ಸಂತೋಷ್ ಆತ್ಮಹತ್ಯೆ: ಕ್ಷೇತ್ರದಲ್ಲಿ ನಡೆಸಿದ ಕಾಮಗಾರಿ ಗೊತ್ತಿರಲಿಲ್ಲವೇ? ಹೆಬ್ಬಾಳ್ಕರ್‌ಗೆ ನಿರಾಣಿ ಪ್ರಶ್ನೆ
* ನಿಮ್ಮ ಕ್ಷೇತ್ರದಲ್ಲಿ ನಡೆಸಿದ ಕಾಮಗಾರಿ ಗೊತ್ತಿರಲಿಲ್ಲವೇ?
* ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತರುವ ನಿಮಗೆ ನಾಲ್ಕು ಕೋಟಿ ಯಾವ ಲೆಕ್ಕ
* ಶವ ಸಂಸ್ಕಾರದಲ್ಲೂ ರಾಜಕೀಯ
* ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ
ಬಾಗಲಕೋಟೆ, (ಏ.15): ನನ್ನ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎನ್ನುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾಲ್ಕು ಕೋಟಿ ರೂಪಾಯಿ ಕೆಲಸ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆ ಏಕೆ ಬೆಂಬಲ ನೀಡಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ಹ್ಯಾಲಿಪ್ಯಾಡ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿಮ್ಮದೆ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ್ದ ಸಂತೋಷ್ ಪಾಟೀಲ್ ಗೆ ನೀವು ಸಹಕಾರ ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಜಗ್ಗಲ್ಲ-ಬಗ್ಗಲ್ಲ ಎಂದಿದ್ದ ಈಶ್ವರಪ್ಪ ದಿಢೀರ್ ರಾಜೀನಾಮೆ ಘೋಷಿಸಿದ್ಯಾಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಾವೊಬ್ಬ ರಾಷ್ಟ್ರೀಯ ನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತೀರಿ. ನೀವು, ಇದನ್ನ ಸರಿಯಾದ ರೀತಿಯಿಂದ ನುರ್ವಾಹಣೆ ಮಾಡಬೇಕಿತ್ತು. ನಿಮ್ಮ ಕ್ಷೇತ್ರದಲ್ಲಿ ಕೆಲಸ ಆಗಿದ್ದಾಗ ನೀವೇ ಅವರನ್ನ ಕರೆದುಕೊಂಡು ಹೋಗಿ ಬಿಲ್ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು ಎಂದು ಶಾಸಕಿಗೆ ಚಾಟಿ ಬೀಸಿದರು.
ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನಿಮ್ಮ ಗಮನಕ್ಕೆ ಬಂದ ಕೂಡಲೇ ಹಣ ಬಿಡುಗಡೆ ಮಾಡಿಕೊಡುವ ಕೆಲಸವನ್ನು ಮಾಡಬೇಕಿತ್ತು. ಸಂತೋಷ್ ಪಾಟೀಲ್ ಕಷ್ಟದಲ್ಲಿ ಇರುವುದು ನಿನಗೆ ಗೊತ್ತಿತ್ತು. ನೀವು ಏಕೆ ಸಹಾಯ ಮಾಡಿಲ್ಲ ಎಂದು ನಿರಾಣಿ ಅವರು ಪ್ರಶ್ನಿಸಿದರು.
ಸಾವಿರಾರು ಕೋಟಿ ತರುವ ನಿಮಗೆ ನಾಲ್ಕು ಕೋಟಿ ರೂಪಾಯಿ ಹೊರೆಯಾಗುತ್ತಿರಲಿಲ್ಲ. ನಾಲ್ಕು ಕೋಟಿ ರೂಪಾಯಿ ಕೊಡಿಸಲು ಆಗದಿರುವ ನೀವು ಅದರ ನೈತಿಕ ಹೊಣೆಗಾರಿಕೆಯನ್ನು ನೀವೇ ಹೊರಬೇಕು ಎಂದು ಕಿಡಿಕಾರಿದರು.
