ಹಲಸಿಗಾಗಿ ಆನೆಯೊಂದು ಹಲಸಿನ ಮರದ ಬಳಿ ಬಂದು ಸೇರಿದ್ದು ಕಷ್ಟ ಪಟ್ಟು ಹಲಸನ್ನು ಮರದಿಂದ ಕೊಯ್ದು ಕೆಳಗೆ ಹಾಕಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಹಲಸಿನ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರೂ ಹಲಸಿನ ಹಣ್ಣನ್ನು ಬಾಯಲ್ಲಿ ನೀರೂರಿಸಿಕೊಂಡು ತಿನ್ನುತ್ತಾರೆ. ಹಲಸು ಹಣ್ಣಾದರೆ ಸಾಕು ಊರಿಗೆಲ್ಲಾ ತನ್ನ ಸುವಾಸನೆಯಿಂದಲೇ ತಾನಿಲ್ಲಿರುವೆ ಎಂದು ಕರೆದು ಹೇಳುವ ಹಲಸಿಗಾಗಿ ಆನೆಯೊಂದು ಹಲಸಿನ ಮರದ ಬಳಿ ಬಂದು ಸೇರಿದ್ದು ಕಷ್ಟ ಪಟ್ಟು ಹಲಸನ್ನು ಮರದಿಂದ ಕೊಯ್ದು ಕೆಳಗೆ ಹಾಕಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಗಳ ಸಾಕಷ್ಟು ವೀಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಮಣ್ಣಿನಲ್ಲಿ ಹೊರಳಾಡುವುದರಿಂದ ಹಿಡಿದು ಪರಸ್ಪರ ನೀರಿನಲ್ಲಿ ಆಟವಾಡುವ ಜೊತೆಗೆ ಆನೆಗಳ ಸಾಕಷ್ಟು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಆದರ ಈಗ ನಾವು ತೋರಿಸುತ್ತಿರುವ ವಿಡಿಯೋ ಮಾತ್ರ ಬಲು ಅಪರೂಪದ್ದು, ಬಹುಶ: ನೀವಿದನ್ನು ಈ ಹಿಂದೆ ನೋಡಿರಲು ಸಾಧ್ಯವಿಲ್ಲ. ಇದು ಆನೆಯೊಂದು ಹಲಸಿನ ಹಣ್ಣನ್ನು ಮರದಿಂದ ಕೊಯ್ಯುತ್ತಿರುವ ವಿಡಿಯೋ ಆಗಿದೆ.
ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 30 ಸೆಕೆಂಡುಗಳ ಈ ವಿಡಿಯೋದಲ್ಲಿ ಕಾಣಿಸುವಂತೆ ಆನೆಯೊಂದು ಕಾಡೊಳಗಿನ ಪುಟ್ಟ ಗುಡಿಸಲಿನ ಸಮೀಪದಲ್ಲಿರುವ ಮನೆಯ ಬಳಿ ಇರುವ ಹಲಸಿನ ಮರದ ಬಳಿ ಬರುತ್ತದೆ. ಬಂದಿದೆ ಮರದ ಮೇಲೆ ಹಲಸನ್ನು ನೋಡಿದ ಆನೆ ಮೊದಲಿಗೆ ಜೋರಾಗಿ ಮರವನ್ನು ಅಲುಗಿಸಲು ಶುರು ಮಾಡುತ್ತದೆ. ಆದರೆ ಹಲಸಿನ ಹಣ್ಣು ಮಾತ್ರ ಕೆಳಗೆ ಬೀಳುವುದಿಲ್ಲ. ಈ ವೇಳೆ ಮನೆಯ ಸಮೀಪ ಇರುವ ಜನರು ಜೋರಾಗಿ ಬೊಬ್ಬೆ ಹಾಕುತ್ತಾರೆ. ಆದಾಗ್ಯೂ ಕ್ಯಾರೇ ಮಾಡದ ಆನೆ ಮತ್ತಷ್ಟು ಮರವನ್ನು ಅಲುಗಿಸುತ್ತದೆ. ಆದರೆ ಹಲಸು ಮಾತ್ರ ಕೆಳಗೆ ಬೀಳುವುದಿಲ್ಲ.
