ನವದೆಹಲಿ(ಡಿ.01): ಮೂರು ದಿನಗಳ ಹಿಂದಷ್ಟೇ ಕೊರೋನಾ ಲಸಿಕೆ ತಯಾರಿಸುತ್ತಿರುವ ಮೂರು ಘಟಕಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಸಿಕೆಯ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳ ಮೂರು ತಂಡಗಳ ಜೊತೆಗೆ ಸಭೆ ನಡೆಸಿದರು. ತನ್ಮೂಲಕ ದೇಶಕ್ಕೆ ಕೊರೋನಾ ಲಸಿಕೆ ಆದಷ್ಟುಬೇಗ ಲಭಿಸುವಂತೆ ನೋಡಿಕೊಳ್ಳಲು ವಿಜ್ಞಾನಿಗಳಲ್ಲಿ ಸ್ಪೂರ್ತಿ ತುಂಬಿದರು.

ಪುಣೆಯ ಜೆನೋವಾ ಬಯೋಫಾರ್ಮಾಸುಟಿಕಲ್ಸ್‌ ಲಿ., ಹೈದರಾಬಾದ್‌ನ ಬಯೋಲಾಜಿಕಲ್‌ ಇ ಲಿ. ಹಾಗೂ ಹೈದರಾಬಾದ್‌ನ ಡಾ| ರೆಡ್ಡೀಸ್‌ ಲ್ಯಾಬೋರೇಟರೀಸ್‌ ಲಿ. ಸಂಸ್ಥೆಗಳ ವಿಜ್ಞಾನಿಗಳ ಜೊತೆಗೆ ವರ್ಚುವಲ್‌ ಸಭೆ ನಡೆಸಿದ ಮೋದಿ, ಕೊರೋನಾ ಲಸಿಕೆಯ ಬಗ್ಗೆ ಜನರಿಗೆ ಸರಳ ಭಾಷೆಯಲ್ಲಿ ಮಾಹಿತಿ ನೀಡಿ ಎಂದು ಕರೆ ನೀಡಿದರು.

ನಮ್ಮ ಲಸಿಕೆ ಶೇ.100ರಷ್ಟು ಪರಿಣಾಮಕಾರಿ, ಬಳಕೆಗೆ ಅನುಮತಿ ಕೊಡಿ: ಮಾಡೆರ್ನಾ

‘ದಕ್ಷತೆಯೂ ಸೇರಿದಂತೆ ಕೊರೋನಾ ಲಸಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ತಿಳಿಸಬೇಕು. ಲಸಿಕೆಗೆ ಅನುಮೋದನೆ ನೀಡುವ ಎಲ್ಲಾ ಇಲಾಖೆಗಳೂ ಕೂಡ ಲಸಿಕೆ ಉತ್ಪಾದಕ ಕಂಪನಿಗಳ ಜೊತೆಗೆ ಕಾರ್ಯನಿರ್ವಹಿಸಿ ಸಕಾಲಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಆಗ ಈ ಕಂಪನಿಗಳ ಶ್ರಮಕ್ಕೆ ಬೆಲೆ ದೊರಕುವುದರ ಜೊತೆಗೆ ಭಾರತ ಮತ್ತು ಜಗತ್ತಿನ ಅಗತ್ಯವೂ ಈಡೇರುತ್ತದೆ’ ಎಂದು ಮೋದಿ ಹೇಳಿದರು.

ಇದೇ ವೇಳೆ, ಲಸಿಕೆಯ ಸಂಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳ ಶ್ರಮವನ್ನು ಶ್ಲಾಘಿಸಿದ ಮೋದಿ, ಲಸಿಕೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರಬಹುದಾದ ಹೊಸ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಿದರು. ಅಲ್ಲದೆ, ಲಸಿಕೆಯ ಸಾಗಣೆ, ಶೇಖರಣೆ, ಕೋಲ್ಡ್‌ ಚೈನ್‌, ವಿತರಣೆ, ಲಸಿಕೆಯ ಪರೀಕ್ಷೆ ಇತ್ಯಾದಿಗಳ ಕುರಿತೂ ಮಾಹಿತಿ ವಿನಿಮಯ ಮಾಡಿಕೊಂಡರು.

ಆಗಸ್ಟ್‌ ಒಳಗೆ 30 ಕೋಟಿ ಜನರಿಗೆ ಲಸಿಕೆ: ಕೇಂದ್ರ!

ಮೋದಿ ಜೊತೆ ಚರ್ಚೆ ನಡೆಸಿದ ಸಂಸ್ಥೆಗಳ ಕೊರೋನಾ ಲಸಿಕೆಗಳು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಈ ಲಸಿಕೆಗಳ ಪರೀಕ್ಷೆಗೆ ಸಂಬಂಧಿಸಿದ ವರದಿ ಹಾಗೂ ಅಂಕಿಅಂಶಗಳು ಮುಂದಿನ ವರ್ಷಾರಂಭದಲ್ಲಿ ಬರುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.