ತಮಿಳುನಾಡಿನ ಥೇನಿ ಜಿಲ್ಲೆಯ ಜೈಲಿನಲ್ಲಿ ಸಹ ಕೈದಿಗೆ ಫಿಟ್ಸ್ ಬಂದಿದೆ ಎಂದು ನಾಟಕವಾಡಿ 17 ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಡ್ರೋನ್ ಬಳಸಿ 13 ಕೈದಿಗಳನ್ನು ಮರಳಿ ವಶಕ್ಕೆ ಪಡೆದಿದ್ದಾರೆ. ಈ ಬೃಹತ್ ಜೈಲ್ ಬ್ರೇಕ್ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜೈಲು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಥೇನಿ: ಸಹ ಕೈದಿಗೆ ಫಿಟ್ಸ್‌ ಬಂದಿದೆ ಎಂದು ನಾಟಕವಾಡಿ, ಸೆಲ್‌ ಬಾಗಿಲು ತೆರೆದ ಜೈಲಿನ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ಮಾಡಿ ಒಂದೇ ಸೆಲ್‌ನ 17 ಕೈದಿಗಳು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ಥೇನಿ ಜಿಲ್ಲೆಯಲ್ಲಿ ನಡೆದಿದೆ. ಆದರೆ ಘಟನೆ ನಡೆದ 24 ಗಂಟೆಯೊಳಗೆ ಭಾರೀ ಪ್ರಮಾಣದ ತಪಾಸಣೆ ಕೈಗೊಂಡ ಪೊಲೀಸರು ಅಂತಿಮವಾಗಿ ಡ್ರೋನ್‌ಗಳನ್ನು ಬಳಸಿಕೊಂಡು 13 ಜನರನ್ನು ಮರಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಡುವೆ ಕಳೆದ 3 ದಶಕಗಳಲ್ಲೇ ರಾಜ್ಯ ಕಂಡ ಅತ್ಯಂತ ದೊಡ್ಡ ಜೈಲ್‌ ಬ್ರೇಕ್‌ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ವಿಜಯ್‌ ನೇತೃತ್ವದ ಸರ್ಕಾರ, ಕರ್ತವ್ಯ ಲೋಪದ ಮೇಲೆ 9 ಜೈಲು ಸಿಬ್ಬಂದಿಗಳನ್ನು ಅಮಾನತು ಮಾಡಿದೆ. ಅಲ್ಲದೆ ಈ ಕುರಿತು ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಮತ್ತೊಂದೆಡೆ ಘಟನೆಗೆ ಸರ್ಕಾರವನ್ನು ಹೊಣೆ ಮಾಡಿರುವ ವಿಪಕ್ಷ ಡಿಎಂಕೆ, ‘ ಹೊರಗಿರುವ ಅಪರಾಧಿಗಳು ಮುಕ್ತವಾಗಿ ಅಪರಾಧ ಎಸಗುತ್ತಿದ್ದಾರೆ. ಒಳಗಿರುವ ಕೈದಿಗಳು ಕೂಡ ಧೈರ್ಯವಾಗಿ ಪರಾರಿಯಾಗುತ್ತಿದ್ದಾರೆ. ಒಟ್ಟಿನಲ್ಲಿ ಈ ಸರ್ಕಾರ ಯಾರಿಗೂ ಪ್ರಯೋಜನವಾಗದ, ಸಂಪೂರ್ಣ ನಿಷ್ಪ್ರಯೋಜಕ ಸರ್ಕಾರವಾಗಿದೆ’ ಎಂದು ಎಕ್ಸ್‌ನಲ್ಲಿ ಕಿಡಿಕಾರಿದೆ.

