ಕಾಂಗ್ರೆಸ್ ಸತ್ಯ ಎದುರಿಸುವ ದಿನ ಬರಲಿದೆ: ವಿಪಕ್ಷದ ವಿರುದ್ಧ ಬೊಮ್ಮಾಯಿ ಕಿಡಿ
* ಈಶ್ವರಪ್ಪ ಬಂಧನಕ್ಕೆ ಆಗ್ರಹಿಸುತ್ತಿರುವ ವಿಪಕ್ಷದ ವಿರುದ್ಧ ಸಿಎಂ ಕಿಡಿ
* ಕಾಂಗ್ರೆಸ್ ಸತ್ಯ ಎದುರಿಸುವ ದಿನ ಬರಲಿದೆ: ಬೊಮ್ಮಾಯಿ
* ತನಿಖೆಯಾಗುವವರೆಗೂ ಸುಮ್ಮನಿರಬೇಕು, ನೀವೇ ಜಡ್ಜ್ ಆಗಬೇಡಿ
ಬೆಂಗಳೂರು(ಏ.16): ‘ಕಾಂಗ್ರೆಸ್‌ನವರು ತಾವೇ ಶುದ್ಧರು ಎನ್ನುವಂತೆ ವರ್ತಿಸುತ್ತಿದ್ದು, ಸ್ವಲ್ಪ ದಿನದಲ್ಲಿ ಅವರಿಗೆ ಸತ್ಯವನ್ನು ಎದುರಿಸುವ ಕಾಲ ಸನ್ನಿಹಿತವಾಗಲಿದೆ.’
-ಇದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ.ಎಸ್.ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸುತ್ತಿರುವ ಕಾಂಗ್ರೆಸಿಗರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ತಿರುಗೇಟು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಆ ಮೂವರನ್ನು ಬಿಟ್ಟು ನಾಲ್ಕನೆಯವರು ಯಾರು ?
ಹುಬ್ಬಳ್ಳಿ, ಗದಗ ಮತ್ತು ಇಳಕಲ್‌ಗಳಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಕ್ಕೆ ಮುಜುಗರವಾಗಬಾರದೆಂದು ಈಶ್ವರಪ್ಪ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ಶೀಘ್ರ ಆರೋಪಮುಕ್ತರಾಗುವ ವಿಶ್ವಾಸವಿದೆ. ಅವರ ಬಂಧನಕ್ಕೆ ಆಗ್ರಹ ಮಾಡಲು ಇವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಜಾಜ್‌ರ್ ಬಂಧನವಾಗಿರಲಿಲ್ಲ:
ಈಶ್ವರಪ್ಪ ಬಂಧನದ ಬಗ್ಗೆ ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಕೇಸ್‌ನಲ್ಲೂ ಜಾಜ್‌ರ್ ಅವರನ್ನು ಬಂಧಿಸಿರಲಿಲ್ಲ. ಕರ್ನಾಟಕ ಪೊಲೀಸರು ತನಿಖೆ ಮಾಡುವಾಗಲೂ ಬಂಧಿಸಿರಲಿಲ್ಲ. ಕೇಸ್ ಸಿಬಿಐಗೆ ವರ್ಗಾವಣೆಯಾದಾಗಲೂ ಬಂಧನ ಆಗಿಲ್ಲ. ತನಿಖೆಯಾಗುವವರೆಗೂ ಸುಮ್ಮನಿರಬೇಕು. ಸತ್ಯ ಹೊರಬರುತ್ತದೆ. ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳು, ನ್ಯಾಯಮೂರ್ತಿಗಳಾಗುವ ಅವಶ್ಯಕತೆ ಇಲ್ಲ. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಮುಕ್ತವಾಗಿ ತನಿಖೆಯಾಗಲು ಬಿಡಬೇಕು ಎಂದು ಹೇಳಿದರು.
ಸಂತೋಷ್ ಆತ್ಮಹತ್ಯೆ: ಕ್ಷೇತ್ರದಲ್ಲಿ ನಡೆಸಿದ ಕಾಮಗಾರಿ ಗೊತ್ತಿರಲಿಲ್ಲವೇ? ಹೆಬ್ಬಾಳ್ಕರ್‌ಗೆ ನಿರಾಣಿ ಪ್ರಶ್ನೆ
ಸಾವಿನ ಮನೆಯಲ್ಲಿ ರಾಜಕೀಯ:
ಈಶ್ವರಪ್ಪ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಅರಗಿಸಿಕೊಳ್ಳಲು ಆಗದೇ ಈ ರೀತಿಯ ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಸಾವಿನ ಮನೆಯಲ್ಲಿ ರಾಜಕೀಯ ಲಾಭದ ಏಣಿಕೆ ಮಾಡುವ ಕೆಲಸ ನಡೆಸಿದ್ದಾರೆ. ಈಗಾಗಲೇ ಜನರಿಂದ ತಿರಸ್ಕಾರಗೊಂಡಿರುವ ಅವರ ವರ್ತನೆ ಇದೇ ರೀತಿ ಮುಂದುವರಿದಲ್ಲಿ ಕೇಂದ್ರದಂತೆ ಕರ್ನಾಟಕದಲ್ಲಿಯೂ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಲೇವಡಿ ಮಾಡಿದರು.
ಈಶ್ವರಪ್ಪ ವಿರುದ್ಧ ಷಡ್ಯಂತ್ರ:
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ ನಡೆದಿರುವುದೂ ಸೇರಿದಂತೆ ಆತ್ಮಹತ್ಯೆಗೆ ಕಾರಣವಾದ ಅಂಶಗಳು ಯಾವುವು ಎಂಬುದು ತನಿಖೆಯ ನಂತರ ಬೆಳಕಿಗೆ ಬರಲಿದೆ. ಪಾಟೀಲ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅದಕ್ಕೆ ಕಾರಣಗಳೇನು? ಅದರ ಹಿನ್ನೆಲೆ ಏನು? ಎಲ್ಲದರ ಕುರಿತು ತನಿಖೆಯಾಗಲಿದೆ. ಈ ಕುರಿತು ಎಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣ ಹೆಬ್ಬಾಳ್ಕರ್ ತಲೆಗೆ ಸುತ್ತಿಕೊಳ್ಳಬಹುದು: ಹೊಸ ಬಾಂಬ್ ಸಿಡಿಸಿದ ಅಶ್ವತ್ಥ್
ಎರಡು ದಿನದ ಹಿಂದೆಯೇ ರಾಜೀನಾಮೆ ಬಗ್ಗೆ ಈಶ್ವರಪ್ಪ ತೀರ್ಮಾನಿಸಿದ್ದರು. ಆದರೆ ಕೆಲ ಹಿರಿಯರ ಸಲಹೆಯಂತೆ ರಾಜೀನಾಮೆ ಕೊಟ್ಟಿರಲಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ ಅಷ್ಟೇ ಎಂದರು.