ವ್ಯಕ್ತಿಯ ಜಾತಿಯು ಹುಟ್ಟಿನಿಂದಲೇ ನಿರ್ಧರಿಸಲ್ಪಡುತ್ತದೆ ಮತ್ತು ಮದುವೆ ಅಥವಾ ಮತಾಂತರದಿಂದ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೇರೆ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಪ್ರಕರಣದಲ್ಲಿ,  ನ್ಯಾಯಾಲಯ ತೀರ್ಪು ನೀಡಿದೆ.

ವ್ಯಕ್ತಿಯ ಜಾತಿಯು ಹುಟ್ಟಿನಿಂದಲೇ ನಿರ್ಧರಿಸಲ್ಪಡುತ್ತದೆ ಮತ್ತು ಮತಾಂತರ ಅಥವಾ ಮದುವೆಯ ನಂತರವೂ ಬದಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಹಿಳೆ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದರೂ ಆಕೆಯ ಮೂಲ ಜಾತಿಯನ್ನು ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ಒಬ್ಬ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಂಡರೂ ಸಹ, ಅವನ ಅಥವಾ ಅವಳ ಹುಟ್ಟಿನಿಂದ ನಿರ್ಧರಿಸಲ್ಪಟ್ಟ ಜಾತಿಯು ಬದಲಾಗುವುದಿಲ್ಲ ಮತ್ತು ಮದುವೆಯು ಮಹಿಳೆಯ ಜಾತಿ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಎಂದು ತೀರ್ಪಿನಲ್ಲಿ ಹೈಕೋರ್ಟ್ ಗಮನಿಸಿದೆ.

Add Asianetnews Kannada as a Preferred SourcegooglePreferred

ಪರಿಶಿಷ್ಟ ಜಾತಿಯ ಮಹಿಳೆಯ ಕೇಸ್​

ನ್ಯಾಯಮೂರ್ತಿ ಅನಿಲ್ ಕುಮಾರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ದೌರ್ಜನ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದರು. ಸಮುದಾಯದ ಹೊರಗಿನ ವ್ಯಕ್ತಿಯನ್ನು ಮದುವೆಯಾದ ಪರಿಶಿಷ್ಟ ಜಾತಿಯ (SC) ಮಹಿಳೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದರ ತೀರ್ಪು ನೀಡುವಾಗ ನ್ಯಾಯಮೂರ್ತಿಗಳು ಮೇಲಿನಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪರಿಶಿಷ್ಟ ಜಾತಿಯ ಮಹಿಳೆಯೊಂದಿಗಿನ ಘರ್ಷಣೆಯ ವಿಚಾರದಲ್ಲಿ ತಮ್ಮ ಮೇಲೆ ಹಲ್ಲೆ, ನಿಂದನೆ ಮತ್ತು ಜಾತಿ ನಿಂದನೆ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದರು. ಆದರೆ ಆಕೆ ಬೇರೆ ಸಮುದಾಯದವರನ್ನು ಮದುವೆಯಾಗಿರುವ ಕಾರಣ, ಆಕೆ ಇನ್ನೂ ಪರಿಶಿಷ್ಟ ಜಾತಿಯ ಮಹಿಳೆಯಾಗಿ ಉಳಿದಿಲ್ಲ ಎನ್ನುವ ವಾದವನ್ನು ವಕೀಲರು ಮುಂದಿಟ್ಟಿದ್ದರು.

ಬೇರೆ ಜಾತಿಯವನ ಜೊತೆ ಮದುವೆ

ಈ ಪ್ರಕರಣದಲ್ಲಿ ಮಹಿಳೆ ಪಶ್ಚಿಮ ಬಂಗಾಳದ ನಿವಾಸಿ, ಅಲ್ಲಿ ಅವರು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದವರು. ಅವರು ಈಗ ಜಾಟ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆದಾಗ್ಯೂ, ಅವರು ಈ ಸಂಗತಿಯನ್ನು ಮರೆಮಾಚಿದ್ದಾರೆ ಮತ್ತು ತಮ್ಮನ್ನು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಮಹಿಳೆ ಎಂದು ಹೇಳಿಕೊಂಡಿದ್ದಾರೆ. ಜಾಟ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾದ ನಂತರ, ಅವರು ತಮ್ಮನ್ನು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ಮಹಿಳೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ವಕೀಲರ ವಾದವಾಗಿತ್ತು.

ಕೋರ್ಟ್​ ಹೇಳಿದ್ದೇನು?

ಇದರ ವಿಚಾರಣೆ ವೇಳೆ ಕೋರ್ಟ್​, ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಹಿಳೆ ತನ್ನ ಮೂಲ ಜಾತಿಯನ್ನು ಕಳೆದುಕೊಳ್ಳುತ್ತಾಳೆ ಎನ್ನುವ ವಕೀಲರ ವಾದದಲ್ಲಿ ಹುರುಳಿಲ್ಲ . "ಜಾಟ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಮದುವೆಯಾದ ನಂತರ ಮಹಿಳೆ ತಮ್ಮ ಮೂಲ ಜಾತಿಯನ್ನು ಕಳೆದುಕೊಂಡಿದ್ದಾರೆ ಎಂಬ ವಾದದಲ್ಲಿ ಯಾವುದೇ ಬಲವಿಲ್ಲ. ಒಬ್ಬ ವ್ಯಕ್ತಿಯು ಧರ್ಮವನ್ನು ಬದಲಾಯಿಸಬಹುದಾದರೂ, ಬೇರೆ ಧರ್ಮಕ್ಕೆ ಮತಾಂತರಗೊಂಡರೂ ಅವನ ಅಥವಾ ಅವಳ ಜಾತಿ ಒಂದೇ ಆಗಿರುತ್ತದೆ. ಆದ್ದರಿಂದ, ಮದುವೆಯು ವ್ಯಕ್ತಿಯ ಜಾತಿಯನ್ನು ಬದಲಾಯಿಸುವುದಿಲ್ಲ. ಆದ್ದರಿಂದ, ಈ ವಾದವು ಸಮರ್ಥನೀಯವಲ್ಲ. ಅದರಂತೆ, ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ" ಎಂದು ಅದು ತೀರ್ಮಾನಿಸಿತು.