ಅಲುಗಿಸುವುದರಿಂದ ಹಲಸು ಕೆಳಗೆ ಬೀಳುವುದಿಲ್ಲ ಎಂದು ಅರಿತ ಆನೆ ಹಲಸಿನ ಮರಕ್ಕೆ ತನ್ನ ಮುಂಭಾಗದ ಎರಡು ಕಾಲುಗಳನ್ನು ಇಟ್ಟು ಸೊಂಡಿಲನ್ನು ನೇರವಾಗಿ ಮೇಲೆ ಚಾಚಿ ಹಲಸಿನ ಹಣ್ಣನ್ನು ಕೆಳಗೆ ಬೀಳಿಸುವಲ್ಲಿ ಯಶಸ್ವಿಯಾಗುತ್ತದೆ. ಆನೆ ಸೊಂಡಿಲಿನಿಂದ ಎಳೆದ ರಭಸಕ್ಕೆ ಹಲಸಿನ ಹಣ್ಣಿನ ಇಡೀಯ ಗೊಂಚಲೇ ಕೆಳಗೆ ಬೀಳುತ್ತದೆ. ತುಂಬಾ ಚಾಣಾಕ್ಷತನದಿಂದ ಆನೆ ಹಲಸು ಕೊಯ್ಯುತ್ತಿದ್ದು, ಇಡೀ ಗೊಂಚಲೇ ಕೆಳಗೆ ಬಿದ್ದರೂ ಕೂಡ ಒಂದು ಹಲಸು ಕೂಡ ಆನೆಯ ಮೇಲೆ ಬಿದ್ದಿಲ್ಲ.
ಈ ವಿಡಿಯೋವನ್ನು ಅಲ್ಲೇ ಇದ್ದ ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 63,000 ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮೂರು ಸಾವಿರ ಜನ ಲೈಕ್ ಮಾಡಿದ್ದಾರೆ. ಒಬ್ಬ ನೋಡುಗರಂತು ಆನೆ ತನ್ನ ದೇಹವನ್ನು ಬಳಸಿ ಅಷ್ಟು ಎತ್ತರದಲ್ಲಿದ್ದ ಹಲಸಿನ ಹಣ್ಣನ್ನು ಸೊಂಡಿಲಿನಿಂದ ಕೊಯ್ದಿದ್ದು ನೋಡಿ ಅಚ್ಚರಿಪಟ್ಟಿದ್ದಾರೆ. ಆನೆಗಳಿಗೆ ಎಂತಹ ಶಕ್ತಿ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆನೆಗೆ ಮರವನ್ನೇ ಕೆಳಗೆ ಬೀಳಿಸುವ ಶಕ್ತಿ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದಪ್ಪನಾದ ತೊಗಟೆ ಇರುವ ಹಲಸಿನ ಹಣ್ಣನ್ನು ಆನೆ ಹೇಗೆ ತಿನ್ನುತ್ತದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಅದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ಆನೆ ಅದನ್ನು ತನ್ನ ಕಾಲುಗಳಲ್ಲಿ ಮೆಟ್ಟಿ ಒಡೆಯುತ್ತದೆ ನಂತರ ನುಂಗುವಷ್ಟು ದೊಡ್ಡ ಉಂಡೆಯಂತೆ ಮಾಡಿ ತಿನ್ನುತ್ತದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈ ಅಪರೂಪದ ವೀಡಿಯೋಗೆ ನೆಟ್ಟಿಗರು ಖುಷಿಯಾಗಿದ್ದು, ಆನೆಯ ಅಪಾರ ಶಕ್ತಿಗೆ ತಲೆ ಬಾಗಿದ್ದಾರೆ.