ಘಟನೆ ನಡೆದ ಬಳಿಕ ಶಾಸಕಿ ಶವ ಇಟ್ಟುಕೊಂಡು ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಸಂತೋಷ ಪಾಟೀಲ್ ಮನೆಯವರು ಹಾಗೂ ಅವರ ಗ್ರಾಮದವರು ಆಸ್ಪದ ಕೊಟ್ಟಿಲ್ಲ. ಅಲ್ಲದೇ ಶವ ಸಂಸ್ಕಾರ ಮಾಡುವ ಸಂದರ್ಭದಲ್ಲೂ ಶವವನ್ನು ವಸ್ತುಪ್ರದರ್ಶನ ಮಾಡಲು ಹೊರಟಿದ್ದು ಎಷ್ಟರಮಟ್ಟಿಗೆ ಸರಿ ಎಂದು ಸಚಿವರು ಕೇಳಿದರು.
ಪ್ರಕರಣ ಕುರಿತು ಈಗಾಗಲೇ ಎಫ್ಐಆರ್ ಆಗಿದೆ. ಆರೋಪಿ 1, 2, 3 ಎಂದು ಮಾಡಿದ್ದಾರೆ. ನಮ್ಮ ಪೊಲೀಸ್ ಇಲಾಖೆಯವರು ಶಕ್ತರಿದ್ದಾರೆ. ಬರುವ ದಿನದಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ.ಸರಕಾರ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸಚಿವ ನಿರಾಣಿ ಸ್ಪಷ್ಟಪಡಿಸಿದರು.
ಆರೋಪ ಮಾಡಿದ ತಕ್ಷಣ ಬಂಧಿಸಬೇಕು ಎಂಬುದು ಸರಿಯಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಸಚಿವ ಈಶ್ವರಪ್ಪ
ಅವರೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಕೆ.ಎಸ್ ಈಶ್ವರಪ್ಪನವರ ಮೇಲೆ ಬಂದಿರುವ ಆಪಾದನೆ ಸತ್ಯಕ್ಕೆ ದೂರವಾಗಿದ್ದು, ಅವರ ಮೇಲೆ ಆಪಾದನೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
5 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿ ಮಾಡಬೇಕಾದರೆ ಟೆಂಡರ್ ಪ್ರಕ್ರಿಯೆ ಮಾಡಲೇಬೇಕು ಅದೊಂದು ಪ್ರಕ್ರಿಯೆ ಇದೆ.ಇಲ್ಲಿ ಯಾವ ಘಟನೆಗಳು ನಡೆದಿಲ್ಲ ಎಂದು ಹೇಳಿದರು.
ಇನ್ನೂ ಸಚಿವ ಈಶ್ವರಪ್ಪ ಅವರು ರಾಜೀನಾಮೆ ಕೊಟ್ಟ ಮೇಲೂ ಬಂಧಿಸಬೇಕು ಎಂದು ಒತ್ತಡ ಹಾಕಿದರೆ ಅವರ ಮನಸ್ಸಿನ ಮೇಲೆ ಏನು ಪರಿಣಾಮ ಬೀರಬಹುದು.? ತಪ್ಪು ಮಾಡಿದ್ದಾರೆ ಎಂದಾಗ ಇದೆಲ್ಲಾ ಸರಿ. ಆದರೆ ತಪ್ಪೇ ಮಾಡಿಲ್ಲ ಎಂದ ಮೇಲೆ ಪ್ರತಿಪಕ್ಷದವರ ಆಗ್ರಹ ಸರಿಯೇ ಎಂದು ನಿರಾಣಿ ಅಸಮಾಧಾನ ಹೊರಹಾಕಿದರು. ತನಿಖೆ ಮಾಡಿದಾಗ ನೂರಕ್ಕೆ ನೂರು ಈಶ್ವರಪ್ಪನವರು ತಪ್ಪು ಮಾಡಿಲ್ಲ ಎನ್ನುವುದು
ಸಾಬೀತು ಆಗಲಿದೆ ಎಂಬ ವಿಶ್ವಾಸವನ್ನು ಸಚಿವ ಮುರುಗೇಶ್ ನಿರಾಣಿ ವ್ಯಕ್ತಪಡಿಸಿದರು.