ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಪ್ರಚಾರದಲ್ಲಿ Google ಮತ್ತು ಮೆಟಾ ಪಾತ್ರವನ್ನು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದೆ. ಜುಲೈ 21 ರಂದು ಎರಡೂ ಕಂಪನಿಗಳ ಪ್ರತಿನಿಧಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.  

ಅಕ್ರಮ ಆನ್ ಲೈನ್ ಬೆಟ್ಟಿಂಗ್ ಆಪ್ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ED) ಟೆಕ್ ದೈತ್ಯ ಕಂಪನಿಗಳಾದ Google ಮತ್ತು ಮೆಟಾಗೆ ಸಮನ್ಸ್ ಜಾರಿ ಮಾಡಿದೆ. ಈ ಎರಡು ಕಂಪನಿಗಳ ಪ್ರತಿನಿಧಿಗಳನ್ನು ಜುಲೈ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ED ತನಿಖಾಧಿಕಾರಿಗಳ ಪ್ರಕಾರ, ಗೂಗಲ್ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳು ತಮ್ಮ ಜಾಹೀರಾತು ಸೇವೆಗಳ ಮೂಲಕ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ ಪ್ರಚಾರ ನೀಡಿವೆ. ಇದರ ಪರಿಣಾಮವಾಗಿ ಈ ಅಪ್ಲಿಕೇಶನ್‌ಗಳು ಸಾಮಾನ್ಯ ಜನರಿಗೆ ತಲುಪಿದ್ದು, ಹವಾಲಾ ವಹಿವಾಟು ಮತ್ತು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಗೂಗಲ್ ಮತ್ತು ಮೆಟಾ ತಮ್ಮ ಅಲ್ಗಾರಿದಮ್ ಹಾಗೂ ಜಾಹೀರಾತುಗಳ ಮೂಲಕ ಅಪ್ಲಿಕೇಶನ್‌ಗಳಿಗೆ ಹೆಚ್ಚು ಗೋಚರತೆಯನ್ನು ಒದಗಿಸುತ್ತಿವೆ. ಇದು ಸಾರ್ವಜನಿಕರ ಮಧ್ಯೆ ಈ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಿದೆ. ಇಡೀ ಪ್ರಕರಣದ ಹಿನ್ನೆಲೆಯಲ್ಲಿ ಈ ತಾಂತ್ರಿಕ ವೇದಿಕೆಗಳ ಪಾತ್ರವನ್ನು ಇಡಿ ಗಂಭೀರವಾಗಿ ಪರಿಶೀಲಿಸುತ್ತಿದೆ. ಇದಕ್ಕೂ ಮುನ್ನ ಮುಂಬೈನ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಸಿದ ದಾಳಿ ವೇಳೆ ಇಡಿ ₹3.3 ಕೋಟಿ ನಗದು, ಐಷಾರಾಮಿ ಕೈಗಡಿಯಾರಗಳು, ಆಭರಣಗಳು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿತ್ತು.

ಅಪ್ಲಿಕೇಶನ್‌ಗಳ ಪಟ್ಟಿ ಹಾಗೂ ಸೆಲೆಬ್ರಿಟಿಗಳ ತನಿಖೆ

Junglee Rummy, A23, JeetWin, Parimatch ಹಾಗೂ Lotus365 ಮೊದಲಾದ ಅಪ್ಲಿಕೇಶನ್‌ಗಳು ಕಾನೂನು ಬಾಹಿರವಾಗಿ ಹಣ ವರ್ಗಾಯಿಸಿರುವ ಆರೋಪದ ಮೇಲೆ ತನಿಖೆಯಲ್ಲಿವೆ. ಈ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿರುವುದಕ್ಕಾಗಿ ಸೆಲೆಬ್ರಿಟಿಗಳಿಗೂ ಕಾನೂನು ಕಂಟಕ ಇದೆ. ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಸೇರಿದಂತೆ 29ಕ್ಕೂ ಹೆಚ್ಚು ಸೆಲೆಬ್ರಿಟಿಗಳ ವಿರುದ್ಧ ಇಡಿಯಿಂದ ಈಗಾಗಲೇ ಪ್ರಕರಣ ದಾಖಲಾಗಿದೆ. ಇವುಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಕೌಶಲ್ಯ ಆಧಾರಿತ ಆಟಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ನಿಜವಾಗಿ ಅಕ್ರಮ ಜೂಜಾಟದಲ್ಲಿ ತೊಡಗಿವೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಡಿಜಿಟಲ್ ಜಾಹೀರಾತಿನ ಮೇಲೆ ED ನಿಗಾ

ಈ ಬೆಳವಣಿಗೆಯು ಡಿಜಿಟಲ್ ಜಾಹೀರಾತು ಕ್ಷೇತ್ರದ ಮೇಲೂ ಪ್ರಭಾವ ಬೀರುತ್ತಿದ್ದು, ಇಡೀ ಪರಿಕಲ್ಪನೆಗೆ ಹೊಸ ತಿರುವು ನೀಡಿದೆ. ಇಡೀ ತಂತ್ರಜ್ಞಾನ ವೇದಿಕೆಗಳು ಅಕ್ರಮ ಚಟುವಟಿಕೆಗಳಿಗೆ ವೇದಿಕೆಯಾಗುತ್ತಿದ್ದವೆಯೇ ಎಂಬುದು ಇದೀಗ ಪರಿಶೀಲನೆಯ ಹಂತದಲ್ಲಿದೆ.