ಸೆಪ್ಟೆಂಬರ್ 17ರಿಂದ PM Modiಗೆ ಬಂದ 1200 ಉಡುಗೊರೆಗಳ ಹರಾಜು
ಪ್ರಧಾನಿ ಮೋದಿಗೆ ಬಂದ 1200 ಉಡುಗೊರೆಗಳನ್ನು ಸೆಪ್ಟೆಂಬರ್ 17ರಿಂದ ಹರಾಜಿಗೆ ಹಾಕಲಾಗಿದೆ. 100 ರೂ. ನಿಂದ 10 ಲಕ್ಷ ರೂ. ವರೆಗೆ ಮೂಲಬೆಲೆ ನಿಗದಿ ಮಾಡಲಾಗಿದೆ. ಇನ್ನು, ಇದರಿಂದ ಸಂಗ್ರಹಿಸಿದ ಹಣ ನಮಾಮಿ ಗಂಗಾ ಯೋಜನೆಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ದೇಶ-ವಿದೇಶಗಳ ಗಣ್ಯರು ನೀಡಿದ ಸುಮಾರು 1200 ಉಡುಗೊರೆಗಳನ್ನು, ಮೋದಿ ಅವರ ಜನ್ಮದಿನವಾದ (Birthday) ಸೆಪ್ಟೆಂಬರ್ 17ರಿಂದ ಹರಾಜು (Auction) ಹಾಕಲಾಗುವುದು. ಅಕ್ಟೋಬರ್ 2ರವರೆಗೂ ಸಾರ್ವಜನರಿಗೆ ಬಿಡ್ ಮಾಡುವ ಮೂಲಕ ತಾವು ಬಯಸಿದ ವಸ್ತುಗಳನ್ನು ಖರೀದಿಸಲು ಅವಕಾಶ ಇದೆ. pmmementos. gov.in ವೆಬ್‌ಸೈಟ್ ಮೂಲಕ ಈ ವಸ್ತುಗಳನ್ನು ಹರಾಜು ಹಾಕಲಾಗುವುದು. ಈ ವಸ್ತುಗಳಲ್ಲಿ ಕೆಲವಕ್ಕೆ ಕನಿಷ್ಠ 100 ರೂ. ಮೂಲ ದರ ನಿಗದಿ ಮಾಡಿದ್ದರೆ, ಇನ್ನು ಕೆಲವಕ್ಕೆ 10 ಲಕ್ಷ ರೂ. ಮೂಲ ಬೆಲೆ ನಿಗದಿ ಮಾಡಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ನೀಡಿರುವ ರಾಣಿ ಕಮಲಾಪತಿ (Rani Kamalapati), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ನೀಡಿರುವ ಹನುಮಾನ್ (Hanuman), ಹಿಮಾಚಲ ಸಿಎಂ ನೀಡಿರುವ ತ್ರಿಶೂಲ, ಅಜಿತ್ ಪವಾರ್ ನೀಡಿರುವ ಕೊಲ್ಹಾಪುರದ ಮಹಾಲಕ್ಷ್ಮೀ ವಿಗ್ರಹ, ಆಂಧ್ರ ಸಿಎಂ ನೀಡಿರುವ ವೆಂಕಟೇಶ, ಕಾಶಿ ವಿಶ್ವನಾಥ, ಅಯೋಧ್ಯೆಯ ರಾಮಮಂದಿರದ ಮಾದರಿ, ವಿವಿಧ ಕ್ರೀಡಾಪಟುಗಳ ನೀಡಿರುವ ಟೀ ಶರ್ಚ್, ಬಾಕ್ಸಿಂಗ್ ಗ್ಲೌಸ್, ಜಾವೆಲಿನ್, ಬ್ಯಾಟ್ ಮೊದಲಾದವುಗಳು ಈ ಬಾರಿ ಹರಾಜಿಗಿಡಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆಯ ಪವಿತ್ರ ಮಣ್ಣನ್ನು ಹೊಂದಿರುವ ಅಮೃತ ಕಲಶ ಸಹ ಮತ್ತೊಂದು ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.
ಇದನ್ನು ಓದಿ: ಮೋದಿಯ 1800 ಉಡುಗೊರೆಗಳು ಹರಾಜು: ಬಂದ ಹಣ ಏನು ಮಾಡ್ತಾರೆ ಗೊತ್ತಾ?
ಮೋದಿ ಅವರಿಗೆ ನೀಡಲಾದ ವಸ್ತುಗಳ ಹರಾಜು ನಡೆಸುತ್ತಿರುವುದು ಇದು 4ನೇ ಬಾರಿಯಾಗಿದೆ. ಇದು ನಾಗರಿಕರನ್ನು ಈ ಘಟನೆಗಳಿಗೆ ಭಾವನಾತ್ಮಕವಾಗಿ ಜೋಡಿಸುತ್ತದೆ ಮತ್ತು ಹೊಸ ಪೀಳಿಗೆಗೆ ಪರಂಪರೆಯಾಗಿ ಕಾರ್ಯನಿರ್ವಹಿಸುತ್ತದೆ. ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳನ್ನು ಪ್ರತಿನಿಧಿಸುವ ಕೆಲವು ಸಂಸದರು ಮತ್ತು ಶಾಸಕರು ಮತ್ತು ಈ ವಿಭಾಗಗಳಿಗೆ ಕೆಲಸ ಮಾಡುವ ಸಂಸ್ಥೆಗಳು ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಯೋಚಿಸುತ್ತಿದ್ದಾರೆ. ಏಕೆಂದರೆ ರಾಣಿ ಕಮಲಾಪತಿ ಅವರ ಸ್ಫೂರ್ತಿಯಾಗಿರುವ ಈ ಹಿನ್ನೆಲೆ ಅವರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಉಡುಗೊರೆಗಳು ಮತ್ತು ಸ್ಮರಣಿಕೆಗಳ ಮಾರಾಟದಿಂದ ಬಂದ ಹಣವನ್ನು ಪ್ರಧಾನಿ ಸಾರ್ವಜನಿಕ ಉದ್ದೇಶಕ್ಕೆ ಅರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ಈ ಹಿಂದೆ 1800 ಉಡುಗೊರೆಗಳನ್ನು ಹರಾಜು ಹಾಕಿದ್ದರು ಮತ್ತು ಅದರಿಂದ ಬಂದ ಆದಾಯವನ್ನು ನಮಾಮಿ ಗಂಗೆ ಯೋಜನೆಗೆ ಖರ್ಚು ಮಾಡಲಾಗಿತ್ತು. ಅದರಂತೆ ಈ ಬಾರಿಯೂ, ಹರಾಜಿನಿಂದ ಸಂಗ್ರಹವಾದ ಹಣವನ್ನು ನಮಾಮಿ ಗಂಗಾ ಯೋಜನೆಗೆ (Namami Gange Project) ಬಳಸಲಾಗುವುದು.
ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ಫೂರ್ತಿ ಪಡೆದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇದೇ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ಈ ಹಿಂದೆ ಉಡುಗೊರೆಗಳು ಮತ್ತು ಸ್ಮಾರಕಗಳನ್ನು ಮಾರಾಟ ಮಾಡಿದ್ದರು. ಹೀಗೆ ಸಂಗ್ರಹಿಸಿದ ಹಣವನ್ನು ಬಡವರ ಕಲ್ಯಾಣ ಹಾಗೂ ಮಕ್ಕಳ ಚಿಕಿತ್ಸೆಗೆ ಖರ್ಚು ಮಾಡಿದ್ದರು.