳಿಸಿಕೊಳ್ಳಲು ಅಮ್ಮ ಕೊನೆಯವರೆಗೂ ಹೋರಾಟ ಮಾಡಿದ್ದಳು. ತನ್ನ ಮಗುವನ್ನು ಬಿಗಿದಪ್ಪಿ ಆತನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ, ಇಬ್ಬರೂ ಸಾವನ್ನಪ್ಪಿದರು ಎಂದು ಈ ಫೋಟೋದಲ್ಲಿ ಹೇಳಲಾಗಿದೆ. ಆದರೆ ಈ ಫೋಟೋ ಎಐ ಸೃಷ್ಟಿಯದ್ದೇ ವಿನಾ ಅಸಲಿಯದ್ದು ಅಲ್ಲ ಎನ್ನುವುದು ಇದೀಗ ಫ್ಯಾಕ್ಟ್​ಚೆಕ್​ ತಂಡ ರಿವೀಲ್ ಮಾಡಿದೆ.

9 ಮಂದಿ ಜೀವ ಹೋದ ಘಟನೆ

ಮೊನ್ನೆ ಮಧ್ಯಪ್ರದೇಶದ ಜಬಲ್ಪುರದ ಬಾರ್ಗಿ ಅಣೆಕಟ್ಟಿನಲ್ಲಿ ಮುಳುಗಿದ ಕ್ರೂಸ್ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಈ ಬರ್ಬರ ದುರಂತದಲ್ಲಿ ನಿಜಕ್ಕೂ ಒಬ್ಬ ತಾಯಿ ತನ್ನ ಮಗುವನ್ನು ಹಿಡಿದುಕೊಂಡೇ ಕೊನೆಯುಸಿರು ಎಳೆದಿದ್ದಾರೆ. ದೋಣಿಯಲ್ಲಿ ಹೋಗುವ ಸಂದರ್ಭದಲ್ಲಿ ಆ ಮಗು ಅಮ್ಮನ ಮಡಿಲಿನಲ್ಲಿ ಇತ್ತು. ಕ್ರೂಸ್​ ಮುಳುಗಿದಾಗ ಇಬ್ಬರೂ ಒಟ್ಟಿಗೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಿಜಕ್ಕೂ ನಡೆದಿದೆ. ಆದರೆ ಅದನ್ನೇ ಮುಂದುಮಾಡಿಕೊಂಡು ಈ ಎಐ ಫೋಟೋ ವೈರಲ್​ ಮಾಡಲಾಗಿದೆ. ಹಾಗೆಂದು ಘಟನೆ ನಡೆದೇ ಇಲ್ಲವೆಂದೇನಲ್ಲ. ನಡೆದಿರುವ ಘಟನೆಯನ್ನೇ ಇನ್ನೂ ಸ್ವಲ್ಪ ವೈರಲ್​ ಆಗುವ ರೀತಿಯಲ್ಲಿ, ಈ ಫೋಟೋ ಸೃಷ್ಟಿಸಲಾಗಿದೆ.

ಘಟನೆ ನಡೆದದ್ದು ಹೀಗೆ

ಇನ್ನು, ಈ ಘಟನೆಯ ಕುರಿತು ಹೇಳುವುದಾದರೆ, ಸಂಜೆ 6 ಗಂಟೆ ಸುಮಾರಿಗೆ ಬಲವಾದ ಗಾಳಿ ಬೀಸಿದೆ.ಅದಾಗಲೇ ಆ ಭಾಗದಲ್ಲಿ ಎಲ್ಲೋ ಅಲರ್ಟ್​ ಘೋಷಣೆ ಮಾಡಿದ್ದರೂ, ಕ್ರೂಸ್​ನಲ್ಲಿ ಪ್ರಯಾಣಿಕರನ್ನು ತುಂಬಲಾಗಿತ್ತು ಎನ್ನಲಾಗಿದೆ. ಗಾಳಿಗೆ ಹಾಡು ಹೇಳುತ್ತಾ, ಕ್ರೂಸ್​ನಲ್ಲಿ ಇದ್ದವರು ಎಂಜಾಯ್​ ಮಾಡುವ ವಿಡಿಯೋ ಕೂಡ ವೈರಲ್​ ಆಗಿದೆ. ಆದರೆ ಸ್ವಲ್ಪದಲ್ಲಿಯೇ ಬಲವಾದ ಗಾಳಿ ಬೀಸಿದೆ. ತಕ್ಷಣವೇ ಪ್ರಯಾಣಿಕರು ಎಚ್ಚರಿಕೆ ನೀಡಿ ದಡಕ್ಕೆ ಮರಳುವಂತೆ ಸಿಬ್ಬಂದಿಯನ್ನು ಒತ್ತಾಯಿಸಿದರು. ಆದರೆ ದೋಣಿ ದಡದಿಂದ ದೂರವಿದ್ದ ಕಾರಣ ದಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಗಿದ್ದೇನು?

ಸುಮಾರು 30 ಪ್ರಯಾಣಿಕರಿದ್ದರು. ಇಬ್ಬರು ಸಿಬ್ಬಂದಿ ಮಾತ್ರ ಇದ್ದರು ಎನ್ನಲಾಗುತ್ತಿದೆ. ದೋಣಿ ಮುಳುಗಿದ ತಕ್ಷಣ ಸ್ಥಳೀಯರು ಹಗ್ಗಗಳನ್ನು ಬಳಸಿ ಲೈಫ್ ಜಾಕೆಟ್ ಧರಿಸಿದ್ದ ಕೆಲವು ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಹಲವಾರು ಮಂದಿ ನೀರಿನಲ್ಲಿ ಮುಳುಗಿದರು. ಎಲ್ಲಾ ಪ್ರಯಾಣಿಕರಿಗೆ ಲೈಫ್ ಜಾಕೆಟ್‌ ಒದಗಿಸದೇ ಇದ್ದುದರಿಂದ ದೊಡ್ಡ ದುರಂತ ಸಂಭವಿಸಿದೆ ಎನ್ನಲಾಗಿದೆ. ಪ್ರತಿಕೂಲ ಹವಾಮಾನವಿದ್ದರೂ ದೋಣಿಯನ್ನು ನೀರಿಗೆ ಇಳಿಸಲಾಗಿದೆ. ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಂತೆ ಪ್ರಯಾಣಿಕರು ಮಾಡಿದ ಮನವಿಗೆ ದೋಣಿಯ ಸಿಬ್ಬಂದಿ ಸ್ಪಂದಿಸಲಿಲ್ಲ ಎಂದು ಆರೋಪಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ದುರಂತ ಸಂಭವಿಸಿತ್ತು. ಯಾವುದೇ ವ್ಯವಸ್ಥೆ ಇರಲಿಲ್ಲ. ಎಲ್ಲರಿಗೂ ಲೈಫ್ ಜಾಕೆಟ್‌ಗಳನ್ನು ನೀಡಿರಲಿಲ್ಲ. ದೋಣಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇತ್ತು ಎನ್ನಲಾಗಿದೆ.