Asianet Suvarna News Asianet Suvarna News

ಹಿನ್ನಡೆ, ಪರದಾಟಗಳನ್ನು ಅನುಭವಿಸಿದ ಬಳಿಕವೂ, ಭಾರತದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರುತ್ತಿದೆ ಖಲಿಸ್ತಾನ ಚಳುವಳಿ

ಆಪರೇಶನ್ ಬ್ಲೂ ಸ್ಟಾರ್ ಎಂಬ ಈ ಕಾರ್ಯಾಚರಣೆ ಖಲಿಸ್ತಾನ್ ಚಳುವಳಿಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಈ ಕಾರ್ಯಾಚರಣಾ ಸಂದರ್ಭದಲ್ಲಿ, ಭಾರತದ ಯೋಧರು, ಭಕ್ತಾದಿಗಳು, ಹಾಗೂ ಭಿಂದ್ರನ್‌ವಾಲೆ ಸೇರಿದಂತೆ 3,500ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು ಎಂದು ಅಂದಾಜಿಸಲಾಗಿದೆ. 

Even after suffering setbacks the Khalistan movement continues to influence Indias foreign policy san
Author
First Published Sep 20, 2023, 7:15 PM IST

ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ 1947ರಲ್ಲಿ ಬ್ರಿಟನ್ನಿನಿಂದ ಸ್ವಾತಂತ್ರ್ಯ ಪಡೆದ ಬಳಿಕ, ಒಂದಷ್ಟು ಜನರು ಇಷ್ಟೊಂದು ವಿಭಿನ್ನ ಪ್ರದೇಶಗಳನ್ನು ಒಳಗೊಂಡಿರುವ ದೇಶ ದೀರ್ಘಕಾಲ ಒಂದಾಗಿರುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ ಅವರ ನಿರೀಕ್ಷೆಗಳನ್ನು ಮೀರಿ, ಭಾರತ ಏಕತೆಯನ್ನು ಕಾಪಾಡಿಕೊಂಡು ಬಂದಿತು. ಆದರೆ ಭಾರತದ ಸಮಗ್ರತೆಗೆ ಹಲವಾರು ಸವಾಲುಗಳು ಎದುರಾಗಿದ್ದವು. ಅಂತಹ ಸವಾಲುಗಳಲ್ಲಿ ಪ್ರಮುಖ ಸವಾಲೆಂದರೆ ಖಲಿಸ್ತಾನ ಚಳುವಳಿ. ಈ ಚಳುವಳಿ ಸಿಖ್ ಸಮುದಾಯಕ್ಕಾಗಿ ಪ್ರತ್ಯೇಕ ದೇಶವನ್ನು ರೂಪಿಸುವ ಗುರಿಯನ್ನು ಹೊಂದಿತ್ತು. ಸೆಪ್ಟೆಂಬರ್ 18ರಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು, ಖಲಿಸ್ತಾನ ಚಳುವಳಿಗೆ ಬೆಂಬಲ ನೀಡಿದ್ದ ಕೆನಡಾದ ಸಿಖ್ ನಾಯಕ ಒಬ್ಬರನ್ನು ಭಾರತ ಸರ್ಕಾರದ ಏಜೆಂಟ್‌ಗಳು ಜೂನ್ ತಿಂಗಳಲ್ಲಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿದ್ದರು. ಭಾರತ ಸರ್ಕಾರ ಇಂತಹ ಆರೋಪಗಳನ್ನು ತಳ್ಳಿಹಾಕಿದ್ದು, ಇದರಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದಿದ್ದು, ಕೆನಡಾ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದೆ.

ಖಲಿಸ್ತಾನ ಚಳುವಳಿ ಎಷ್ಟು ಗಂಭೀರವಾಗಿದೆ?

ಖಲಿಸ್ತಾನ ಚಳುವಳಿಯ ಮೂಲ ಬೇರುಗಳು ಸಿಖ್ ಧರ್ಮದಲ್ಲಿವೆ. ಸಿಖ್ ಧರ್ಮವನ್ನು ಭಾರತದಲ್ಲಿ 23 ಮಿಲಿಯನ್ ಜನರು ಮತ್ತು ಜಗತ್ತಿನಾದ್ಯಂತ 3 ಮಿಲಿಯನ್ ಜನರು ಅನುಸರಿಸುತ್ತಾರೆ. ಸಿಖ್ ಧರ್ಮ ಪಂಜಾಬಿನಲ್ಲಿ 15ನೇ ಶತಮಾನದಲ್ಲಿ ಆರಂಭವಾಯಿತು. ಆ ಅವಧಿಯಲ್ಲಿ, ಭಾರತದ ಉತ್ತರ ಭಾಗದ ಪಂಜಾಬ್, ಮೊಘಲರ ಆಳ್ವಿಕೆಗೆ ಒಳಪಟ್ಟಿತ್ತು. 1699ರಲ್ಲಿ ಸಿಖ್ಖರ ಧರ್ಮಗುರುಗಳಾದ ಗುರು ಗೋಬಿಂದ್ ಸಿಂಗ್ ಅವರು ಧರ್ಮದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದರು. ಅವರಿಗೆ ಮುಸ್ಲಿಂ ಆಡಳಿತದಡಿ ಇರುವುದು ಇಷ್ಟವಿಲ್ಲದರಿಂದ, ಹಾಗೂ ಹಲವು ಸಿಖ್ ಅರ್ಚಕರು ಭ್ರಷ್ಟಾಚಾರ ನಡೆಸುತ್ತಿದ್ದರಿಂದ ಈ ಬದಲಾವಣೆಗಳನ್ನು ಜಾರಿಗೆ ತಂದರು. ಅವರು ಜಾರಿಗೆ ತಂದ ಸುಧಾರಣೆಗಳನ್ನು 'ಖಾಲ್ಸಾ' ಪರಂಪರೆ ಎನ್ನಲಾಗಿದ್ದು, ಅದು ಸಿಖ್ ಧರ್ಮದ ಅಭ್ಯಾಸ ವಿಧಾನವನ್ನು ಬದಲಾಯಿಸಿತ್ತು. ಅದರೊಡನೆ, ಖಾಲ್ಸಾ ಪಂಜಾಬಿನಲ್ಲಿ ಸಿಖ್ ಆಡಳಿತ ತರುವ ಮಹತ್ತರ ಗುರಿಯನ್ನು ಹೊಂದಿತ್ತು.

ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ, ಒಂದಷ್ಟು ಸಿಖ್ಖರು ತಮ್ಮದೇ ಆದ ಪ್ರತ್ಯೇಕ ರಾಷ್ಟ್ರವನ್ನು ಸ್ಥಾಪಿಸುವ ಬಯಕೆ ಹೊಂದಿದ್ದರು. ಆದರೆ, ಅವರಿಗೆ ಅಷ್ಟೊಂದು ಸಂಖ್ಯಾಬಲ ಇರಲಿಲ್ಲ. 1941ರ ಜನಗಣತಿಯ ಪ್ರಕಾರ, ಸಿಖ್ಖರು ಬ್ರಿಟಿಷ್ ಪಂಜಾಬಿನ 15% ಜನಸಂಖ್ಯೆ ಹೊಂದಿದ್ದರು. ಬ್ರಿಟಿಷರು ಪಂಜಾಬನ್ನು ಎರಡು ಭಾಗಗಳಾಗಿ ವಿಭಜಿಸಿ, ಒಂದು ಭಾಗವನ್ನು ಭಾರತಕ್ಕೆ ನೀಡಿದರೆ, ಇನ್ನೊಂದು ಭಾಗವನ್ನು ಪಾಕಿಸ್ತಾನಕ್ಕೆ ನೀಡಿದರು. ಪಾಕಿಸ್ತಾನದ ಭಾಗದ ಪಂಜಾಬಿನಲ್ಲಿದ್ದ ಬಹುತೇಕ ಸಿಖ್ಖರು ಭಾರತಕ್ಕೆ ತೆರಳಲು ನಿರ್ಧರಿಸಿದರು.

ಅಷ್ಟಾದರೂ ಖಲಿಸ್ತಾನದ ಸ್ಥಾಪನೆಯ ಯೋಜನೆ ದೂರಾಗಿರಲಿಲ್ಲ. ಅದು 1970ರ ದಶಕದಲ್ಲಿ ಮತ್ತು 1980ರ ದಶಕದಲ್ಲಿ ಮರಳಿ ಮೂಡಿತ್ತು. ಅದಕ್ಕೆ ಬ್ರಿಟನ್ ಮತ್ತು ಕೆನಡಾಗಳಲ್ಲಿದ್ದ ಸಿಖ್ ಸಮುದಾಯದ ಜನರು ನೀರೆರೆದಿದ್ದರು. 1980ರಲ್ಲಿ ಲಂಡನ್ನಿನಲ್ಲಿ ವೈದ್ಯರಾಗಿದ್ದ ಜಗ್‌ಜಿತ್ ಸಿಂಗ್ ಚೌಹಾಣ್ ಎಂಬವರು ತಾನು 'ರಿಪಬ್ಲಿಕ್ ಆಫ್ ಖಲಿಸ್ತಾನ'ದ ಅಧ್ಯಕ್ಷ ಎಂದು ಘೋಷಿಸಿಕೊಂಡರು.

ಭಾರತ ಸರ್ಕಾರ ಆರಂಭದಲ್ಲಿ ಖಲಿಸ್ತಾನ ಚಳುವಳಿಯ ಕುರಿತು ಅಷ್ಟೊಂದು ಆತಂಕಿತವಾಗಿರಲಿಲ್ಲ. ಭಾರತ ಸರ್ಕಾರ ಈ ಅವಧಿಯಲ್ಲಿ ಪಂಜಾಬ್ ರಾಜಕಾರಣದ ಕುರಿತಷ್ಟೇ ತಲೆ ಕೆಡಿಸಿಕೊಳ್ಳುತ್ತಿತ್ತು. ಆದರೆ 1970ರ ದಶಕದಲ್ಲಿ ಪಂಜಾಬಿನ ಜನತೆ ಸ್ವಾಯತ್ತ ಆಡಳಿತ ಮತ್ತು ಸಿಖ್ ಬೆಂಬಲಿತ ನೀತಿಗಳುಗಾಗಿ ಆಗ್ರಹಿಸುತ್ತಿದ್ದರು. ಆ ಅವಧಿಯಲ್ಲಿ ಭಾರತದ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್, ಈ ಬೇಡಿಕೆಗಳನ್ನು ಭಾರತವನ್ನು ಒಡೆಯುವ ಪ್ರಯತ್ನಗಳೆಂದು ಪರಿಗಣಿಸಿತ್ತು. 1980ರ ದಶಕದಲ್ಲಿ ಸ್ವಾಯತ್ತ ಆಡಳಿತದ ಬೇಡಿಕೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು.

ಇಂತಹ ಹಿಂಸಾಚಾರಗಳಿಗೆ ಮೂಲ ಕಾರಣವೆಂದರೆ, ಸಾಕಷ್ಟು ಜನರು ಮೂಲಭೂತವಾದವನ್ನು ಬೆಂಬಲಿಸುತ್ತಿದ್ದ, ಸಿಖ್ ಬೋಧಕ ಜರ್ನೇಲ್ ಸಿಂಗ್ ಭಿಂದ್ರನ್‌ವಾಲೆಯ ಬೆಂಬಲಿಗರಾಗಿದ್ದದ್ದು. ಭಿಂದ್ರನ್‌ವಾಲೆ ಸಿಖ್ಖರು ಸ್ವತಂತ್ರ ಭಾರತದಲ್ಲಿ ಗುಲಾಮರಂತಾಗಿದ್ದಾರೆ ಎಂದಿದ್ದು, ತಮ್ಮ ಧರ್ಮದ ಮೂಲ ಆಶಯಗಳಿಗೆ ಹಿಂದಿರುಗಬೇಕು ಎಂದು ಕರೆ ನೀಡಿದ್ದ. ಭಿಂದ್ರನ್‌ವಾಲೆ ನೇರವಾಗಿ ಸ್ವತಂತ್ರ ಖಲಿಸ್ತಾನದ ಬೇಡಿಕೆ ಸಲ್ಲಿಸದಿದ್ದರೂ, ಅಂತಹ ಪ್ರಸ್ತಾವನೆ ಬಂದರೆ ಖಂಡಿತಾ ಬೇಡವೆನ್ನುತ್ತಿರಲಿಲ್ಲ. ಆತನ ಮಾತುಗಳು ವಿವಿಧ ಗುಂಪುಗಳ ಜನರ ನಡುವಿನ ಹಿಂಸಾಚಾರವನ್ನು ಇನ್ನಷ್ಟು ವಿಕೋಪಕ್ಕೆ ಒಯ್ದಿದ್ದವು.

