Asianet Suvarna News Asianet Suvarna News

ಎಲೆಕ್ಟ್ರಿಕ್‌ ಬೈಕ್‌ ಮಳಿಗೆಗೆ ಬೆಂಕಿ; 8 ಜನರು ಸುಟ್ಟು ಭಸ್ಮ

  • ಎಲೆಕ್ಟ್ರಿಕ್‌ ಬೈಕ್‌ ಶೋರೂಂನಲ್ಲಿ ಅಗ್ನಿ ಅವಘಡ, 8 ಸಾವು
  • ಮೇಲಿನ ಹೋಟೆಲ್‌ನಲ್ಲಿ ಮಲಗಿದ್ದ 8 ಜನರ ದಾರುಣ ಸಾವು
  • ಸಿಕಂದರಾಬಾದ್‌ನಲ್ಲಿ ಸೋಮವಾರ ರಾತ್ರಿ ಭಾರೀ ದುರ್ಘಟನೆ
  • ಚಾರ್ಜಿಂಗ್‌ ವೇಳೆ ಬೈಕ್‌ ಸ್ಫೋಟಗೊಂಡು ಬೆಂಕಿ ಹತ್ತಿರುವ ಶಂಕೆ
Electric bike shop on fire 8 people burnt to ashes hydrbd rav
Author
First Published Sep 14, 2022, 5:35 AM IST | Last Updated Sep 14, 2022, 5:35 AM IST

ಹೈದರಾಬಾದ್‌ (ಸೆ.14) : ಎಲೆಕ್ಟ್ರಿಕ್‌ ಬೈಕ್‌ ಶೋರೂಂ ಹಾಗೂ ಹೋಟೆಲ್‌ ಇದ್ದ ಇಲ್ಲಿನ ಬಹುಮಹಡಿ ಕಟ್ಟಡವೊಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಹೋಟೆಲ್‌ನಲ್ಲಿದ್ದ 8 ಜನರು ಸಾವನ್ನಪ್ಪಿ, 7 ಜನರು ಗಾಯಗೊಂಡ ಘಟನೆ ನಡೆದಿದೆ. ಈ ಅಗ್ನಿ ಅವಘಡಕ್ಕೆ ಕಟ್ಟಡದ ನೆಲ ಮಾಳಿಗೆ ಮತ್ತು ನೆಲಮಹಡಿಯಲ್ಲಿರುವ ಎಲೆಕ್ಟ್ರಿಕ್‌ ಬೈಕ್‌ ಶೋರೂನಲ್ಲಿ, ಚಾರ್ಜಿಂಗ್‌ಗೆ ಹಾಕಿದ್ದ ಬೈಕ್‌ ಸ್ಫೋಟಗೊಂಡಿದ್ದೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

Fire at Ather ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಕೇಂದ್ರದಲ್ಲಿ ಬೆಂಕಿ!

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವ ಹೊತ್ತಿನಲ್ಲೇ ನಡೆದ ಮತ್ತೊಂದು ದುರ್ಘಟನೆ, ಎಲೆಕ್ಟ್ರಿಕ್‌ ವಾಹನಗಳ ಕುರಿತು ಸುರಕ್ಷತೆ ಕುರಿತು ಮತ್ತೊಮ್ಮೆ ಸಂದೇಹ ಹುಟ್ಟುಹಾಕಿದೆ.

ಅಗ್ನಿ ಅವಘಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಡಿದವರ ಕುಟುಂಬಗಳಿಗೆ ತಲಾ 2 ಲಕ್ಷ ರು.ಮತ್ತು ಗಾಯಾಳುಗಳ ಕುಟುಂಬಕ್ಕೆ ತಲಾ 50000 ರು. ನೆರವನ್ನು ಮೋದಿ ಪ್ರಕಟಿಸಿದ್ದಾರೆ.

