17 ವರ್ಷದ ಮನೆ ಕೆಲಸದಾಕೆಗೆ ಹೊಡೆದು ಬಡಿದು ಚಿಮ್ಮಟಿಯಲ್ಲಿ ದೇಹದ ವಿವಿಧ ಭಾಗಗಳಿಗೆ ಸುಟ್ಟು ಕಿರುಕುಳ ನೀಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಈ ದಂಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯೂ ಕೂಡ ಇವರನ್ನು ಕೆಲಸದಿಂದ ವಜಾಗೊಳಿಸಿದೆ.
ಗುರುಗ್ರಾಮ್: 17 ವರ್ಷದ ಮನೆ ಕೆಲಸದಾಕೆಗೆ ಹೊಡೆದು ಬಡಿದು ಚಿಮ್ಮಟಿಯಲ್ಲಿ ದೇಹದ ವಿವಿಧ ಭಾಗಗಳಿಗೆ ಸುಟ್ಟು ಕಿರುಕುಳ ನೀಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಈ ದಂಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯೂ ಕೂಡ ಇವರನ್ನು ಕೆಲಸದಿಂದ ವಜಾಗೊಳಿಸಿದೆ. 17 ವರ್ಷದ ಮನೆ ಕೆಲಸದಾಕೆಗೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದಂಪತಿಯ ಬಂಧನವಾಗಿದೆ. ಅಲ್ಲದೇ ಅಪ್ರಾಪ್ತ ಬಾಲಕಿಯನ್ನು ಕೆಲಸಕ್ಕೆ ನಿಯೋಜಿಸಿದ ಪ್ಲೇಸ್‌ಮೆಂಟ್ ಸಂಸ್ಥೆಗಾಗಿಯೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬಾಲಕಿ ಕೆಲಸ ಮಾಡುತ್ತಿದ್ದ ಮನೆಯ ಮಹಿಳೆಯೂ ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆಕೆಯನ್ನು ಕೂಡ ಆ ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ. ಮಹಿಳೆಯ ಪತಿ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಿಮಾ ಕಂಪನಿಯೂ ಕೂಡ ಆತನನ್ನು ಕೆಲಸದಿಂದ ತೆಗೆದು ಹಾಕಿ ಮಾನವೀಯತೆ ಮರೆತ ಈ ಜೋಡಿಗೆ ಸಂಸ್ಥೆಗಳು ತಕ್ಕ ಪಾಠ ಕಲಿಸಿವೆ. ಸಂತ್ರಸ್ತ ಬಾಲಕಿ ಜಾರ್ಖಂಡ್‌ನ (Jharkhand) ರಾಂಚಿ (Ranchi) ಮೂಲದವಳಾಗಿದ್ದು, ಈ ದುರುಳ ದಂಪತಿಯ ಮನೆಯಲ್ಲಿ ಪ್ಲೇಸ್‌ಮೆಂಟ್ ಸಂಸ್ಥೆಯೊಂದರ ಮೂಲಕ ಕೆಲಸಕ್ಕೆ ಸೇರಿದ್ದಳು. ಆದರೆ ಘಟನೆಗೆ ಸಂಬಂಧಿಸಿದಂತೆ ಗುರುವಾರ, ದೆಹಲಿಯಲ್ಲಿರುವ ಜಾರ್ಖಂಡ್ ಭವನದ ಅಧಿಕಾರಿಯೊಬ್ಬರು ಬಾಲಕಿಯನ್ನು ಭೇಟಿ ಮಾಡಲು ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಆರೋಗ್ಯ ಸೌಲಭ್ಯದ ಸಿಬ್ಬಂದಿ ತಿಳಿಸಿದ್ದಾರೆ.
ಮನೆ ಕೆಲಸದಾಕೆಯ ಮೇಲೆ ಮಹಿಳೆಯಿಂದ ಹಲ್ಲೆ: ವಿಡಿಯೋ ವೈರಲ್
ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬುವವರು ಬಾಲಕಿಯ ಫೋಟೋದೊಂದಿಗೆ ಆಕೆಗೆ ಈ ದಂಪತಿಯಿಂದ ಎದುರಾದ ದುರ್ಗತಿಯನ್ನು ಟ್ವಿಟ್ಟರ್‌ನಲ್ಲಿ ಬಿಚ್ಚಿಟ್ಟಿದ್ದರು. ಅವರು ಟ್ವಿಟ್ಟರ್‌ನಲ್ಲಿ ನೀಡಿದ ಮಾಹಿತಿಯಂತೆ ಆಸ್ಪತ್ರೆಯಲ್ಲಿ ಅವರು ಬಾಲಕಿಯನ್ನು ಭೇಟಿ ಮಾಡಿದ್ದು, ಆಕೆಗೆ ಈ ದಂಪತಿ ನೀಡಿದ ಹಿಂಸೆಯನ್ನು ಊಹೆ ಮಾಡಲು ಕೂಡ ಸಾಧ್ಯವಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಸರಿಯಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಬ್ಲೇಡ್, ದೊಣ್ಣೆ ಬಿಸಿ ಚಿಮ್ಟಿಯಿಂದ ದಂಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರಿಂದ ಆಕೆಯ ದೇಹದಲ್ಲೆಲ್ಲಾ ಗಾಯಗಳಿವೆ. ಹಲವು ತಿಂಗಳ ಕಾಲ ಕೆಲಸ ಮಾಡಿಸಿಕೊಂಡಿದ್ದರೂ ಈ ದಂಪತಿ ಬಾಲಕಿಗೆ ಒಂದು ರೂಪಾಯಿಯನ್ನು ಕೂಡ ನೀಡಿಲ್ಲ.
