2024-25ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (ಪಿಎಫ್) ಮೇಲಿನ ಬಡ್ಡಿದರ 8.25% ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಡ್ಡಿದರ ಇಳಿಕೆಯಾಗಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಏನು? ಇಲ್ಲಿದೆ ಡಿಟೇಲ್ಸ್
ಖಾಸಗಿ ವಲಯ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (PSU) ಕೆಲಸ ಮಾಡುವ ಲಕ್ಷಾಂತರ ಉದ್ಯೋಗಿಗಳಿಗೆ ಪ್ರತಿ ವರ್ಷದ ಮಾರ್ಚ್ ಮೊದಲ ವಾರ ಬಹಳ ಮುಖ್ಯವಾಗಲಿದೆ. ಇದಕ್ಕೆ ಕಾರಣ, ಈ ಸಂದರ್ಭದಲ್ಲಿ ಪಿಎಫ್ (ಪ್ರಾವಿಡೆಂಟ್ ಫಂಡ್) ಮೇಲಿನ ಬಡ್ಡಿದರವನ್ನು ನಿರ್ಧರಿಸಲಾಗುತ್ತದೆ. 2024-25ರ ಹಣಕಾಸು ವರ್ಷಕ್ಕೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯ ಚಂದಾದಾರರು ತಮ್ಮ ನಿವೃತ್ತಿ ಉಳಿತಾಯದ ಮೇಲೆ 8.25% ಬಡ್ಡಿ ಪಡೆಯಬಹುದಾಗಿದೆ. ಇದು ಯಾವುದೇ ಬ್ಯಾಂಕ್ನಲ್ಲಿ ಇಡುವ ಠೇವಣಿಗಿಂತಲೂ ಅತ್ಯಧಿಕವಾಗಿದೆ. ಈ ಹಿನ್ನೆಲೆಯಲ್ಲಿ, ಇದು ನೌಕರರ ಭವಿಷ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದ್ದು, ಲಕ್ಷಾಂತರ ಇಪಿಎಫ್‌ಒ ಚಂದಾದಾರರು ಬಡ್ಡಿದರಗಳ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ.
ಶಾಕಿಂಗ್ ಸುದ್ದಿ
ಆದರೆ, ಇದೀಗ ಜಾಲತಾಣಗಳಲ್ಲಿ ಶಾಕಿಂಗ್ ವರದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಈ ಬಾರಿ ಬಡ್ಡಿದರದಲ್ಲಿ ಭಾರಿ ಇಳಿಕೆ ಆಗಲಿದೆ ಎನ್ನುವ ಸುದ್ದಿಯದು. ಇದರ ಬಗ್ಗೆ ತಿಳಿಯುವ ಮೊದಲು, ಬಡ್ಡಿದರವನ್ನು ಹೇಗೆ ನಿಗದಿ ಮಾಡುತ್ತಾರೆ ಎನ್ನುವುದನ್ನು ತಿಳಿಯಬೇಕು. ಮಾರ್ಚ್ ಮೊದಲ ವಾರದಲ್ಲಿ ಕೇಂದ್ರ ಟ್ರಸ್ಟಿಗಳ ಮಂಡಳಿಯ ಸಭೆಯನ್ನು ಕರೆಯಲಾಗುತ್ತದೆ. ಸಿಬಿಟಿ ಇಪಿಎಫ್‌ಒನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಹಣವನ್ನು ಹೇಗೆ ನಿರ್ವಹಿಸಲಾಗುತ್ತದೆ, ಹೂಡಿಕೆ ಮಾಡಲಾಗುತ್ತದೆ ಮತ್ತು ವಿತರಿಸಲಾಗುತ್ತದೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮುಂಬರುವ ಕೇಂದ್ರ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆಯಲ್ಲಿ ಬಡ್ಡಿದರವನ್ನು ನಿರ್ಧರಿಸುತ್ತದೆ. ನಂತರ ಸಿಬಿಟಿ ದರ ಶಿಫಾರಸನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸುತ್ತದೆ, ಅದು ದರವನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಶಿಫಾರಸನ್ನು ಹಾಗೆಯೇ ಸ್ವೀಕರಿಸಬಹುದು ಅಥವಾ ಅನುಮೋದನೆಗೆ ಮೊದಲು ಬದಲಾವಣೆಗಳನ್ನು ಸೂಚಿಸಬಹುದು.
