ಭಾರಿ ಬಹುಮತಗಳೊಂದಿಗೆ ಎನ್‌ಡಿಎ ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಅತ್ಯುನ್ನತ ಸ್ಥಾನಕ್ಕೇರಿದ ಭಾರತದ ಮೊದಲ ಆದಿವಾಸಿ ಮಹಿಳೆ ಅನ್ನೋ ಹೆಗ್ಗಳಿಕೆಗೆ ಮುರ್ಮು ಪಾತ್ರರಾಗಿದ್ದಾರೆ.
ನವದೆಹಲಿ(ಜು. 21): ರಾಷ್ಟ್ರಪತಿ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಎನ್‌ಡಿಎ ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆ ಅಂತ್ಯಗೊಂಡಿದೆ. ದ್ರೌಪದಿ ಮುರ್ಮು 57,777 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ, ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ 26,1062 ಮತಗಳನ್ನು ಪಡೆದಿದ್ದಾರೆ. ದ್ರೌಪದಿ ಮುರ್ಮು ಶೇಕಡಾ 68.87 ಮತಗಳನ್ನು ಪಡೆದರೆ, ಯಶವಂತ್ ಸಿನ್ಹ ಶೇಕಡಾ 31.1 ರಷ್ಟು ಮತಗಳನ್ನು ಪಡೆದಿದ್ದಾರೆ. ಭರ್ಜರಿ ಗೆಲುವು ದಾಖಲಿಸಿರುವ ದ್ರೌಪದಿ ಮುರ್ಮು ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೇರುತ್ತಿರುವ ಮೊದಲ ಆದಿವಾಸಿ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಹಿರಿಮೆಗೂ ಪಾತ್ರರಾಗಿದ್ದಾರೆ. ಯುಪಿಎ ಅವಧಿಯಲ್ಲಿ ಪ್ರತಿಭಾ ಪಾಟೀಲ್ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಅನ್ನೋ ಸಾಧನೆ ಮಾಡಿದ್ದಾರೆ.
ಅಭೂತ ಪೂರ್ವ ಗೆಲುವು ದಾಖಲಿಸಿದ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಹಲವು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆದಿದ್ದಾರೆ.
ಭಾರತದ ನೂತನ ರಾಷ್ಟ್ರಪತಿ ಸ್ಯಾಲರಿ ಎಷ್ಟು? ಭತ್ಯೆ, ಕಾರು ಬಂಗಲೆ ಸೇರಿ ಇದೆ ಹಲವು ಸವಲತ್ತು!
ಭರ್ಜರಿ ಗೆಲುವು ದಾಖಲಿಸಿದ ದ್ರೌಪದಿ ಮುರ್ಮುಗೆ ವಿಪಕ್ಷಗಳ ಅಭ್ಯರ್ಥಿ, ಪ್ರತಿಸ್ಪರ್ಧಿ ಯಶವಂತ್ ಸಿನ್ಹ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಪರೋಕ್ಷವಾಗಿ ಬಿಜೆಪಿಯ ಕೈಗೊಂಬೆಯಾಗಬಾರದು ಎಂಬ ಕಿವಿ ಮಾತನ್ನು ಹೇಳಿದ್ದಾರೆ. ಚುನಾವಣೆಯಲ್ಲಿ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಸಲಿದ್ದಾರೆ. ಯಾವುದೇ ಭಯ, ಪಕ್ಷಪಾತಕ್ಕೆ ಒಳಗಾಗದೆ ಅಧಿಕಾರ ನಡೆಸಲಿ ಎಂದು ಯಶವಂತ್ ಸಿನ್ಹ ಟ್ವೀಟ್ ಮೂಲಕ ಹೇಳಿದ್ದಾರೆ.
ದ್ರೌಪದಿ ಮುರ್ಮು ಗೆಲುವಿನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ , ಮುರ್ಮು ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಮೋದಿ ನೇರವಾಗಿ ಮುರ್ಮು ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಇಡೀ ದೇಶ ದ್ರೌಪದಿ ಮುರ್ಮುಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ದ್ರೌಪದಿ ಮುರ್ಮು ಆಯ್ಕೆ ಮಾಡಿದ ಎಲ್ಲಾ ಶಾಸಕರು, ಸಂಸದರಿಗೆ ಮೋದಿ ಧನ್ಯವಾದ ಹೇಳಿದ್ದಾರೆ.
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಇದು ಸಮಾಜದ ಕೆಳಸ್ತರದಿಂದ ಬಂದು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುತ್ತಿರುವುದು ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ ಎಂದು ಬೊಮ್ಮಾಯಿ ಹೇಳಿದ್ದಾರೆ.
Presidential Election 2022 Result Live: ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿಯಾಗಿ ಆಯ್ಕೆ
ಇದೇ ಮೊದಲ ಬಾರಿಗೆ ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾಗುತ್ತಿದ್ದಾರೆ. ಹಾಗಾಗಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಇದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿ ದ್ರೌಪತಿ ಮುರ್ಮು ರಾಷ್ಟ್ರಪತಿ ಆಗುತ್ತಿರುವುದು ಒಂದು ಸೌಭಾಗ್ಯ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