ಹೀಗೆ ಕಿರುಕುಳ ನೀಡಿದ ದಂಪತಿಯನ್ನು ಮನೀಶ್ ಹಾಗೂ ಕಮಲ್‌ಜೀತ್ ಎಂದು ಗುರುತಿಸಲಾಗಿದೆ. ಮನೀಶ್ ಮ್ಯಾಕ್ಸ್‌ಲೈಫ್ ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈತನ ಪತ್ನಿ ಕಮಲ್‌ಜೀತ್ ಮೀಡಿಯಾ ಮಂತ್ರದಲ್ಲಿ ಪಿಆರ್ ಆಗಿ ಕೆಲಸ ಮಾಡುತ್ತಿದ್ದಳು. ಇವರಿಗೆ ಪುಟ್ಟ ಮಗುವಿದ್ದು ಆ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಈ 17 ವರ್ಷದ ಬಾಲಕಿಯನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು. ಆದರೆ ಆಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಈ ದಂಪತಿ ಆಕೆಗೆ ಕರುಣೆ ಇಲ್ಲದವರಂತೆ ದಿನವೂ ಕ್ರೂರವಾಗಿ ಥಳಿಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಸಖಿ ಕೇಂದ್ರದ ಮುಖ್ಯಸ್ಥೆ ಪಿಂಕಿ ಮಲಿಕ್ ಎಂಬುವವರು ಈಗ ಪೊಲೀಸರಿಗೆ ದೂರು ನೀಡಿದ್ದು, ದಂಪತಿಯ ಬಂಧನವಾಗಿದೆ. ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಟ್ಟುಹಬ್ಬ ಆಚರಿಸಿದ ಮನೆ ಮಂದಿ: ಭಾವುಕಳಾದ ಮನೆ ಕೆಲಸದಾಕೆ... ವಿಡಿಯೋ ವೈರಲ್
ಆಕೆಯ ಕೈಗಳು ತೋಳು, ಪಾದ, ಬಾಯಿ, ಮುಖ ಎಲ್ಲೆಡೆ ಗಾಯಗಳಿವೆ. ಮೊದಲಿಗೆ ಈಕೆಗೆ 14 ವರ್ಷ ಎಂದು ಹೇಳಲಾಗಿತ್ತು. ಆದರೆ ಬಾಲಕಿಗೆ 17 ವರ್ಷ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ಕ್ರೂರಿ ದಂಪತಿಗಳು ಆಕೆಗೆ ಸರಿಯಾಗಿ ತಿನ್ನಲು ಆಹಾರ ನೀಡುತ್ತಿರಲಿಲ್ಲ, ರಾತ್ರಿ ಮಲಗುವುದಕ್ಕೂ ಬಿಡುತ್ತಿರಲಿಲ್ಲ. ಆಕೆಯ ತುಟಿಗಳು ಗಾಯದಿಂದ ಊದಿಕೊಂಡಿವೆ. ದೇಹದ ಎಲ್ಲೆಡೆ ಗಾಯಗಳಿವೆ ಎಂದು ಸಖಿ ಸಂಸ್ಥೆಯ (Sakhi centre) ಪಿಂಕಿ ಮಲಿಕ್ (Pinky Malik) ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಬಾಲಕಿ ಹೇಳುವಂತೆ ಐದು ತಿಂಗಳ ಹಿಂದೆ ಬಾಲಕಿಯ ಚಿಕ್ಕಪ್ಪ ಆಕೆಯನ್ನು ಕರೆತಂದು ಈ ದಂಪತಿ ವಾಸ ಮಾಡುತ್ತಿದ್ದ ಮನೆಯಲ್ಲಿ ಬಿಟ್ಟಿದ್ದ. ಆಕೆಗೆ ಈ ದಂಪತಿ ದಿನವೂ ಚಿತ್ರಹಿಂಸೆ ನೀಡುತ್ತಿದ್ದರು. ಬಿಸಿ ಇಕ್ಕಳದಿಂದ ಸುಡುತ್ತಿದ್ದರು.
ಇಷ್ಟೇ ಅಲ್ಲದೇ ಆರೋಪಿ ಆಕೆಯನ್ನು ಬೆತ್ತೆಲೆಗೊಳಿಸಿ ಆಕೆಗೆ ಖಾಸಗಿ ಅಂಗಾಂಗಗಳ (private parts) ಮೇಲೂ ಹಲ್ಲೆ ಮಾಡಿದ್ದ. ಮನೆಯಿಂದ ಈಕೆಯನ್ನು ಎಲ್ಲೂ ಹೊರ ಹೋಗಲು ಬಿಡದ ದಂಪತಿ ಆಕೆಗೆ ಆಕೆಯ ಕುಟುಂಬದವರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಎಫ್‌ಐಆರ್ ( FIR) ಬಳಿಕ ದಂಪತಿಯನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ ಪೋಕ್ಸೋ (POCSO Act)ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಅದರ ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, ಸೆಕ್ಷನ್ 342, ಸೆಕ್ಷನ್ 34ರ ಅಡಿ ಯೂ ಪ್ರಕರಣ ದಾಖಲಾಗಿದೆ.