ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ, ನಾಳೆ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಆಯೋಜಿಸಿದೆ. ಇದೀಗ ಎಲ್ಲರ ಚಿತ್ತ ಈ ಸುದ್ದಿಗೋಷ್ಠಿ ಮೇಲೆ ನೆಟ್ಟಿದೆ. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಆಯೋಗ, ಇದೀಗ ಯಾವ ರಾಜ್ಯದಿಂದ ಆರಂಭಿಸಲಿದೆ?
ನವದೆಹಲಿ (ಅ.26) ಬಿಹಾರ ಚುನಾವಣೆ ಕಾವು ಜೋರಾಗಿದೆ. ಇದೇ ಬಿಹಾರದಲ್ಲಿ ಚನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆ ಕೂಡ ಭಾರಿ ವಿವಾದಕ್ಕೂ ಕಾರಣವಾಗಿತ್ತು. ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ಈ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿತ್ತು. ಇದೀಗ ಚುನಾವಣಾ ಆಯೋಗ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಬಿಹಾರ ಚುನಾವಣೆ ಮುಗಿಯುತ್ತಿದ್ದಂತೆ ಇತರ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ ಅನ್ನೋ ಸುಳಿವನ್ನು ಚುನಾವಣಾ ಆಯೋಗ ನೀಡಿದೆ. ಇದರ ಬೆನ್ನಲ್ಲೇ ನಾಳೆ (ಅ.27) ಚುನಾವಣಾ ಆಯೋಗ ದಿಢೀರ್ ಸುದ್ದಿಗೋಷ್ಠಿ ಕರೆದಿದೆ.
ನಾಲ್ಕು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಾಧ್ಯತೆ
ಚುನಾವಣಾ ಆಯೋಗ ಅಕ್ಟೋಬರ್ 27ರ ಸಂಜೆ 4.15ಕ್ಕೆ ಸುದ್ದಿಗೋಷ್ಠಿ ಕರೆದಿದೆ. ಈ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಘೋಷಣೆ ಮಾಡುವ ಸಾಧ್ಯತೆ ಇದೆ. ಹಂತ ಹಂತವಾಗಿ ಪರಿಷ್ಕರಣೆ ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಮೊದಲ ಹಂತದಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಳ್ಳಲಿದೆ. ಬಿಹಾರ ಚುನಾವಣೆ ಬಳಿಕ ಈ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಮತದಾರರ ಪಟ್ಟಿ ಪರಿಷ್ಕರಣೆ ದೇಶಾದ್ಯಂತ ನಡೆಯಲಿದೆ.
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನಾಲ್ಕು ರಾಜ್ಯಗಳಲ್ಲಿ ಪರಿಷ್ಕರಣೆ
ಮುಂಬರುವ ವಿಧಾನಸಭೆ ಚುನಾವಣೆ ಕಾರಣದಿಂದ ಮೊದಲ ಹಂತದಲ್ಲಿ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ. ಪ್ರಮುಖವಾಗಿ ಈ ರಾಜ್ಯದಲ್ಲಿ ಮುಂದಿನ ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಈ ನಾಲ್ಕು ರಾಜ್ಯಗಳಲ್ಲಿ ಮೊದಲ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ. ಬಳಿಕ ಮುಂದಿನ ರಾಜ್ಯಗಳಲ್ಲಿ ನಡೆಯಲಿದೆ.
ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವವರು, ನಕಲಿ ಹೆಸರು, ವಿಳಾಳ, ಮೃತಪಟ್ಟ ಬಳಿಕವೂ ಮತದಾರ ಪಟ್ಟಿಯಲ್ಲಿ ಬಾಕಿ ಉಳಿದಿರುವ ಹೆಸರು ಸೇರಿದಂತೆ ಸಂಪೂರ್ಣವಾಗಿ ಪರಿಷ್ಕರಣೆಗೆ ಒಳಪಡಲಿದೆ. ಹಂತ ಹಂತವಾಗಿ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಈ ನಿಟ್ಟಿನಲ್ಲಿ ನಾಳೆ ಚುನಾವಣಾ ಆಯೋಗ ಕರೆದಿರುವ ಸುದ್ದಿಗೋಷ್ಠಿ ಭಾರಿ ಮಹತ್ವ ಪಡೆದಿದೆ.
ಬಿಹಾರದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 6 ಹಾಗೂ ನವೆಂಬರ್ 11ರಂದು ಮತದಾನ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
