ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯಾರಿಗೆಲ್ಲಾ ಟಿಕೆಟ್? ನೀಡಲಾಗಿದೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಬಿಹಾರ ಉಪಮುಖ್ಯಮಂತ್ರಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನವದೆಹಲಿ (ಅ.14) ಬಿಹಾರ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಬಿಜೆಪಿ ಹಾಗೂ ಜೆಡಿಯು ಸೀಟು ಹಂಚಿಕೆ ಫೈನಲ್ ಆಗಿದೆ. ಇತ್ತ ಇಂಡಿಯಾ ಮೈತ್ರಿ ಒಕ್ಕೂಟ ಮಾತುಕತೆ ಮುಂದುವರಿದಿದೆ. ಇದರ ನಡುವೆ ಬಿಜೆಪಿ ಬಿಹಾರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 71 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿ ಹಾಗೂ ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಫರ್ಧಿಸುತ್ತಿದೆ.

ಬಿಹಾರದ ಹಾಲಿ ಸಚಿವರು, ಪ್ರಮುಖ ಶಾಸಕರಿಗೆ ಟಿಕೆಟ್

ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಕುಮಾರ್ ಸಿನ್ಹ ತಾರಾಪುರ್ ಹಾಗೂ ಲಖಿಸರಯಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿವ ನಿತಿನ್ ಬಿಬಂಕಿಪುರದಿಂದ ಸ್ಪರ್ಧಿಸಲಿದ್ದಾರೆ. ಬೆಟ್ಟಿ ಕ್ಷೇತ್ರದಿಂದ ರೇಣು ದೇವಿ ಸ್ಪರ್ಧಿಸುತ್ತಿದ್ದಾರೆ. ಬೆಜಿಪಿ ಹಿರಿಯ ನಾಯಕ ರಾಮ್ ಕೃಪಾಲ್ ಯಾದವ್, ಪ್ರೇಮ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ತಾರಕಿಶೋರ್ ಪ್ರಸಾದ್, ಅಲೋಕ್ ರಜನ್ ಝಾ, ಮಂಗಲ್ ಪಾಂಡೆ ಸೇರಿದಂತೆ ಪ್ರಮುಖರು ಸ್ಪರ್ಧಿಸುತ್ತಿದ್ದಾರೆ.

ಎರಡನೇ ಹಂತದಲ್ಲಿ 29 ಕ್ಷೇತ್ರಕ್ಕೆ ಟಿಕೆಟ್

ಮೊದಲ ಹಂತದಲ್ಲಿ 71 ಸ್ಥಾನಕ್ಕೆ ಟಿಕೆಟ್ ಘೋಷಣೆಯಾಗಿದೆ. ಇನ್ನು 29 ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗಬೇಕಿದೆ. ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ 29 ಸ್ಥಾನಕ್ಕೆ ಟಿಕೆಟ್ ಘೋಷಣೆಯಾಗಲಿದೆ. ಮೊದಲ ಹಂತದಲ್ಲಿ ಟಿಕೆಟ್ ಸಿಗದ ಕೆಲ ನಾಯಕರು ಬಿಜೆಪಿ ತೊರೆಯುವ ಬೆದರಿಕೆ ಹಾಕಿದ್ದಾರೆ.

ಎನ್‌ಡಿಎ ಸೀಟು ಹಂಚಿಕೆ ವಿವರ

ಬಿಜೆಪಿ : 101

ಜೆಡಿಯು : 101

ಲೋಕ ಜನಶಕ್ತಿ ಪಾರ್ಟಿ : 29

ರಾಷ್ಟ್ರೀಯ ಲೋಕ್ ಮೋರ್ಚ : 06

ಹಿಂದುಸ್ತಾನಿ ಅವಾಮ್ ಮೋರ್ಚಾ :06

Scroll to load tweet…

ಬಿಹಾರ ವಿಧಾನಸಭೆ ಚುನಾವಣೆ ಇದೀಗ ರಂಗೇರುತ್ತಿದೆ. ಬಿಹಾರದಲ್ಲಿ ಚುನಾವಣಾ ಆಯೋಗ SIR ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದೆ. ಇದೇ ವಿಚಾರ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಬಿಜೆಪಿ ಹಾಗೂ ಚುನಾವಣಾ ಆಯೋಗ ಮತ ಕಳ್ಳತನ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಚುನಾವಣಾ ಆಯೋಗ ಖಡಕ್ ಉತ್ತರ ನೀಡಿದ್ದರು, ಕಾಂಗ್ರೆಸೆ ದೇಶಾದ್ಯಂತ ಮತಗಳ್ಳತನ ಆರೋಪ ಪ್ರಚಾರ ಮಾಡಿದೆ. ಹೀಗಾಗಿ ಬಿಹಾರ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಬಿಜೆಪಿ ಮೇಲೆ ಕೇಳಿಬಂದ ಮತಗಳ್ಳತನ ಆರೋಪ ಮತದಾರರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಅನ್ನೋ ಕುತೂಹಲಕ್ಕೂ ಈ ಚುನಾವಣೆ ಉತ್ತರ ನೀಡಲಿದೆ. ಇಷ್ಟೇ ಅಲ್ಲ ಆಪರೇಶನ್ ಸಿಂದೂರ್ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ. ಹೀಗಾಗಿ ಈ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾಗಿದೆ.