ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಕುಸಿತದ ಬಗ್ಗೆ ಡಚ್ ಪ್ರಧಾನಿ ರಾಬ್ ಜೆಟ್ಟನ್ ವ್ಯಕ್ತಪಡಿಸಿದ ಕಳವಳವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಭಾರತದ ವೈವಿಧ್ಯಮಯ ಪ್ರಜಾಪ್ರಭುತ್ವದ ಬಗ್ಗೆ ಅರಿವಿನ ಕೊರತೆಯಿಂದ ಈ ಹೇಳಿಕೆ ಬಂದಿದೆ ಎಂದು ಭಾರತ ತಿರುಗೇಟು ನೀಡಿದೆ.

  • - ಭಾರತದ ಬಗ್ಗೆ ಅರಿವಿನ ಕೊರತೆಯಿಂದ ಇಂಥ ಹೇಳಿಕೆ
  • - ಭಾರತ ವೈವಿಧ್ಯಮಯ ಧರ್ಮ, ಭಾಷೆ, ಸಂಸ್ಕೃತಿಯ ದೇಶ
  • - ಭಾರತ ಬಿಟ್ಟು ಬೇರೆಲ್ಲೂ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿಲ್ಲ

ಹೇಗ್‌: ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಕುಸಿತ ಕುರಿತು ಡಚ್‌ ಪ್ರಧಾನಿ ರಾಬ್‌ ಜೆಟ್ಟನ್‌ ಅವರ ಕಳವಳವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಭಾರತ ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಾಗಿದೆ. ಭಾರತದ ಪ್ರಜಾಪ್ರಭುತ್ವ, ಇತಿಹಾಸ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಕುರಿತು ತಿಳಿವಳಿಕೆ ಇಲ್ಲದೆ ಈ ಕಳವಳ ವ್ಯಕ್ತವಾಗಿದೆ ಎಂದು ತಿರುಗೇಟು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದ ವೇಳೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮುಸ್ಲಿಂ ಸೇರಿ ಅಲ್ಪಸಂಖ್ಯಾತರ ಹಕ್ಕುಗಳ ಕುಸಿತದ ಕುರಿತು ಡಚ್‌ ಪ್ರಧಾನಿ ಎತ್ತಿದ ಕಳವಳ ಕುರಿತು ಏನು ಹೇಳುತ್ತೀರಿ ಎಂಬ ಡಚ್‌ ಪತ್ರಕರ್ತರೊಬ್ಬರ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಿ.ಬಿ.ಜಾರ್ಜ್‌ ಈ ಉತ್ತರ ನೀಡಿದ್ದಾರೆ.

ನಾವು ಇಂಥ ಪ್ರಶ್ನೆಗಳನ್ನು ಪದೇ ಪದೆ ಎದುರಿಸುತ್ತಲೇ ಇರುತ್ತೇವೆ. ಯಾಕೆಂದರೆ ಈ ರೀತಿಯ ಪ್ರಶ್ನೆ ಕೇಳುವವರಿಗೆ ದೇಶದ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಭಾರತದಲ್ಲಿ 140 ಕೋಟಿ ಜನರಿದ್ದಾರೆ, ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದು. ನಮ್ಮ ನಾಗರಿಕತೆ 5 ಸಾವಿರ ವರ್ಷಕ್ಕಿಂತಲೂ ಹಳೆಯದು, ಭಾಷೆ, ಸಂಸ್ಕೃತಿ, ಆಹಾರ, ಧರ್ಮ ಪ್ರತಿಯೊಂದರಲ್ಲೂ ನಮ್ಮಲ್ಲಿ ವೈವಿಧ್ಯತೆ ಇದೆ. ಹಿಂದೂ, ಬೌದ್ಧ, ಜೈನ, ಸಿಖ್‌ ಈ 4 ಧರ್ಮಗಳಿಗೆ ಭಾರತವೇ ಮೂಲ. ಯಹೂದಿಗಳು 2500 ವರ್ಷಗಳಿಂದ ಭಾರತದಲ್ಲಿ ಕಿರುಕುಳ ಅನುಭವಿಸದೆ ಸಹಬಾಳ್ವೆ ನಡೆಸುತ್ತಿದ್ದಾರೆ. ಕ್ರೈಸ್ತರು, ಮುಸ್ಲಿಂ ಎರಡೂ ಧರ್ಮಗಳು ಭಾರತದಲ್ಲಿ ಬೆಳೆಯುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಲ್ಪಸಂಖ್ಯಾತರ ಸಂಖ್ಯೆ ಶೇ.11ರಷ್ಟಿತ್ತು. ಇದೀಗ ಅದು ಶೇ.20ಕ್ಕೇರಿದೆ. ವಿಶ್ವದ ಯಾವ ದೇಶದಲ್ಲೂ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾದ ದಾಖಲೆ ಇಲ್ಲ ಎಂದು ತಿಳಿಸಿದರು.

ಡಚ್‌ ಪ್ರಧಾನಿ ಹೇಳಿದ್ದೇನು?:

ಮೋದಿ ಭೇಟಿಗೂ ಮುನ್ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಚ್‌ ಪ್ರಧಾನಿ ಜೆಟನ್‌, ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳು, ಪತ್ರಿಕಾ ಸ್ವಾತಂತ್ರ್ಯ ಕುರಿತು ಕಳವಳ ವ್ಯಕ್ತಪಡಿಸಿದ್ದರು.