ಕಡಿಮೆ ಆಗತ್ತಾ ಬಡ್ಡಿದರ?
ಕಳೆದ ಎರಡು ವರ್ಷಗಳಿಂದ ದರವು 8.25% ರಷ್ಟಿದೆ. ಇದೀಗ ಇದರ ದರವನ್ನು ಕಡಿಮೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಸತತ ಮೂರನೇ ವರ್ಷವೂ, ನೌಕರರ ಭವಿಷ್ಯ ನಿಧಿ ಸಂಸ್ಥೆಯ ಚಂದಾದಾರರು ತಮ್ಮ ನಿವೃತ್ತಿ ಉಳಿತಾಯದ ಮೇಲೆ 8.25% ಬಡ್ಡಿಯನ್ನು ಪಡೆಯುವ ನಿರೀಕ್ಷೆಯಿದೆ. ಒಂದು ವೇಳೆ ಈ ಸಾಲಿನಲ್ಲಿ ಕಡಿಮೆ ಬಡ್ಡಿದರ ಮಾಡಿದ್ದರೆ ಇಷ್ಟೊತ್ತಿಗಾಗಲೇ ಅಧಿಕೃತ ಮಾಹಿತಿ ಹೊರಬರುತ್ತಿತ್ತು. ಆದ್ದರಿಂದ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎನ್ನಲಾಗಿದೆ. ಅದೇನೇ ಇದ್ದರೂ ಬರುವ ಮಾರ್ಚ್ 2ರಂದು ನಡೆಯಲಿರುವ ಸಭೆಯಲ್ಲಿ ನಿರ್ಧಾರವಾಗಲಿದೆ. ಅಲ್ಲಿಯವರೆಗೂ ಕಾದು ನೋಡಬೇಕಿದೆ.
ಲೆಕ್ಕ ಹಾಕುವುದು ಹೇಗೆ?
ಚಂದಾದಾರರ ಮಾಸಿಕ ಬಾಕಿ ಮೊತ್ತವನ್ನು ಆಧರಿಸಿ ಇಪಿಎಫ್‌ಒ ಬಡ್ಡಿದರವನ್ನು ಲೆಕ್ಕಹಾಕಲಾಗುತ್ತದೆ, ಆದರೆ ಅದನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರಸ್ತುತ, ಇಪಿಎಫ್‌ಒ ಒಟ್ಟು ₹25-26 ಲಕ್ಷ ಕೋಟಿಗಳನ್ನು ಹೊಂದಿದ್ದು, ಅದನ್ನು ಈಕ್ವಿಟಿ ಮತ್ತು ಸಾಲ ಸಾಧನಗಳಲ್ಲಿ ಹೂಡಿಕೆ ಮಾಡಿದೆ. ಈ ಮೊತ್ತದ ಸುಮಾರು 41 ಪ್ರತಿಶತವನ್ನು ರಾಜ್ಯ ಅಭಿವೃದ್ಧಿ ಸಾಲಗಳಲ್ಲಿ (ಎಸ್‌ಡಿಎಲ್), 16 ಪ್ರತಿಶತವನ್ನು ಕೇಂದ್ರ ಸರ್ಕಾರಿ ಭದ್ರತೆಗಳಲ್ಲಿ, 15.9 ಪ್ರತಿಶತವನ್ನು ಕಾರ್ಪೊರೇಟ್ ಬಾಂಡ್‌ಗಳಲ್ಲಿ ಮತ್ತು 9.5 ಪ್ರತಿಶತವನ್ನು ವಿನಿಮಯ ವಹಿವಾಟು ನಿಧಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 2024 ರಲ್ಲಿ, EPFO ಹೂಡಿಕೆ ಬಂಡವಾಳವು ಶೇಕಡಾ 7.62 ರಷ್ಟು ಇಳುವರಿಯನ್ನು ನೀಡಿತು, ಆದರೆ ಚಂದಾದಾರರಿಗೆ ಬಡ್ಡಿದರವನ್ನು ಶೇಕಡಾ 8.25 ಕ್ಕೆ ನಿಗದಿಪಡಿಸಲಾಗಿದೆ.