ಏನಾಯ್ತು?:

ಇಲ್ಲಿನ ಬಹುಮಹಡಿ ಕಟ್ಟಡವೊಂದರ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿ ಜಿಮೊಪೈ ಎಂಬ ಬ್ರ್ಯಾಂಡ್‌ನ ಎಲೆಕ್ಟ್ರಿಕ್‌ ಬೈಕ್‌ ಶೋರೂಂ ಇದೆ. ಶೋ ರೂಂನಲ್ಲಿ 35-40 ಬೈಕ್‌ಗಳನ್ನು ನಿಲ್ಲಿಸಲಾಗಿತ್ತು. ನಂತರದ 4 ಮಹಡಿಗಳಲ್ಲಿ ರೂಬಿ ಪ್ರೈಡ್‌ ಎಂಬ ಹೋಟೆಲ್‌ ಇದೆ. ಸೋಮವಾರ ರಾತ್ರಿ ಕಟ್ಟಡದ ನೆಲ ಮಾಳಿಗೆ ಮತ್ತು ನೆಲಮಹಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಮೊದಲ ಮತ್ತು 2ನೇ ಮಹಡಿಗೂ ಹಬ್ಬಿದೆ. ಘಟನೆ ನಡೆದಾಗ ಹೋಟೆಲ್‌ನಲ್ಲಿ 24 ಜನ ತಂಗಿದ್ದರು. ಈ ಪೈಕಿ ಮೊದಲ ಮತ್ತು ಎರಡನೇ ಮಹಡಿಯಲ್ಲಿದ್ದವರು ಬೆಂಕಿಯ ಅವಘಡದಿಂದ ತಪ್ಪಿಸಿಕೊಳ್ಳಲು ಕಾರಿಡಾರ್‌ ಮೂಲಕ ಹೊರಬರಲು ಯತ್ನಿಸಿದ ವೇಳೆ ಹೊಗೆಯಿಂದಾಗಿ ಉಸಿರುಕಟ್ಟಿಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ 8 ಜನರಲ್ಲಿ ಓರ್ವ ಮಹಿಳೆ ಕೂಡಾ ಸೇರಿದ್ದಾರೆ. ಕೆಲವರು ಕಟ್ಟಡದ ಕಿಟಕಿಯಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದ 7 ಗ್ರಾಹಕರನ್ನು ರಕ್ಷಿಸಿದ್ದಾರೆ.

 

50 ಕ್ಕೂ ಹೆಚ್ಚು ಬೌನ್ಸ್‌ ಸ್ಕೂಟರ್ ಬೆಂಕಿಗಾಹುತಿ

ಚಾಜ್‌ರ್‍ ಹಾಕಿದ್ದ ಬೈಕ್‌ ಸ್ಫೋಟವೇ ಬೆಂಕಿಗೆ ಕಾರಣ?:

ಪ್ರಾಥಮಿಕ ತನಿಖೆ ಅನ್ವಯ, ಘಟನೆ ವೇಳೆ ಬೈಕ್‌ಗಳನ್ನು ಚಾರ್ಜಿಂಗ್‌ಗೆ ಹಾಕಲಾಗಿತ್ತು. ಅವು ಸ್ಫೋಟಗೊಂಡು ಅದರ ಬೆಂಕಿ ಎಲ್ಲೆಡೆ ಹಬ್ಬಿರಬಹುದು ಎಂದು ಅಂದಾಜಿಸಲಾಗಿದೆ. ಶಾಟ್‌ ಸರ್ಕೀಟ್‌ನ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ ಖಚಿತ ಮಾಹಿತಿಗಾಗಿ ಇನ್ನಷ್ಟುವಿಸ್ತೃತ ತನಿಖೆಯ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ. ಜೊತೆಗೆ ಕಟ್ಟಡವು ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದಿರಲಿಲ್ಲ. ಅಗ್ನಿ ಸುರಕ್ಷತಾ ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕಟ್ಟಡದ ಮಾಲೀಕರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರೀಗ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios