Asianet Suvarna News Asianet Suvarna News

S Jaishankar: ಅಬುಧಾಬಿಯ ಮೊದಲ ಹಿಂದು ದೇವಸ್ಥಾನಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ!

ಗಲ್ಫ್ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗಾಗಿ ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಆಗಮಿಸಿದ ಎಸ್ ಜೈಶಂಕರ್ ಅವರು ದೇವಾಲಯದ ನಿರ್ಮಾಣದಲ್ಲಿ ಭಾರತೀಯರ ಪ್ರಯತ್ನವನ್ನು ಶ್ಲಾಘಿಸಿದರು.
 

External Affairs Minister S Jaishankar Visits Site Of Abu Dhabis First BAPS Hindu Temple san
Author
First Published Sep 1, 2022, 12:33 PM IST

ಅಬುಧಾಬಿ (ಸೆ. 1): ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬುಧವಾರ ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಇದು "ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ" ಎಂದು ಅವರು ಬಣ್ಣಿಸಿದ್ದಾರೆ. ಗಲ್ಫ್ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗಾಗಿ ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಆಗಮಿಸಿದ ಎಸ್ ಜೈಶಂಕರ್ ಅವರು ದೇವಾಲಯದ ನಿರ್ಮಾಣದಲ್ಲಿ ಭಾರತೀಯರ ಶ್ರಮವನ್ನು ಶ್ಲಾಘಿಸಿದರು. "ಗಣೇಶ ಚತುರ್ಥಿಯಂದು, ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡಲು ಬಹಳ ಖುಷಿಯಾಗಿದೆ. ತ್ವರಿತ ಪ್ರಗತಿಯನ್ನು ನೋಡಲು ಸಂತೋಷವಾಗಿದೆ ಮತ್ತು ಇದರ ನಿರ್ಮಾಣದಲ್ಲಿ ಒಳಗೊಂಡಿರುವ ಭಕ್ತಿಯನ್ನೂ ಇಲ್ಲಿ ಕಾಣಬಹುದಾಗಿದೆ. ದೇವಾಲಯ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ತಂಡ, ಸಮುದಾಯ ಬೆಂಬಲಿಗರು ಮತ್ತು ಭಕ್ತರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿದೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಅವರು ಯುಎಇಯ ಸಹಿಷ್ಣುತೆ ಮತ್ತು ಸಹಬಾಳ್ವೆಯ ಸಚಿವ ಶೇಖ್ ನಹ್ಯಾನ್ ಬಿನ್ ಮಬಾರಕ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದರು ಮತ್ತು ಭಾರತೀಯ ಸಮುದಾಯ, ಯೋಗ ಚಟುವಟಿಕೆಗಳು, ಕ್ರಿಕೆಟ್ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ ಅವರ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ವಿದೇಶಾಂಗ ಸಚಿವರ ಭೇಟಿಯ ಮೂಲಕ ಶುಭ ಆರಂಭವಾಗಿದೆ. ಜೈಶಂಕರ್‌ (S Jaishankar) ಅಬುಧಾಬಿ ಮಂದಿರಕ್ಕೆ ಭೇಟಿ ನೀಡಿ ಅದರ ಸಂಕೀರ್ಣ ವಾಸ್ತುಶಿಲ್ಪಕ್ಕೆ ಇಟ್ಟಿಗೆಯನ್ನು ಇರಿಸಿದರು.  ಶಾಂತಿ, ಸಹನೆ ಮತ್ತು ಸಾಮರಸ್ಯದ ಸಂಕೇತವಾದ ಸಾಂಪ್ರದಾಯಿಕ ದೇವಾಲಯವನ್ನು ನಿರ್ಮಿಸುವಲ್ಲಿ ಎಲ್ಲಾ ಭಾರತೀಯರ ಪ್ರಯತ್ನಗಳನ್ನು ಈ ವೇಳೆ ಅವರು ಶ್ಲಾಘಿಸಿದರು' ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.


55,000 ಚದರ ಮೀಟರ್ ಜಾಗದಲ್ಲಿ ದೇವಾಲಯ ನಿರ್ಮಾಣವಾಗಲಿದೆ. ಈ ರಚನೆಯನ್ನು ಭಾರತೀಯ ದೇವಾಲಯದ ಕುಶಲಕರ್ಮಿಗಳು ಕೈಯಿಂದ ಕೆತ್ತಲಾಗುತ್ತದೆ ಮತ್ತು ಯುಎಇಯಲ್ಲಿ ಜೋಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಲಿದೆ. ಯುಎಇಯಲ್ಲಿದ್ದಾಗ, ಎಸ್ ಜೈಶಂಕರ್ (External Affairs Minister) ಅವರು ತಮ್ಮ ಸಹವರ್ತಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಉಭಯ ದೇಶಗಳ ದ್ವಿಪಕ್ಷೀಯ ವ್ಯವಹಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.
ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ (Bochasanwasi Akshar Purushottam Swaminarayan Sanstha) ವತಿಯಿಂದ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಯುಎಇಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದುಬೈ ಹಾಗೂ ಅಬುಧಾಬಿ ನಡುವಿನ ಅಲ್‌ ರಹಬಾ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2018ರಲ್ಲಿ ಇದರ ಕಾರ್ಯ ಆರಂಭವಾಗಿದ್ದು, 2024ರಲ್ಲಿ ಮುಕ್ತಾಯ ಕಾಣಲಿದೆ. ಒಟ್ಟು 27.7 ಎಕರೆ ಪ್ರದೇಶದಲ್ಲಿ ದೇವಸ್ಥಾನ ಹಾಗೂ ಅದರ ಸಂಕೀರ್ಣ (BAPS) ನಿರ್ಮಾಣವಾಗಲಿದೆ.

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ನಿಧನ

ಮಂದಿರವು ಸಂಪೂರ್ಣ ಕ್ರಿಯಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಕೀರ್ಣದ ಭಾಗವಾಗಿ ಸಾಂಪ್ರದಾಯಿಕ ಹಿಂದೂ ಮಂದಿರದ ಎಲ್ಲಾ ಅಂಶಗಳನ್ನು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಸಂಕೀರ್ಣವು ಸಂದರ್ಶಕರ ಕೇಂದ್ರ, ಪ್ರಾರ್ಥನಾ ಮಂದಿರಗಳು, ಪ್ರದರ್ಶನಗಳು, ಕಲಿಕೆಯ ಪ್ರದೇಶಗಳು, ಮಕ್ಕಳಿಗಾಗಿ ಕ್ರೀಡಾ ಪ್ರದೇಶ, ವಿಷಯಾಧಾರಿತ ಉದ್ಯಾನಗಳು, ನೀರಿನ ವ್ಯವಸ್ಥೆ, ಫುಡ್‌ ಕೋರ್ಟ್‌, ಪುಸ್ತಕಗಳು ಮತ್ತು ಗಿಫ್ಟ್‌ ಶಾಪ್‌ಗಳನ್ನು ಒಳಗೊಂಡಿರುತ್ತದೆ.

Hinglaj Mata Temple : ಪಾಕಿಸ್ತಾನದಲ್ಲಿ ಮತ್ತೊಂದು ಹಿಂದು ದೇವಸ್ಥಾನ ಧ್ವಂಸ!

888 ಕೋಟಿ ವೆಚ್ಚ: ಅಬುಧಾಬಿಯನ್ನಿ ನಿರ್ಮಾಣವಾಗುತ್ತಿರುವ ಮೊಟ್ಟಮೊದಲ ಹಿಂದೂ ದೇವಸ್ಥಾನಕ್ಕಾಗಿ 888 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರಸ್ತುತ ಯುಎಇಯಲ್ಲಿ 6.60 ಲಕ್ಷ ಹಿಂದುಗಳು ನೆಲೆಸಿದ್ದಾರೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ದೇವಸ್ಥಾನದ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.

 

Follow Us:
Download App:
  • android
  • ios