ಇದರಲ್ಲಿ ಅತ್ಯಂತ ಪ್ರಮುಖ ವಿದ್ಯಮಾನ 1984ರಲ್ಲಿ ಜರುಗಿತು. ಆ ಸಂದರ್ಭದಲ್ಲಿ, ಭಿಂದ್ರನ್‌ವಾಲೆ ಮತ್ತು ಆತನ ಬೆಂಬಲಿಗರು ಸಿಖ್ ಧರ್ಮದ ಪರಮ ಪವಿತ್ರ ತಾಣವಾದ, ಪಂಜಾಬಿನ ಅಮೃತಸರ ನಗರದಲ್ಲಿನ ಸ್ವರ್ಣ ಮಂದಿರವನ್ನು ಆಕ್ರಮಿಸಿಕೊಂಡಿದ್ದರು. ಅವರು ಅಲ್ಲಿಂದಲೇ ತಮ್ಮ ಬಂಡಾಯ ಆರಂಭಿಸಲು ಆಲೋಚಿಸಿದ್ದರು. ಪಂಜಾಬಿನಾದ್ಯಂತ ಹಿಂಸಾಚಾರ ಹರಡುತ್ತಿದ್ದಂತೆ, ಭಾರತ ಸರ್ಕಾರ ಸ್ವರ್ಣ ಮಂದಿರದ ಒಳ ಪ್ರವೇಶಿಸಿ, ಭಯೋತ್ಪಾದಕರನ್ನು ಹೊರಹಾಕುವ ನಿರ್ಧಾರಕ್ಕೆ ಬಂತು.

ಆಪರೇಶನ್ ಬ್ಲೂ ಸ್ಟಾರ್ ಎಂಬ ಈ ಕಾರ್ಯಾಚರಣೆ ಖಲಿಸ್ತಾನ್ ಚಳುವಳಿಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಈ ಕಾರ್ಯಾಚರಣಾ ಸಂದರ್ಭದಲ್ಲಿ, ಭಾರತದ ಯೋಧರು, ಭಕ್ತಾದಿಗಳು, ಹಾಗೂ ಭಿಂದ್ರನ್‌ವಾಲೆ ಸೇರಿದಂತೆ 3,500ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು ಎಂದು ಅಂದಾಜಿಸಲಾಗಿದೆ. ಈ ಹಿಂಸಾಚಾರ ಸಿಖ್ ಸಮುದಾಯದ ಮೇಲೆ ಆಳವಾದ ಪರಿಣಾಮ ಉಂಟುಮಾಡಿತ್ತು. ಅದು ಗಂಭೀರವಾದ, ಭಾವನಾತ್ಮಕ ಗಾಯವನ್ನೇ ಮಾಡಿತ್ತು. ಅದಾದ ಕೆಲ ಸಮಯದ ಬಳಿಕ, ಈ ಕಾರ್ಯಾಚರಣೆಗೆ ಆದೇಶ ನೀಡಿದ್ದ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರೇ ಗುಂಡಿಟ್ಟು ಹತ್ಯೆ ಮಾಡಿದರು. ಈ ಘಟನೆಯಂತೂ ಇನ್ನಷ್ಟು ಹಿಂಸಾಚಾರಗಳಿಗೆ ಹಾದಿ ಮಾಡಿಕೊಟ್ಟಿತು. ದೇಶಾದ್ಯಂತ ಸಿಖ್ಖರ ಮೇಲೆ ದಾಳಿಗಳಾಗಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡರು.

ಇದರ ಪರಿಣಾಮವಾಗಿ, ಖಲಿಸ್ತಾನ್ ಚಳುವಳಿಗೆ ಇನ್ನಷ್ಟು ಬಲ ಬಂದಿತು. ಭಾರತ ಮತ್ತು ವಿದೇಶಗಳಲ್ಲಿದ್ದ ಸಿಖ್ಖರು ಈ ಚಳುವಳಿಗೆ ಬೆಂಬಲ ನೀಡಿ, ಖಲಿಸ್ತಾನ್ ಉಗ್ರಗಾಮಿಗಳ ಹಿಂಸಾಚಾರವೂ ಹೆಚ್ಚಾಗತೊಡಗಿತು. 1985ರಲ್ಲಿ ಖಲಿಸ್ತಾನ್ ಉಗ್ರರು ಮಾಂಟ್ರಿಯಲ್ ನಿಂದ ಲಂಡನ್ನಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇಟ್ಟಿದ್ದರು. ಈ ಘೋರ ಘಟನೆಯಲ್ಲಿ 329 ಪ್ರಯಾಣಿಕರು, ಅದರಲ್ಲೂ ಹೆಚ್ಚಾಗಿ ಕೆನಡಿಯನ್ನರು ಪ್ರಾಣ ಕಳೆದುಕೊಂಡರು.

