ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಬಗ್ಗೆ ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳೆಲ್ಲವೂ ಸತ್ಯ ಎಂದು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರದ ಹಲವು ಸಚಿವರು, ‘ಈ ಮತಗಳ್ಳತನ 100 ಪರ್ಸೆಂಟ್‌ ಬಿಜೆಪಿ ಕೆಲಸ.

ಬೆಂಗಳೂರು (ಸೆ.19): ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಬಗ್ಗೆ ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳೆಲ್ಲವೂ ಸತ್ಯ ಎಂದು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರದ ಹಲವು ಸಚಿವರು, ‘ಈ ಮತಗಳ್ಳತನ 100 ಪರ್ಸೆಂಟ್‌ ಬಿಜೆಪಿ ಕೆಲಸ. ಇದಕ್ಕೆ ನಮ್ಮ ಬಳಿ ಅಧಿಕೃತ ದಾಖಲೆಗಳಿವೆ. ಸಮಯ ಬಂದಾಗ ಬಹಿರಂಗಪಡಿಸುತ್ತೇವೆ. ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ.’ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್‌ ಖರ್ಗೆ, ಈಶ್ವರ್‌ ಖಂಡ್ರೆ, ಶರಣ್‌ ಪ್ರಕಾಶ್‌ ಪಾಟೀಲ್‌ ಮತ್ತಿತರ ನಾಯಕರು ಚುನಾವಣಾ ಆಯೋಗದ ವಿರುದ್ಧವೂ ಆಕ್ರೋಶ ಹೊರಹಾಕಿದರು. ಚುನಾವಣಾ ಆಯೋಗ ಮತಗಳ್ಳತನದ ಆರೋಪಕ್ಕೆ ಸಂಬಂಧಿಸಿ ದಾಖಲೆ, ಮಾಹಿತಿ ನೀಡಿ ಸಿಒಡಿ ತನಿಖೆಗೆ ಸಹಕರಿಸದೆ ಬಿಜೆಪಿಯವರ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ದೂರಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ದೇಶದಲ್ಲಿ ಬಿಜೆಪಿ ಜನಪ್ರಿಯತೆ ಕಡಿಮೆ ಆಗಿದ್ದರಿಂದ ಮತಗಳ್ಳತನದಿಂದ ಅಧಿಕಾರಕ್ಕೆ ಬರುವ ಕೆಲಸಕ್ಕಿಳಿದಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ ಅಲ್ಲೆಲ್ಲ ಇಂತಹ ಅಕ್ರಮ ಪ್ರಯೋಗ ನಡೆಸುತ್ತಿದ್ದಾರೆ. ನ್ಯಾಯಯುತವಾಗಿ ಕಳೆದ ಲೋಕಸಭಾ ಚುನಾವಣೆ ನಡೆದಿದ್ದರೆ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದರು.

ಮಾಹಿತಿ ಹೊರಬಂದ್ರೆ ಸರ್ಕಾರ ಪತನ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ನನಗೆ 100 ಪರ್ಸೆಂಟ್‌ ಮಾಹಿತಿ ಇದೆ. ಈ ಮತಗಳ್ಳತನ ಬಿಜೆಪಿಯವರೇ ಮಾಡುತ್ತಿರುವುದು. ಇದಕ್ಕೆ ನನ್ನ ಬಳಿ ಅಧಿಕೃತ ದಾಖಲೆಯೂ ಇದೆ. ಆದರೆ, ಆಯೋಗದಿಂದಲೇ ಇದು ಹೊರಬರಬೇಕು. ಸಮಯ ಬಂದಾಗ ನಾವೂ ಇದನ್ನು ಬಹಿರಂಗಪಡಿಸುತ್ತೇವೆ. ಆಳಂದ ಮತಗಳವು ಪ್ರಕರಣ ದಾಖಲಾಗಿ ಎರಡು ವರ್ಷ ಕಳೆದರೂ ಚುನಾವಣಾ ಆಯೋಗ ಮಾಹಿತಿ ನೀಡಿ ಸಿಒಡಿ ತನಿಖೆಗೆ ಸಹಕರಿಸುತ್ತಿಲ್ಲ. ಕೆಲ ಶಕ್ತಿಗಳನ್ನು ರಕ್ಷಿಸು ಕೆಲಸ ನಡೆಯುತ್ತಿದೆ. ಈ ಮಾಹಿತಿ ಹೊರಬಂದರೆ ಕೇಂದ್ರ ಸರ್ಕಾರವೇ ಬಿದ್ದು ಹೋಗುತ್ತದೆ ಎಂದರು.

ರಾಹುಲ್‌ ಜೊತೆ ಇದ್ದೇವೆ

ಸಚಿವರಾದ ಈಶ್ವರ್‌ ಖಂಡ್ರೆ ಮತ್ತು ಶರಣ್‌ ಪ್ರಕಾಶ್‌ ಪಾಟೀಲ್‌, ರಾಹುಲ್‌ ಗಾಂಧಿ ಅವರು ಮಾಡಿರುವ ಮತಗಳ್ಳತನದ ಆರೋಪ ಸತ್ಯವಾದದ್ದು. ನಾವು ಅವೆಲ್ಲರೂ ಅವರೊಂದಿಗಿದ್ದೇವೆ. ಈ ಅಕ್ರಮದ ವಿರುದ್ಧ ಕಾಂಗ್ರೆಸ್‌ನ ನನ್ನ ಮತ ನನ್ನ ಹಕ್ಕು ಅಭಿಯಾನ ದೇಶಾದ್ಯಂತ ಮುಂದುವರೆಯಲಿದೆ. ಬಿಜೆಪಿ ಕುತಂತ್ರ ಬಯಲಾಗಲಿದೆ. ರಾಹುಲ್ ಗಾಂಧಿ ಅವರ ಕೈ ಬಲಪಡಿಸಿ ಮತ್ತೆ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದರು.