ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಆ ಮೂವರನ್ನು ಬಿಟ್ಟು ನಾಲ್ಕನೆಯವರು ಯಾರು ?
* ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
* ಆ ಮೂವರನ್ನು ಬಿಟ್ಟು ನಾಲ್ಕನೆಯವರು ಯಾರು ?
* ಗೆಳೆಯ ರಾಜೇಶ್ ಯಾರು? ಭೇಟಿಯಾಗುವ ಉದ್ದೇಶ ಏನಿತ್ತು?
ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಏ.15): ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಆ ದಿನ ಲಾಡ್ಜಿಗೆ ಬಂದದ್ದು ಕೇವಲ ಮೂರೇ ಜನನಾ? ಅಥವಾ ನಾಲ್ಕನೆಯವ ಒಬ್ಬನಿದ್ದನಾ? ನನ್ನ ಕೋಣೆಗೆ ಗೆಳೆಯನೊಬ್ಬ ಬರುತ್ತಾನೆ ಎಂದು ಸಂತೋಷ್ ಹೇಳಿದ್ದು ಯಾರ ಬಗ್ಗೆ ಗೊತ್ತಾ? ಈ ವಿಚಾರವಾಗಿ ಪೊಲೀಸರ ತನಿಖೆಯೂ ತೀವ್ರಗೊಂಡಿದೆ.
ಈಶ್ವರಪ್ಪನವರ ಮೇಲೆ ಕಮಿಷನ್ ದಂಧೆಯ ಆರೋಪ ಮಾಡಿದ್ದ ಸಂತೋಷ್ ಪಾಟೀಲ್, ತನಗೆ ಸಂಬಂಧವೇ ಇರದ ಉಡುಪಿ ಜಿಲ್ಲೆಯಲ್ಲಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಇಬ್ಬರು ಗೆಳೆಯರ ಜೊತೆ ಧಾರವಾಡದಿಂದ ಹೊರಟು ಚಿಕ್ಕಮಗಳೂರು ಪ್ರವಾಸ ಮುಗಿಸಿ ಉಡುಪಿಗೆ ಬಂದಿರುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಕ್ಷಣಗಳ ಮುನ್ನ, ಗೆಳೆಯನೊಬ್ಬ ನನ್ನ ಕೋಣೆಗೆ ಬರುತ್ತಾನೆ ಹಾಗಾಗಿ ನೀವು ಪ್ರತ್ಯೇಕ ಕೋಣೆಯಲ್ಲಿ ವಾಸ್ತವ್ಯ ಮಾಡಿ ಎಂದು ಹೇಳಿರುತ್ತಾನೆ.
ಸಂತೋಷ್ ಪಾಟೀಲ್ ಸುಸೈಡ್ ಕೇಸ್: ಉಡುಪಿಯಲ್ಲಿ ಗೆಳೆಯರ ತೀವ್ರ ವಿಚಾರಣೆ
ಹೌದು ಈ ವಿಷಯವನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ಮೃತ ಸಂತೋಷ್ ಪಾಟೀಲ್ ಜೊತೆಗೆ ಬಂದಿದ್ದ ಪ್ರಶಾಂತ ಶೆಟ್ಟಿ! ಉಡುಪಿಗೆ ಬರುವ ಮುನ್ನ ಚಿಕ್ಕಮಗಳೂರಿನ ಹೋಂಸ್ಟೇನಲ್ಲಿ ವಾಸಮಾಡುವಾಗ, ನಾಲ್ಕು ದಿನಗಳ ಕಾಲ ಮೂವರು ಗೆಳೆಯರು ಒಂದೇ ರೂಮ್ ನಲ್ಲಿ ತಂಗಿದ್ದರು. ಆದರೆ ಉಡುಪಿಯ ಲಾಡ್ಜಿನಲ್ಲಿ ಪ್ರತ್ಯೇಕ ಎರಡು ಕೊಠಡಿಗಳನ್ನು ಪಡೆದಿದ್ದರು. ಗೆಳೆಯ ರಾಜೇಶ್ ಬರ್ತಾನೆ, ನಾವಿಬ್ಬರೂ ಒಂದೇ ಕೋಣೆಯಲ್ಲಿ ಇರುತ್ತೇವೆ. ನೀವಿಬ್ರು ಕೋಣೆ ಸಂಖ್ಯೆ 209ರಲ್ಲಿ ಇರಿ, ನಾನು ರೂಮ್ ನಂಬರ್ 207 ಕ್ಕೆ ಹೋಗ್ತೇನೆ ಎಂದು ಸಂತೋಷ್ ಪಾಟೀಲ್ ಹೇಳಿದ್ದ. ಹಾಗಾದರೆ ಆ ರಾಜೇಶ್ ಯಾರು ಅನ್ನೋ ಕುತೂಹಲ ಮೂಡಿದೆ.
