ಹಾಸನ (ಜ.29):  ಆನ್‌ಲೈನ್‌ ಬುಕಿಂಗ್‌ ಮೂಲಕ ಬಾಡಿಗೆ ಆಧಾರದಲ್ಲಿ ಸಾರ್ವಜನಿಕರಿಗೆ ಸ್ಕೂಟರ್‌ ಸೌಲಭ್ಯ ಒದಗಿಸುವ ಬೌನ್ಸ್‌ ಕಚೇರಿಗೆ ಬೆಂಕಿ ಬಿದ್ದ ಪರಿಣಾಮ 50 ಹೆಚ್ಚು ಸ್ಕೂಟರ್‌ಗಳು ಸುಟ್ಟುಹೋಗಿರುವ ಘಟನೆ ನಗರದ ಸಾಲಗಾಮೆ ಬೈಪಾಸ್‌ ಬಳಿ  ಬೆಳಗ್ಗೆ ನಡೆದಿದೆ.

ನಗರದ ಸಾಲಗಾಮೆ ರಸ್ತೆಯಿಂದ ಉದ್ದೂರು ಕಡೆಗೆ ಹೋಗುವ ಬೈಪಾಸ್‌ನಲ್ಲಿರುವ ‘ನವೀನ ನಿಲಯ’ ಎನ್ನುವ ಮೂರಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬೌನ್ಸ್‌ ಕಚೇರಿ ಇತ್ತು. ನೆಲಮಳಿಗೆಯೂ ಸೇರಿದಂತೆ ರಸ್ತೆಬದಿಯಲ್ಲಿ ಹತ್ತಾರು ಸ್ಕೂಟರ್‌ಗಳನ್ನು ನಿಲ್ಲಿಸಲಾಗಿತ್ತು. ಆದರೆ, ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನೆಲ ಮಾಳಿಗೆಯಿಂದ ದಟ್ಟವಾದ ಹೊಗೆ ಬರುತ್ತಿದ್ದುದನ್ನು ಕಂಡ ಸಾರ್ವಜನಿಕರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗೆ ಬೆಂಕಿ ತೀವ್ರವಾಗಿ ವ್ಯಾಪಿಸಿತ್ತು. ಪರಿಣಾಮವಾಗಿ ಕಟ್ಟಡದ ಒಳಗಿದ್ದ ಸ್ಕೂಟರ್‌ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಸ್ಥಳೀಯರ ನೆರವು:

ಕಟ್ಟಡದ ನೆಲಮಾಳಿಗೆಯಷ್ಟೇ ಅಲ್ಲದೆ ಕಟ್ಟಡದ ಮುಂಭಾಗದಲ್ಲೂ ಮೂವತ್ತಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ನಿಲ್ಲಿಸಲಾಗಿತ್ತು. ಬೆಂಕಿ ಹೆಚ್ಚಾಗಿ ನೆಲಮಾಳಿಗೆಯಿಂದ ಕಟ್ಟಡದ ಮುಂದೆ ನಿಂತಿದ್ದ ಸ್ಕೂಟರ್‌ಗಳಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ ಕೆಲ ಸ್ಥಳೀಯರು ಕಟ್ಟಡದ ಮುಂದೆ ನಿಲ್ಲಿಸಲಾಗಿದ್ದ ಬೌನ್ಸ್‌ ಸ್ಕೂಟರ್‌ಗಳನ್ನು ಎಳೆದು ದೂರಕ್ಕೆ ನಿಲ್ಲಿಸಿದರು.

59KM ಮೈಲೇಜ್, ಬಿಡುಗಡೆಯಾಗಲಿದೆ ಹೊಂಡಾ ಸ್ಕೂಪಿ ಸ್ಕೂಟರ್! ..

