ಎಲಾನ್ ಮಸ್ಕ್ ಅವರ ತಂದೆ ಇರೋಲ್ ಮಸ್ಕ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ.

ಅಯೋಧ್ಯೆ: ಜಗತ್ತಿನ ಶ್ರೀಮಂತ ಉದ್ಯಮಿ, ಸ್ಪೇಸೆಕ್ಸ್‌ ಸಂಸ್ಥಾಪಕ ಎಲಾನ್ ಮಸ್ಕ್‌ ಅವರ ತಂದೆ ಇರೋಲ್ ಮಸ್ಕ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ರಾಮಲಲ್ಲಾನ ದರ್ಶನದ ನಂತರ ಅವರು ಇದೊಂದು ಅದ್ಭುತವಾದ ಅನುಭವ ಹಾಗೂ ತಾನು ಇದುವರೆಗೆ ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ. ರಾಮಮಂದಿರಕ್ಕೆ ಭೇಟಿ ನೀಡಿದ ನಂತರ ಇರೋಲ್ ಮಸ್ಕ್ ಅವರು ರಾಮಮಂದಿರದ ಸಮೀಪದಲ್ಲೇ ಇರುವ ಹನುಮಾನ್‌ಗರ್ಹಿ ದೇಗುಲಕ್ಕೂ ಭೇಟಿ ನೀಡಿದ್ದಾರೆ.

ಆರಂಭದಲ್ಲಿ ಅವರು ಆಗ್ರಾದ ತಾಜ್‌ಮಹಲ್‌ಗೂ ಭೇಟಿ ನೀಡುವುದಕ್ಕೆ ನಿರ್ಧರಿಸಿದ್ದರು. ಆದರೆ ಈ ಪ್ರದೇಶದಲ್ಲಿನ ತೀವ್ರ ಶಾಖದಿಂದಾಗಿ ಆ ಯೋಜನೆಯನ್ನು ಅವರು ಕೈ ಬಿಟ್ಟಿರಬಹುದು ಎಂದು ವರದಿಯಾಗಿದೆ. ಅಯೋಧ್ಯಗೆ ಭೇಟಿ ಅದ್ಭುತವಾಗಿದೆ, ಸಂಪೂರ್ಣವಾಗಿ ಅದ್ಭುತವಾಗಿದೆ. ನಾನು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಇದು ಒಂದು ಎಂದು ಅವರು ಹೇಳಿದ್ದಾರೆ.

ನಾನು ರಾಮಮಂದಿರವನ್ನು ನೋಡಲು ಬಂದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ದೇವಾಲಯವು ಪೂರ್ಣಗೊಳ್ಳುವವರೆಗೆ ಕಾಯಲು ಸಾಧ್ಯವಿಲ್ಲ, ದೊಡ್ಡ ದೇವಾಲಯ, ಇದು ಪ್ರಪಂಚದ ಅದ್ಭುತದಂತೆ ಇರುತ್ತದೆ ಎಂದು ಎರೋಲ್ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಪ್ರತ್ಯೇಕವಾಗಿ ಎರಡೂ ದೇವಾಲಯಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ನನ್ನ ಅನುಭವ ಅದ್ಭುತವಾಗಿದೆ. ನಾನು ಸರ್ವೋಟೆಕ್‌ನೊಂದಿಗೆ ಕೆಲಸ ಮಾಡಲು ಇಲ್ಲಿದ್ದೇನೆ ಮತ್ತು ದೇಶದಲ್ಲಿ ಸಾಕಷ್ಟು ಸಮಯ ಕಳೆಯಲು ಎದುರು ನೋಡುತ್ತಿದ್ದೇನೆ. ಇಲ್ಲಿನ ದೇವಾಲಯಗಳು ಅದ್ಭುತವಾಗಿವೆ ಮತ್ತು ಜನರು ಕೂಡ ಹಾಗೆಯೇ ಇದ್ದಾರೆ ಎಂದರು. ಎರೋಲ್ ತಮ್ಮ ಮಗಳು ಅಲೆಕ್ಸಾಂಡ್ರಾ ಮಸ್ಕ್ ಅವರೊಂದಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದರು ಮತ್ತು ಸಂಜೆ 4 ಗಂಟೆಯ ನಂತರ ಅಲ್ಲಿಂದ ಹೊರಟರು. ರಾಮ ಮಂದಿರಕ್ಕೆ ಭೇಟಿ ನೀಡಿದ ವೇಳೆ ಅವರು ಭಾರತದ ಸಾಂಪ್ರದಾಯಿಕ ಧಿರಿಸಾದ ಕುರ್ತಾ-ಪೈಜಾಮ ಧರಿಸಿದ್ದರು.

ಇರೋಲ್ ಮಸ್ಕ್‌ ಭೇಟಿಯ ಸಮಯದಲ್ಲಿ ದೇವಾಲಯ ಭಾರಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ರಾಮಲಲ್ಲಾನ ಅಯೋಧ್ಯೆಯಲ್ಲಿ ಈಗಾಗಲೇ ಮೂರು ಹಂತದ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ. ಇದರಲ್ಲಿ ಅನಧಿಕೃತ ವೈಮಾನಿಕ ಚಟುವಟಿಕೆಯನ್ನು ಪತ್ತೆಹಚ್ಚುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯವಿರುವ ಹೈಟೆಕ್ ಡ್ರೋನ್ ವಿರೋಧಿ ವ್ಯವಸ್ಥೆಗಳ 24*7 ನಿಯೋಜನೆಯೂ ಸೇರಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ದೇವಾಲಯದ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಸ್ಥಳಗಳಳ್ಲಿ ಭದ್ರತಾ ವ್ಯವಸ್ಥೆಗಳಲ್ಲಿ ಸಿಸಿಟಿವಿ ಕಣ್ಗಾವಲು, ಸಂದರ್ಶಕರ ನಿಯಮಿತ ತಪಾಸಣೆ ಮತ್ತು ವಿಶೇಷ ತರಬೇತಿ ಪಡೆದ ಸಿಬ್ಬಂದಿಯ ನಿಯೋಜನೆಯೂ ಸೇರಿವೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕ್ರಮಗಳು ಸಮರ್ಪಕವಾಗಿರುವುದರಿಂದ ಈ ಭೇಟಿಗೆ ಅಧಿಕೃತವಾಗಿ ಯಾವುದೇ ಹೆಚ್ಚುವರಿ ಭದ್ರತೆಯನ್ನು ವಿಸ್ತರಿಸಲಾಗಿಲ್ಲ ಎಂದು ಅವರು ಅಧಿಕಾರಿ ಹೇಳಿದರು.

ಸರ್ವೋಟೆಕ್‌ನ ನವೀಕರಿಸಬಹುದಾದ ವಿದ್ಯುತ್ ವ್ಯವಸ್ಥೆ ಲಿಮಿಟೆಡ್‌ನ ಜಾಗತಿಕ ಸಲಹೆಗಾರರಾಗಿರುವ ಎರೋಲ್ ಮಸ್ಕ್ ಅವರು ಜೂನ್ 1 ರಂದು ತಮ್ಮ ಭಾರತ ಪ್ರವಾಸವನ್ನು ಪ್ರಾರಂಭಿಸಿದರು ಮತ್ತು ಜೂನ್ 6 ರವರೆಗೆ ಅವರು ಭಾರತದಲ್ಲಿರಲಿದ್ದಾರೆ ಎಂದು ಹರಿಯಾಣ ಮೂಲದ ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Scroll to load tweet…