ನವದೆಹಲಿ(ಡಿ.01): ಮುಂದಿನ ವರ್ಷದ ಜುಲೈ-ಆಗಸ್ಟ್‌ ತಿಂಗಳೊಳಗೆ ದೇಶದ 25-30 ಕೋಟಿ ಜನರಿಗೆ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ.

ಮುಂದಿನ ವರ್ಷದ ಮೊದಲ 3-4 ತಿಂಗಳಲ್ಲಿ ದೇಶದ ಜನರಿಗೆ ಕೊರೋನಾ ಲಸಿಕೆ ದೊರೆಯುವ ಸಾಧ್ಯತೆಯಿದೆ. ನಂತರ ಜುಲೈ-ಆಗಸ್ಟ್‌ ವೇಳೆಗೆ ಸುಮಾರು 25-30 ಕೋಟಿ ಜನರಿಗೆ ಲಸಿಕೆ ನೀಡಲು ನಾವು ಯೋಜನೆ ರೂಪಿಸಿದ್ದೇವೆ. ಸದ್ಯದಲ್ಲೇ ದೇಶಕ್ಕೆ ಕೊರೋನಾ ಕಾಲಿಟ್ಟು 11 ತಿಂಗಳು ತುಂಬಲಿದೆ. ಈಗಲೂ ಕೊರೋನಾ ವಿರುದ್ಧ ಹೋರಾಡುವ ಪ್ರಮುಖ ಅಸ್ತ್ರವೆಂದರೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ಆಗಿದ್ದು, ಅದನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಈ ವರ್ಷದ ಜನವರಿಯಲ್ಲಿ ನಮ್ಮ ದೇಶದಲ್ಲಿ 1 ಕೊರೋನಾ ಪ್ರಯೋಗಾಲಯವಿತ್ತು. ಈಗ ಅದರ ಸಂಖ್ಯೆ 2165ಕ್ಕೆ ಏರಿದೆ. ನಿತ್ಯ 10 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ 14 ಕೋಟಿಗೂ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಜಗತ್ತಿನಲ್ಲೇ ಕೊರೋನಾ ಸಾವಿನ ದರ ಅತ್ಯಂತ ಕಡಿಮೆಯಿರುವ ದೇಶಗಳಲ್ಲಿ ನಮ್ಮದೂ ಒಂದು. ಸರ್ಕಾರದ ಬದ್ಧತೆಯಿಂದಾಗಿ ಇದೆಲ್ಲ ಸಾಧ್ಯವಾಗಿದೆ ಎಂದು ತಿಳಿಸಿದರು.