ಸ್ಥಳೀಯರು ಹೇಳುವ ಪ್ರಕಾರ ಲಾಕ್‌ಡೌನ್‌ನಿಂದಾಗಿ ಬೌನ್ಸ್‌ ಬೈಕ್‌ ಮಾಲೀಕರು ತೀವ್ರ ನಷ್ಟಅನುಭವಿಸಿದ್ದರು. ಹಾಗಾಗಿ ಬೌನ್ಸ್‌ ಸ್ಕೂಟರ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಎಂದಿನಂತೆ ಗುರುವಾರ ಕೂಡ ಸ್ಕೂಟರ್‌ಗಳನ್ನು ನೋಡಲು ಗ್ರಾಹಕರು ಬಂದಿದ್ದರು. ಮತ್ತು ಬೈಕ್‌ ರಿಪೇರಿ ಮಾಡುವಾಗ ಶಾರ್ಟ್‌ ಸಕ್ರ್ಯೂಟ್‌ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ತೀವ್ರತೆ ಹೆಚ್ಚಿಸಿದ ಪೆಟ್ರೋಲ್‌, ಬ್ಯಾಟರಿ

ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣಗಳಲ್ಲಿ ಅಗ್ನಿಜ್ವಾಲೆ ತೀವ್ರಗೊಂಡಿದೆ. ಸ್ಕೂಟರ್‌ಗಳಲ್ಲಿದ್ದ ಪೆಟ್ರೋಲ್‌ ಹಾಗೂ ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿದ್ದ ಬ್ಯಾಟರಿಗಳು ಸ್ಫೋಟಗೊಂಡಿವೆ. ಒಂದರ ಪಕ್ಕ ಒಂದು ನಿಲ್ಲಿಸಿದ್ದ ಸ್ಕೂಟರ್‌ಗಳಿಂದಾಗಿ ಬೆಂಕಿ ಬೇಗ ವ್ಯಾಪಿಸಿದೆ. ಇದರ ಜತೆಗೆ ಎಲ್ಲಾ ಸ್ಕೂಟರ್‌ಗಳಲ್ಲೂ ಪೆಟ್ರೋಲ್‌ ಇತ್ತು. ಇದರಿಂದ ಬೆಂಕಿ ಇನ್ನಷ್ಟುತೀವ್ರಗೊಳ್ಳಲು ಕಾರಣವಾಗಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಅಲ್ಲಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬ್ಯಾಟರಿಗಳು ಸಿಡಿದಿವೆ.

ಹೊಂಡಾ ಆಕ್ಟೀವಾ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಹೀರೋ ಸ್ಪ್ಲೆಂಡರ್! ..

ಬೆಂಕಿಯಿಂದ ಕಟ್ಟಡಕ್ಕೆ ಆಪತ್ತು

ಈ ನಡುವೆ ಇತ್ತೀಚೆಗಷ್ಟೇ ನಿರ್ಮಾಣವಾಗಿದ್ದ ಈ ಕಟ್ಟಡ ಅಗ್ನಿ ಅನಾಹುತದಿಂದ ಅಪಾಯಕ್ಕೆ ಸಿಲುಕಿದೆ. ಕಟ್ಟಡದ ನೆಲಮಾಳಿಗೆಯಲ್ಲೇ ಈ ಅಗ್ನಿ ಅನಾಹುತ ಸಂಭವಿಸಿರುವುದರಿಂದ ಕಟ್ಟಡದ ಆಧಾರಸ್ತಂಭಗಳು ಬೆಂಕಿಯ ಜ್ವಾಲೆಗೆ ದುರ್ಬಲಗೊಂಡಿವೆ. ಅಗ್ನಿ ನಂದಿಸುವ ವೇಳೆಯೇ ಮಳಿಗೆಯ ರೋಲಿಂಗ್‌ ಶೆಟರ್‌ ಕೂಡ ಕಳಚಿಬಿದ್ದಿದೆ. ಗೋಡೆಯ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸಾಲದ್ದಕ್ಕೆ ಕಟ್ಟಡದ ಮೇಲ್ಭಾಗದಲ್ಲಿ ಕೆಲ ಕುಟುಂಬಗಳು ಬಾಡಿಗೆ ಪಡೆದು ವಾಸ ಇದ್ದಾರೆ. ಅನಾಹುತದಿಂದ ಕಟ್ಟಡದ ಮಾಲೀಕರು ಕಂಗಾಲಾಗಿದ್ದಾರೆ. ಪೆನ್‌ಷೆನ್‌ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆಯಿಂದ ಬೆಂಕಿ ಯಾವ ಕಾರಣದಿಂದಾಗಿ ಹೊತ್ತಿದೆ ಎಂಬುದರ ಸತ್ಯಾಂಶ ಹೊರಬರಬೇಕಾಗಿದೆ.