ಪಿಟ್ಸ್‌ ನಾಟಕ:

ಥೇನಿ ಜಿಲ್ಲೆಯ ತೆಕ್ಕಂಪಟ್ಟಿಯಲ್ಲಿರುವ ಉಪ ಕಾರಾಗೃಹದಲ್ಲಿ 17 ವಿಚಾರಣಾಧೀನ ಕೈದಿಗಳು ತಪ್ಪಿಸಿಕೊಳ್ಳುವ ಯೋಜನೆ ರೂಪಿಸಿದ್ದರು. ಅದರಂತೆ ಸೋಮವಾರ ರಾತ್ರಿ ಕೈದಿಯೊಬ್ಬ ಮೂರ್ಛೆ ರೋಗ ಬಂದಂತೆ ನಟಿಸಿದ್ದಾನೆ. ಆಗ ಇತರರು ಕೂಗಿಕೊಂಡಿದ್ದಾರೆ. ಈ ವೇಳೆ ಜೈಲಿನ ಸಿಬ್ಬಂದಿಗಳು ಅಲ್ಲಿಗೆ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ಜೈಲು ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ 17 ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಹೈ ಅಲರ್ಟ್‌:

ಕೂಡಲೇ ಥೇನಿ, ದಿಂಡಿಗುಲ್‌ ಮತ್ತು ಮದುರೈ ಜಿಲ್ಲೆ ಮತ್ತು ನೆರೆಯ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ 16 ಕಡೆ ಚೆಕ್‌ಪಾಯಿಂಟ್‌ ಸ್ಥಾಪಿಸಿ ಆರಂಭಿಸಿದ ಪೊಲೀಸರು ಕೈದಿಗಳು ತಪ್ಪಿಸಿಕೊಳ್ಳದಂತೆ ನಿಗಾ ಇರಿಸಿದ್ದಾರೆ. ಜೊತೆಗೆ ಡ್ರೋನ್‌ಗಳನ್ನು ಬಳಸಿ ಕೈದಿಗಳು ಪರಾರಿ ಆಗಿರಬಹುದಾದ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಥೇನಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ಅವಿತುಕೊಂಡಿದ್ದ ಕೈದಿಗಳು ಡ್ರೋನ್‌ನಲ್ಲಿದ್ದ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಪೊಲೀಸರ ತಂಡವೊಂದು ಆ ಪ್ರದೇಶದ ಮೇಲೆ ದಾಳಿ ನಡೆಸಿ 13 ಕೈದಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರಿವರು?:

ಪರಾರಿಯಾಗಿದ್ದ ಕೈದಿಗಳು 19 - 26 ವರ್ಷದ ಯುವಕರಾಗಿದ್ದು ಮದುರೈ ಸೇರಿದಂತೆ ಬೇರೆ ಬೇರೆ ಜಿಲ್ಲೆಯವರಾಗಿದ್ದು, ಇವರ ಮೇಲೆ ಕೊಲೆ ಯತ್ನ ಮತ್ತು ಮಾದಕ ದ್ರವ್ಯ ಮಾರಾಟದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ.

3 ದಶಕದ ದೊಡ್ಡ ಕೇಸ್‌:

17 ಜನ ಜೈಲಿನಿಂದ ಪರಾರಿಯಾಗಿರುವುದು ತಮಿಳುನಾಡಿನಲ್ಲಿ ಕಳೆದ 30 ವರ್ಷಗಳಲ್ಲೇ ನಡೆದ ಅತ್ಯಂತ ದೊಡ್ಡ ಪ್ರಕರಣ ಎಂದೆನಿಸಿಕೊಂಡಿದೆ. 1995ರ ಆ.15ರಂದು ನಿಷೇಧಿತ ಎಲ್‌ಟಿಟಿಇ ಸಂಘಟನೆ 43 ಶಂಕಿತ ಉಗ್ರರು ವೆಲ್ಲೂರು ಕೋಟೆಯೊಳಗಿನ ವಿಶೇಷ ಶಿಬಿರದಿಂದ 153 ಅಡಿ ಸುರಂಗ ಕೊರೆದು ಪರಾರಿಯಾಗಿದ್ದರು. ವಾರದ ಬಳಿಕ ಪೊಲೀಸರು ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವಾರ ಚೆನ್ನೈನ ಪುಳಲ್ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದರು.