55 ವರ್ಷಗಳ ಕಾಲ ಮತ್ತು ಹಲವು ಸರ್ಕಾರಗಳಿಗೆ ಬಾಹ್ಯ ಬೆಂಬಲ ಕೊಡುವ ಮೂಲಕ ಇನ್ನೊಂದಿಷ್ಟು ವರ್ಷಗಳ ಕಾಲ ಅಧಿಕಾರ ಚಲಾಯಿಸಿದ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿಯವರಿಗಾಗಲಿ, ಅಂಬೇಡ್ಕರ್ ಅವರಂಥ ಮೇರು ನಾಯಕರನ್ನಾಗಲಿ ಯಾವತ್ತಾದರೂ ಪ್ರಾಮಾಣಿಕವಾಗಿ ಗೌರವಿಸಿದೆಯೇ? ಖಂಡಿತವಾಗಿಯೂ ಇಲ್ಲ!
ಆರ್ ಅಶೋಕ್
ವಿರೋಧ ಪಕ್ಷದ ನಾಯಕ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಒಂದು ಚಾರಿತ್ರಿಕ ಹೆಜ್ಜೆ ಇಟ್ಟಿತು. ಅದೇನೆಂದರೆ, ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಮಸೂದೆ ಮಂಡನೆ ಮತ್ತು ಅದಕ್ಕೆ ಸಿಕ್ಕಿದ ರಾಷ್ಟ್ರಪತಿಗಳ ಅಂಗೀಕಾರ. ದೇಶದ ಹಳ್ಳಿಗಾಡಿನ ಜನರಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಖಾತ್ರಿಪಡಿಸುವ ಈ ಮಸೂದೆ ಸಂಕ್ಷಿಪ್ತವಾಗಿ ‘ವಿಬಿಜಿ ರಾಮ್ ಜಿ’ ಎಂದೀಗ ಪರಿಚಿತವಾಗಿದೆ.
ಗ್ರಾಮೀಣ ಭಾಗದ ಪ್ರತಿಯೊಬ್ಬ ವಯಸ್ಕರಿಗೂ, ಕೃಷಿಕರಿಗೂ ವರಮಾನದ ಖಾತ್ರಿ ಕೊಡುವ ಈ ಯೋಜನೆ ವಿರುದ್ಧ ಕಾಂಗ್ರೆಸ್ ವಿನಾ ಕಾರಣ ಹುಯಿಲೆಬ್ಬಿಸುವ ನಾಟಕವಾಡುತ್ತಿದೆ. ‘ವೋಟ್ ಚೋರಿ’ ಅಸ್ತ್ರ ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ಠುಸ್ಸೆಂದ ಮೇಲೆ ಆ ಪಕ್ಷದ ಹತಾಶೆ ಮತ್ತೊಂದು ಹಂತಕ್ಕೆ ಹೋಗಿದೆ ಎನ್ನಲು ಈ ವರ್ತನೆಯೇ ಸಾಕ್ಷಿ. ಇಷ್ಟಕ್ಕೂ ಅವರ ತಕರಾರೇನು? ತಮ್ಮ ಪಕ್ಷದ ಸರ್ಕಾರ 2005ರಲ್ಲಿ ಜಾರಿಗೆ ತಂದ `ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆ್ಯಕ್ಟ್’ನ (ಮನರೇಗಾ) ಹೆಸರು ಬದಲಿಸಿ, ‘ರಾಮ’ನ ಹೆಸರನ್ನು ಬೇಕೆಂದೇ ಸೇರಿಸಲಾಗಿದೆ ಎನ್ನುವುದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಆ ಪಕ್ಷದವರ ಆರೋಪ. ಆದರೆ ಇದೊಂದು ಅಪಾಲಾಪ!
ಗಾಂಧಿಜೀಯೇ ರಾಮನ ಭಕ್ತರು:
ಏಕೆಂದರೆ, ಮೊದಲನೆಯದಾಗಿ ಸ್ವತಃ ಮಹಾತ್ಮ ಗಾಂಧಿಯವರೇ ರಾಮನ ಭಕ್ತರಾಗಿದ್ದರು! ಮಹಾತ್ಮ ಗಾಂಧಿ ನಮ್ಮ ಕಾಲದ ಆದರ್ಶ, ನಿಜ. ಆದರೆ, ಅಂತಹ ಗಾಂಧೀಜಿಗೆ ತ್ರೇತಾಯುಗದ ಶ್ರೀರಾಮ ಆದರ್ಶಪುರುಷನಾಗಿದ್ದ. ಆಗಿನಿಂದಲೂ ರಾಮನು ಭಾರತವರ್ಷದ ಪಾಲಿಗೆ `ಪುರುಷೋತ್ತಮ’ನೇ ಆಗಿದ್ದಾನೆ! ಸ್ವತಃ ಮಹಾತ್ಮ ಗಾಂಧಿಗೇ ಆದರ್ಶವಾಗಿದ್ದ ರಾಮನ ಹೆಸರನ್ನು ಈ ಉದ್ಯೋಗ ಖಾತ್ರಿ ಯೋಜನೆಗೆ ಇಟ್ಟಿರುವುದರಿಂದ ಸ್ವತಃ ಗಾಂಧೀಜಿಗೇ ಮತ್ತಷ್ಟು ಗೌರವ ಕೊಟ್ಟಂತಾಗಿದೆ! ಇಂತಹ ಸರಳ ಸತ್ಯವನ್ನು ಕಾಂಗ್ರೆಸ್ಸಿನ ‘ಮಹಾನಾಯಕರು’ ಅರ್ಥಕೊಳ್ಳುತ್ತಿಲ್ಲ. ಏಕೆಂದರೆ, ಹಿಂದೂಗಳ ನಂಬಿಕೆ, ಧರ್ಮಶ್ರದ್ಧೆ, ಧಾರ್ಮಿಕ ಹೆಸರು, ಸಂಕೇತ, ಲಾಂಛನ ಪುಣ್ಯಪುರುಷರು ಇವರನ್ನೆಲ್ಲ ವೋಟುಗಳ ಆಸೆಯಿಂದ ಹುಟ್ಟಿಕೊಂಡಿರುವ ತುಷ್ಟೀಕರಣಕ್ಕಾಗಿ ವಿರೋಧಿಸುತ್ತಲೇ ಇರಬೇಕು ಎನ್ನುವುದು ಅವರ ಕುತರ್ಕ.
ಹಾಗಾದರೆ, ಸ್ವಾತಂತ್ರ್ಯ ಬಂದ ಮೇಲೆ ಸ್ವತಃ ತಾನೇ ನೇರವಾಗಿ 55 ವರ್ಷಗಳ ಕಾಲ ಮತ್ತು ಹಲವು ಸರ್ಕಾರಗಳಿಗೆ ಬಾಹ್ಯ ಬೆಂಬಲ ಕೊಡುವ ಮೂಲಕ ಇನ್ನೊಂದಿಷ್ಟು ವರ್ಷಗಳ ಕಾಲ ಅಧಿಕಾರ ಚಲಾಯಿಸಿದ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿಯವರಿಗಾಗಲಿ, ಅಂಬೇಡ್ಕರ್ ಅವರಂಥ ಮೇರು ನಾಯಕರನ್ನಾಗಲಿ ಯಾವತ್ತಾದರೂ ಪ್ರಾಮಾಣಿಕವಾಗಿ ಗೌರವಿಸಿದೆಯೇ? ಖಂಡಿತವಾಗಿಯೂ ಇಲ್ಲ! ಏಕೆಂದರೆ, ಆ ಪಕ್ಷ ಅಷ್ಟೊಂದು ದೀರ್ಘಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಮಹಾತ್ಮ ಗಾಂಧಿ ಹೆಸರಿನಲ್ಲಿ ಜಾರಿಗೆ ತಂದಿದ್ದು ಕೇವಲ ನಾಲ್ಕೇ ನಾಲ್ಕು ಯೋಜನೆಗಳಷ್ಟೆ.
ಅವೆಂದರೆ- ಈಗ ಸುದ್ದಿಯಲ್ಲಿರುವ ‘ಮನರೇಗಾ’, ಗಾಂಧಿ ಸ್ಮೃತಿ ಮತ್ತು ದರ್ಶನ ಸ್ಮೃತಿ, ಗಾಂಧಿ ಶಿಪ್ ಬಜಾರ್ ಮತ್ತು ಮಹಾತ್ಮ ಗಾಂಧಿ ಬಣಕಾರ್ ವಿಮಾ ಯೋಜನೆ. ಇನ್ನು, ಅಂಬೇಡ್ಕರ್ ಹೆಸರನ್ನು ಆ ಪಕ್ಷ ಅಪ್ಪಿತಪ್ಪಿಯೂ ಯಾವ ಯೋಜನೆಗೂ ಇಟ್ಟಿಲ್ಲ. ಆದರೆ, ಇದೇ ಅವಧಿಯಲ್ಲಿ ಆ ಪಕ್ಷ 450ಕ್ಕೂ ಹೆಚ್ಚು ಯೋಜನೆಗಳು, ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಆಟದ ಮೈದಾನಗಳು, ಮ್ಯೂಸಿಯಂಗಳು, ಬೃಹತ್ ಕಟ್ಟಡಗಳು, ಪ್ರತಿಷ್ಠಾನಗಳು, ರಸ್ತೆಗಳು, ಪ್ರಶಸ್ತಿಗಳು, ಸಂಸ್ಥೆಗಳು ಮುಂತಾದವುಗಳಿಗೆ ನೆಹರು-ಗಾಂಧಿ ವಂಶದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರುಗಳನ್ನಿಟ್ಟು ತನ್ನ ಭಟ್ಟಂಗಿತನ ಪ್ರದರ್ಶಿಸಿ, ಬೆತ್ತಲಾಗಿದೆ! ಇದು ನಿಜವಾದ ಚಿತ್ರಣ. ಜನರಿಂದ ತಿರಸ್ಕೃತವಾಗಿ ಅಧಿಕಾರ ಕಳೆದುಕೊಂಡಿರುವ ಈಗಿನ ದಿವಾಳಿ ಸ್ಥಿತಿಯಲ್ಲಿ ಮಹಾತ್ಮ ಗಾಂಧಿಯ ಹೆಸರನ್ನು ಹೇಳಿಕೊಂಡು ಅರಚುತ್ತಿರುವ ಆ ಪಕ್ಷ ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಬೇಕು
ಜಿ ರಾಮ್ ಜಿ ಜನಪರ ಮಸೂದೆ:
ಈಗ ಮೋದಿ ಸರ್ಕಾರ ತಂದಿರುವ ‘ವಿಬಿ ಜಿ ರಾಮ್ ಜಿ’ ಮಸೂದೆ ಎಷ್ಟೊಂದು ಜನಪರವಾಗಿದೆ ಎನ್ನುವುದನ್ನು ನೋಡೋಣ. ಹಿಂದೆ ಕಾಂಗ್ರೆಸ್ ಸರ್ಕಾರ 2005ರಲ್ಲಿ ತಂದ ‘ಮನರೇಗಾ’ದಲ್ಲಿ ಗ್ರಾಮೀಣ ಜನರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತ್ರಿಯುಷ್ಟೇ ಇತ್ತು; ನಾವೀಗ ಇದನ್ನು 125 ದಿನಗಳಿಗೆ ಏರಿಸಿದ್ದೇವೆ. ಹಳೆಯ ಮಸೂದೆಯಲ್ಲಿ ಕೆಲಸ ಮಾಡಿದವರಿಗೆ ವೇತನ ಪಾವತಿಗೆ ಗಡುವಿರಲಿಲ್ಲ; ಈಗ 15 ದಿನಗಳಲ್ಲಿ ವೇತನ ಪಾವತಿ ಕಡ್ಡಾಯ. ಹಿಂದಿನ ಮಸೂದೆಯಲ್ಲಿ ಬೇನಾಮಿ ಫಲಾನುಭವಿಗಳೇ ಇದರಲ್ಲಿ ತುಂಬಿ ತುಳುಕುತ್ತಿದ್ದರು; ಆದರೆ ಈಗ ಇದಕ್ಕೆ ಕೃತಕ ಬುದ್ಧಿಮತ್ತೆ ಆಧರಿಸಿದ ತಂತ್ರಜ್ಞಾನದ ಕಣ್ಗಾವಲು, ಪಾರದರ್ಶಕತೆ, ಜಿಪಿಎಸ್ ನೆರವಿನ ಮೂಲಕ ಉತ್ತರದಾಯಿತ್ವ ತರಲಾಗಿದೆ. ಈವರೆಗೆ ಈ ಮಸೂದೆಯಲ್ಲಿ ಗ್ರಾಮೀಣ ಭಾಗದ ಕೃಷಿರಂಗಕ್ಕೆ ಬೇಕಾದ ಕಾರ್ಮಿಕರ ಲಭ್ಯತೆ ಬಗ್ಗೆ ಯೋಚಿಸಿರಲೇ ಇಲ್ಲ; ಆದರೆ ಈಗ ಕಟಾವು ಮತ್ತು ಕೊಯ್ಲು ಎರಡನ್ನೂ ಪರಿಗಣಿಸಿ, ವರ್ಷಕ್ಕೆ ಭರ್ತಿ 2 ತಿಂಗಳ ಕಾಲ (60 ದಿನ) ಕೃಷಿಗೆ ಕೆಲಸಗಾರರು ಲಭ್ಯವಿರುವುದನ್ನು ಖಾತ್ರಿಪಡಿಸಲಾಗಿದೆ. ಇದಕ್ಕಾಗಿ ಗ್ರಾಪಂಗಳ ಮಟ್ಟದಲ್ಲೇ `ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ’ ರೂಪಿಸುವ ಸ್ವಾತಂತ್ರ್ಯ ಕೊಡಲಾಗಿದೆ. ಇವೆಲ್ಲವೂ ಜನಪರ ಹೆಜ್ಜೆಗಳೇ ಆಗಿವೆ.
ಇಷ್ಟೇ ಅಲ್ಲ, 2011-12ರಲ್ಲಿ ಶೇ.25.7ರಷ್ಟಿದ್ದ ನಮ್ಮ ದೇಶದ ಗ್ರಾಮೀಣ ಬಡತನ 2023-24ರ ಹೊತ್ತಿಗೆ ಶೇ.5ಕ್ಕೆ ಇಳಿದಿದೆ. ಹೀಗಾಗಿ `ವಿಬಿಜಿ-ರಾಮ್-ಜಿ’ ಯೋಜನೆಗೆ ಕೇಂದ್ರವು ಶೇ.60ರಷ್ಟು, ರಾಜ್ಯಗಳು ಶೇ.40ರಷ್ಟು ಭರಿಸುವಂತೆ ಮಾಡಲಾಗಿದೆ. ಇದರಿಂದ ಕೇವಲ ಹಕ್ಕು ಮತ್ತು ಅಧಿಕಾರಗಳ ಸುಖದ ಕಡೆಗೆ ಮಾತ್ರವಲ್ಲ, ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಗಳ ಆರೋಗ್ಯಕರ ಸಂಸ್ಕೃತಿಯನ್ನೂ ಜಾರಿಗೆ ತರಲಾಗುತ್ತಿದೆ. ಇಂಥ ದಿಟ್ಟ ಉಪಕ್ರಮಗಳ ಮೂಲಕ ಮೋದಿ ಸರ್ಕಾರವು ಕೃಷಿ ಮತ್ತು ಕೃಷಿಯೇತರ ಕಸುಬುಗಳ ವಲಯಗಳ ನಡುವೆ ಸಮತೋಲ ಸಾಧಿಸಲು ಮುಂದಾಗಿದೆ. ಏಕೆಂದರೆ, ಕೃಷಿ ಇಲ್ಲದಿದ್ದರೆ ಮಿಕ್ಕಾವುದೂ ಇಲ್ಲ!
ಜಾಣಕುರುಡಿನ ಕಾಂಗ್ರೆಸ್ ಪಕ್ಷ ಸ್ವಲ್ಪ ಕಣ್ತೆರಡು ನೋಡಬೇಕು. ಆದರೆ ಆ ಪಕ್ಷದ ನಾಯಕರು, ಯಾರನ್ನೋ ಮೆಚ್ಚಿಸಲು ದೊಡ್ಡ ಗಂಟಲಿನ ಗುಗ್ಗುಗಳಾಗುತ್ತಿರುವುದು ಆಷಾಢಭೂತಿತನದ ಪರಮಾವಧಿ! ವಿಕಸಿತ ಭಾರತ ಮಹಾತ್ಮ ಗಾಂಧಿಯವರ ಆಸೆಯಾಗಿರಲಿಲ್ಲವೇ? ಈ ಪ್ರಶ್ನೆಗೆ ಕಾಂಗ್ರೆಸ್ ದೇಶದ ಜನತೆಗೆ ಉತ್ತರಿಸಿ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.