ಉಡುಪಿಯಲ್ಲಿ ಸಂತೋಷ್ ಪಾಟೀಲರನ್ನು ಭೇಟಿಯಾಗಬೇಕಿದ್ದ ರಾಜೇಶ್ ನಿಜಕ್ಕೂ ಲಾಡ್ಜಿಗೆ ಬಂದಿದ್ದನಾ? ಬಂದಿದ್ದರೆ ಆತ ಬಂದಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆಯೇ? ಆತ ಸಂತೋಷ್ ಪಾಟೀಲರನ್ನು ಭೇಟಿಯಾಗುವ ಉದ್ದೇಶ ಏನಿತ್ತು? ಎಲ್ಲ ವಿಚಾರಗಳು ತನಿಖೆಗೆ ಒಳಪಡಬೇಕಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಲಾಡ್ಜಿಗೆ ಒಂದು ಸುತ್ತು ಹೊಡೆದು ನೋಡಿದರೆ, ಇನ್ನಷ್ಟು ಕುತೂಹಲಕಾರಿ ಅಂಶಗಳು ಕಂಡು ಬರುತ್ತೆ. ಕೋಣೆ ಸಂಖ್ಯೆ 207 ಮತ್ತು 209 ಪ್ರತ್ಯೇಕ ವಿಭಾಗದಲ್ಲಿದೆ. ಎರಡು ಕೋಣೆಗಳ ನಡುವೆ ಸಾಕಷ್ಟು ಅಂತರವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ರೀತಿ ಕೋಣೆ ಪಡೆದಿರಬಹುದು. ಗೆಳೆಯ ರಾಜೇಶ್ ಬರುತ್ತಾನೆ ಎಂದು ಸುಳ್ಳು ಹೇಳಿ, ಆತ್ಮಹತ್ಯೆಗೆ ಪ್ರೀ ಪ್ಲಾನ್ ಮಾಡಿಕೊಂಡಿರಲೂಬಹುದು. ಎರಡು ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ.
ಹೋಟೆಲ್ ನಲ್ಲಿ ದಾಖಲಾಗಿರುವ ಎಲ್ಲಾ ಸಿಸಿಟಿವಿ ಫುಟೇಜ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಗೆಳೆಯರ ಎಲ್ಲ ಚಲನವಲನಗಳು ಇದರಲ್ಲಿ ದಾಖಲಾಗಿವೆ. ಒಂದು ವೇಳೆ ರಾಜೇಶ್ ಲಾಡ್ಜಿಗೆ ಬಂದಿದ್ದರೆ..ಆ ದೃಶ್ಯವು ದಾಖಲಾಗಿರುತ್ತೆ. ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆ, ದಾಖಲಾಗಿರುವ ಅಸಹಜ ಸಾವಿನ ಪ್ರಕರಣದ ದೂರಿನಲ್ಲಿ, ರಾಜೇಶ್ ಹೆಸರು ಉಲ್ಲೇಖವಾಗಿದೆ. ಗೆಳೆಯ ಪ್ರಶಾಂತ ಶೆಟ್ಟಿ ನೀಡಿರುವ ದೂರಿನ ಸಾರಾಂಶದಲ್ಲಿ, ರಾಜೇಶ್ ಲಾಡ್ಜಿಗೆ ಬರುವ ಬಗ್ಗೆ ತಿಳಿಸಲಾಗಿದೆ.
ಹಾಗಾದ್ರೆ ರಾಜೇಶ್ ಯಾರು? ಸಂತೋಷ್ ಪಾಟೀಲ್ ಸಾವಿನಲ್ಲಿ ಈತನ ಕೈವಾಡ ಏನಾದರೂ ಇದೆಯಾ? ಇವೆಲ್ಲ ವಿಚಾರಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ತನಿಖೆಯನ್ನು ಮತ್ತಷ್ಟು ವಿಸ್ತೃತ ಗೊಳಿಸಲಾಗಿದೆ. ವಿವಿಧ ಸರ್ಕಲ್ ಇನ್ಸ್ಪೆಕ್ಟರ್ ಗಳ ತಂಡ ರಚಿಸಲಾಗಿದೆ. ಬೆಳಗಾವಿಗೆ ಮಲ್ಪೆ ಹಾಗೂ ಬ್ರಹ್ಮಾವರ ಠಾಣಾಇನ್ಸ್ಪೆಕ್ಟರ್ ಗಳು, ಬೆಂಗಳೂರು ಹಾಗೂ ಚಿಕ್ಕಮಗಳೂರಿಗೆ ಮಣಿಪಾಲ ಇನ್ಸ್ಪೆಕ್ಟರ್ ನೇತೃತ್ವದ ತಂಡ, ದಾವಣಗೆರೆಗೆ ಉಡುಪಿ ನಗರ ಠಾಣಾ ಪೊಲೀಸರ ತಂಡವನ್ನು ತನಿಖೆಗೆಂದು ನಿಯೋಜಿಸಲಾಗಿದೆ. ಗೊಂದಲಕ್ಕೆ ಅವಕಾಶವಿಲ್ಲದಂತೆ, ಸಮರ್ಪಕ ದಾಖಲೀಕರಣದ ಮೂಲಕ ಈ ಪ್ರಕರಣದ ತನಿಖೆಯನ್ನು ನಡೆಸುವ ಭರವಸೆಯನ್ನು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನೀಡಿದ್ದಾರೆ.