ಖಲಿಸ್ತಾನ ಉಗ್ರರ ಎಚ್ಚರಿಕೆ ಬೆನ್ನಲ್ಲೇ ಕೆನಾಡ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ!

ಕಾಲ ಕ್ರಮೇಣ, ಭಾರತದಲ್ಲಿ ಖಲಿಸ್ತಾನ್ ಚಳುವಳಿ ಬಲ ಕಳೆದುಕೊಂಡಿತು. ಇದಕ್ಕೆ ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಆರ್ಥಿಕ ಸುಧಾರಣೆಗಳು ಕಾರಣವಾಗಿದ್ದವು. ಆದರೆ, ಇಂದಿಗೂ ಒಂದಷ್ಟು ಸಿಖ್ಖರು ಭಿಂದ್ರನ್‌ವಾಲೆಯನ್ನು ಹುತಾತ್ಮ ಎಂದು ಪರಿಗಣಿಸಿದ್ದರೆ, ಬೆರಳೆಣಿಕೆಯಷ್ಟು ಜನರು ಆತನ ಹಾದಿಯಲ್ಲಿ ಸಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆ ಪ್ರಯತ್ನ ನಡೆಸಿದವರನ್ನು ಕ್ಷಿಪ್ರವಾಗಿ ತಡೆಗಟ್ಟಲಾಗುತ್ತಿದೆ. ಖಲಿಸ್ತಾನದ ಸ್ವಾತಂತ್ರವನ್ನು ಬೆಂಬಲಿಸುವ ಏಕೈಕ ರಾಜಕೀಯ ಪಕ್ಷಕ್ಕೆ ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ 3%ಕ್ಕೂ ಕಡಿಮೆ ಮತಗಳು ಲಭಿಸಿದ್ದವು.

ತಕ್ಷಣ ಹಿಂದೂಗಳು ಕೆನಡ ತೊರೆಯಬೇಕು, ಉಗ್ರ ಖಲಿಸ್ತಾನದ ಸಹ ಸಂಘಟನೆ ಬೆದರಿಕೆ!

ಇನ್ನು ಭಾರತದ ಹೊರಗಡೆ, ಖಲಿಸ್ತಾನ್ ಚಳುವಳಿ ಇಂದಿಗೂ ಸಕ್ರಿಯವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಕೆನಡಾಗಳಲ್ಲಿರುವ ಹಲವು ಗುಂಪುಗಳು ಇಂದಿಗೂ ಪ್ರತ್ಯೇಕತಾವಾದವನ್ನು ಬೆಂಬಲಿಸುತ್ತಿವೆ. ನಿಜ್ಜರ್ ಹತ್ಯೆ ಮತ್ತು ಅದಕ್ಕಾಗಿ ಜಸ್ಟಿನ್ ಟ್ರೂಡೋ ಭಾರತದ ಮೇಲೆ ಆರೋಪ ಹೊರಿಸುವ ಮೊದಲೇ ಭಾರತ ಮತ್ತು ಕೆನಡಾದ ಸಂಬಂಧಗಳು ಹದಗೆಡತೊಡಗಿತ್ತು. ಇದೇ ರೀತಿಯ ಉದ್ವಿಗ್ನ ಪರಿಸ್ಥಿತಿಗಳು ಇತರ ರಾಷ್ಟ್ರಗಳ ಜೊತೆಗೂ ತಲೆದೋರುವ ಸಾಧ್ಯತೆಗಳಿವೆ. ಖಲಿಸ್ತಾನ ಚಳುವಳಿ ಇಂದು ಭಾರತದ ಆಂತರಿಕ ಒಗ್ಗಟ್ಟಿಗೆ ಯಾವುದೇ ಅಪಾಯ ತಂದೊಡ್ಡದಿದ್ದರೂ, ಅದು ಭಾರತದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರುವುದು ಮುಂದುವರೆದಿದೆ.

Follow Us:
Download App:
  • android
  • ios