ಮಿಥಿಲೆಯಲ್ಲಿ ಆಚರಿಸಲಾಗುವ ತೀಮಿ ದಾಗ್ನೆ ಎಂಬ ಸಂಪ್ರದಾಯದಲ್ಲಿ, ಪತಿಯ ದೀರ್ಘಾಯುಷ್ಯಕ್ಕಾಗಿ ನವವಧುವಿನ ಮೊಣಕಾಲಿಗೆ ಉರಿಯುವ ಬತ್ತಿಯಿಂದ ಸುಡಲಾಗುತ್ತದೆ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ಹೆಣ್ಣಿನ ಶೋಷಣೆಯ ಕರಾಳ ಮುಖವನ್ನು ಈ ಆಚರಣೆ ಅನಾವರಣಗೊಳಿಸುತ್ತದೆ.

ಭಾರತವು ಸಹಸ್ರಾರು ಬಗೆಯ ಸಂಪ್ರದಾಯಗಳ ತವರೂರು ಎನ್ನುವಲ್ಲಿ ಎರಡು ಮಾತೇ ಇಲ್ಲ. ಅದರಲ್ಲಿಯೂ ಮದುವೆಯ ಆಚರಣೆಗೆ ಬಂದರಂತೂ ಐದಾರು ಕಿಲೋಮೀಟರ್​ಗೆ ಒಂದರಂತೆ ಒಂದೊಂದು ಬಗೆಯ ಮದುವೆ ಸಂಪ್ರದಾಯಗಳು. ಇವೆಲ್ಲವೂ ಸರಿ. ಆದರೆ ಮದುವೆಯ ಹೆಸರಿನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಸದಾ ಹೆಣ್ಣಿನ ಮೇಲೆ ಶೋಷಣೆ ಆಗುವಂಥ ಭಯಾನಕ, ಘೋರಾತಿಘೋರ ಘಟನೆಗಳು ಇದೇ ಭಾರತದಲ್ಲಿ ನಡೆಯುತ್ತಿರುವುದು ಮಾತ್ರ ಅತ್ಯಂತ ಕಳವಳಕಾರಿಯಾಗಿರುವ ವಿಷಯವಾಗಿದೆ. ಇಂಥ ಸಂಪ್ರದಾಯಗಳ ವಿಷಯಕ್ಕೆ ಬರುವುದಾದರೆ, ಹೆಣ್ಣನ್ನೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆಕೆ ಎಷ್ಟು ಸಹನಶೀಲಳು, ಎಷ್ಟು ಕಷ್ಟವನ್ನು ಸಹಿಸಿಕೊಳ್ಳಬಲ್ಲಳು... ಇತ್ಯಾದಿ ಇತ್ಯಾದಿ ಹೆಸರಿನಲ್ಲಿ ಶೋಷಣೆಗಳ ಸರಮಾಲೆಯೇ ಆಕೆಯ ಹೆಗಲಿಗೆ ಹಾಕುತ್ತಿರುವುದು ಮಾತ್ರ ಘನಘೋರವಾಗಿದೆ.

ಇದೆಂಥ ಸಂಪ್ರದಾಯ?

ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಇದರಲ್ಲಿ ನವ ವಿವಾಹಿತೆಯೊಬ್ಬಳ (ಆಕೆಯನ್ನು ನೋಡಿದರೆ ಇನ್ನೂ ಚಿಕ್ಕ ಹುಡುಗಿಯ ಹಾಗೆ ಕಾಣಿಸುತ್ತಾಳೆ) ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಲಾಗಿದೆ. ಹೆಂಗಳೆಯರು ಖುಷಿಯಿಂದ ಹಾಡುತ್ತಿದ್ದಾರೆ. ಈ ಮದುಮಗಳು ಮಾತ್ರ ನೋವಿನಿಂದ ಚೀರುತ್ತಿದ್ದಾಳೆ. ಆಕೆ ಚೀರದಂತೆ ಅಲ್ಲಿ ಹೇಳಲಾಗುತ್ತಿದೆ. ಮೊಣಕಾಲಿಗೆ ಏನನ್ನೋ ಸವರಿದಂತೆ ಕಾಣಿಸುತ್ತಿದೆ. ಆ ನೋವನ್ನು ಸಹಿಸಲಾಗದೇ ಆಕೆ ಜೋರಾಗಿ ಅಳುತ್ತಿದ್ದಾಳೆ. ಕೊನೆಯದಾಗಿ ಇನ್ನೇನನ್ನೋ ಆಕೆಯ ಮೊಣಕಾಲಿಗೆ ಹಾಕಿ, ನಂತರ ಆ ನೋವನ್ನು ಶಮನ ಮಾಡುವುದಕ್ಕಾಗಿ ಏನನ್ನೋ ಲೇಪಿಸಲಾಗುವುದನ್ನು ನೋಡಬಹುದು. ಅಷ್ಟರಲ್ಲಿಯೇ ಆ ನೋವಿಗೆ ವಧು ತತ್ತರಿಸಿಹೋಗಿದ್ದಾಳೆ.

ಮಧುಶ್ರವಣಿ

ಅಂದಹಾಗೆ ಈ ಸಂಪ್ರದಾಯದ ಹೆಸರು ಮಧುಶ್ರವಣಿ. ಮಿಥಿಲೆಯಲ್ಲಿ ಇದನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ನವವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಪ್ರಾರ್ಥಿಸಲು "ತೀಮಿ ದಾಗ್ನೆ" (ತೀಮಿ ದಾಗ್ನೆ) ಎನ್ನುವ ಆಚರಣೆಯನ್ನು ಮಾಡುತ್ತಾರೆ (ಮಾಡಿಸುತ್ತಾರೆ) 13 ದಿನಗಳ ಸುದೀರ್ಘ ಪೂಜೆಯ ನಂತರ, ನವವಿವಾಹಿತ ಮಹಿಳೆಯ ಮೊಣಕಾಲಿಗೆ ಉರಿಯುವ ಬತ್ತಿಯನ್ನು ಹಚ್ಚಲಾಗುತ್ತದೆ. ಇಲ್ಲಿ ಕೂಡ ಅದೇ ಆಗಿರುವುದು. ಆ ಉರಿಯನ್ನು ತಾಳದೇ ಯುವತಿ ಚೀರುವುದನ್ನು ನೋಡಬಹುದು.

ಉರಿಯುವ ಬತ್ತಿ!

ಪೂಜೆಯ ಕೊನೆಯ ದಿನದಂದು, ಸ್ನೇಹಿತರು ಮತ್ತು ವೃದ್ಧ ಮಹಿಳೆಯರ ಸಮ್ಮುಖದಲ್ಲಿ, ನವವಿವಾಹಿತ ಮಹಿಳೆಯ ಮೊಣಕಾಲಿನ ಮೇಲೆ ಉರಿಯುವ ಬತ್ತಿಯನ್ನು ಹಚ್ಚಲಾಗುತ್ತದೆ. ಕಲೆ ಆಳವಾಗಿದ್ದಷ್ಟೂ ಗಂಡನ ಆಯುಷ್ಯ ಹೆಚ್ಚುತ್ತದೆ ಎನ್ನುವುದು ನಂಬಿಕೆಯಂತೆ. ಅಂದರೆ ಗಂಡನ ಆಯಸ್ಸು ಹೆಚ್ಚಿಸಲು ಹೆಣ್ಣಾಗಿ ಹುಟ್ಟಿದ ತಪ್ಪಿಗೆ, ಈ ಬೆಂಕಿಯನ್ನು ಆಕೆ ಲೇಪಿಸಿಕೊಳ್ಳಬೇಕಂತೆ. ಕೆಲವು ಸ್ಥಳಗಳಲ್ಲಿ, ಸುಟ್ಟಗಾಯಗಳನ್ನು ತಪ್ಪಿಸಲು ಉರಿಯುವ ದೀಪದ ಬದಲಿಗೆ 'ಕೋಲ್ಡ್ ಟೆಮಿ' ಅನ್ನು ಈಗ ಬಳಸಲಾಗುತ್ತಿದೆ. ಒಟ್ಟಿನಲ್ಲಿ ಗಂಡನ ಆಯಸ್ಸು ಬೇಕು, ಏಕೆಂದರೆ ಹೆಣ್ಣು ದೀರ್ಘ ಸುಮಂಗಲಿಯಾಗಬೇಕಲ್ಲಾ, ಇಲ್ಲದಿದ್ದರೆ ಆಕೆಯ ಸ್ಥಿತಿ ಇನ್ನೂ ಸಮಾಜದಲ್ಲಿ ಯಾವ ರೀತಿ ಇದೆ ಎನ್ನುವುದು ಬೇರೆ ಹೇಳಬೇಕಾಗಿಲ್ಲ. ಆದ್ದರಿಂದ ಗಂಡನಿಗಿಂತ ತಾನೇ ಮೊದಲು ಸಾಯಲು, ಇಂಥ ಸಂಪ್ರದಾಯ ಅನಿವಾರ್ಯವಾಗಿದೆ!

View post on Instagram