ಜಡ್ಜ್‌ಗಳೇನೂ ಚುನಾವಣೆಗೆ ನಿಲ್ಲಲ್ಲ, ಆದರೂ ಜನರು ಜಡ್ಜ್‌ಗಳ ನಡೆ​ ಗಮ​ನಿ​ಸು​ತ್ತಾ​ರೆ. ಅವರ ತೀರ್ಪಿನ ಮೇಲೆ ಜನರ ಗಮನ ಇರುತ್ತದೆ ಎಂದು ಕಾನೂನು ಸಚಿವ ಕಿರಣ್‌ ರಿಜಿ​ಜು ಹೇಳಿದ್ದು, ಕೇಂದ್ರ-ನ್ಯಾಯಾಂಗ ಜಟಾ​ಪ​ಟಿ ಮುಂದು​ವ​ರೆದಿದೆ. 

ನವದೆಹಲಿ (ಜನವರಿ 24, 2023): ನ್ಯಾಯಾಂಗ ಹಾಗೂ ಸರ್ಕಾರದ ನಡುವೆ ನಡೆದಿರುವ ಸಂಘರ್ಷ ಕುರಿತ ತಮ್ಮ ಹೇಳಿಕೆಯನ್ನು ರಾಜಕಾರಣಿಗಳು ಬಳಸಿಕೊಳ್ಳುವುದಕ್ಕೆ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಆರ್‌.ಎಸ್‌. ಸೋಧಿ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕೊಲಿಜಿಯಂ ಬಗ್ಗೆ ನಾನು ಆಡಿದ ಮಾತನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜುಗೆ ಮನವಿ ಮಾಡಿದ್ದಾರೆ. ‘ಕೊಲಿಜಿಯಂ ವ್ಯವಸ್ಥೆ ಮೂಲಕ ಸಂವಿಧಾನವನ್ನೇ ಸುಪ್ರೀಂಕೋರ್ಟ್ ಹೈಜಾಕ್‌ ಮಾಡಿದೆ’ ಎಂದು ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಸೋಧಿ ಹೇಳಿದ್ದರು. ಈ ಹೇಳಿಕೆ ಸಮರ್ಥಿಸಿದ್ದ ಸಚಿವ ರಿಜಿಜು, ‘ಇದು ಜಡ್ಜ್‌ ಒಬ್ಬರ ನ್ಯಾಯಸಮ್ಮತ ದನಿ’ ಎಂದಿದ್ದರು.

ಸೋಮವಾರ ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ಸೋಧಿ (Sodhi), ‘ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಕಿರಣ್‌ ರಿಜಿಜು (Kiren Rijiju) ಅವರಿಗೆ ಧನ್ಯವಾದಗಳು. ಆದರೆ ನಾನು ರಾಜಕೀಯ ವ್ಯಕ್ತಿಯಲ್ಲ (Political Person). ಅದು ವೈಯಕ್ತಿಕ ಅಭಿಪ್ರಾಯ (Personal Opinion). ನನ್ನ ಹೆಗಲ ಮೇಲೆ ಗನ್‌ (Gun) ಇಟ್ಟು ಶೂಟ್‌ (Shoot) ಮಾಡಬೇಡಿ’ ಎಂದು ಕೋರಿದ್ದಾರೆ.

ಇದನ್ನು ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ

‘ಕೇವಲ ಕೆಲ ಜಡ್ಜ್‌ಗಳು ಮಾತ್ರ ಸೇರಿಕೊಂಡು ಜಡ್ಜ್‌ಗಳನ್ನು ನೇಮಿಸಲು ಹೇಗೆ ಸಾಧ್ಯ? ಕೊಲಿಜಿಯಂ ವ್ಯವಸ್ಥೆ ವಿಫಲವಾಗಿದೆ. ಆದರೆ ಸಾಂವಿಧಾನಿಕ ಸಂಸ್ಥೆಗಳು ಸಾರ್ವಜನಿಕವಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸೋಧಿ ಅಭಿಪ್ರಾಯಪಟ್ಟಿದ್ದಾರೆ.

ಜನರು ಜಡ್ಜ್‌ಗಳ ನಡೆ​ ಗಮ​ನಿ​ಸು​ತ್ತಾ​ರೆ: ಸಚಿವ ಕಿರಣ್‌ ರಿಜಿ​ಜು
ಸುಪ್ರೀಂಕೋರ್ಟ್‌ ಮತ್ತು ಹೈಕೋ​ರ್ಟ್‌​ಗ​ಳಿಗೆ ನ್ಯಾಯ​ಮೂ​ರ್ತಿ​ಗ​ಳನ್ನು ನೇಮಕ ಮಾಡುವ ಕುರಿ​ತಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ ನಡು​ವಿನ ಜಟಾ​ಪಟಿ ಮುಂದು​ವ​ರೆ​ದಿದೆ. ‘ನ್ಯಾಯಮೂರ್ತಿಗಳು ಚುನಾ​ವ​ಣೆ​ಗ​ಳನ್ನು ಎದು​ರಿ​ಸು​ವು​ದಿ​ಲ್ಲ​ವಾ​ದರೂ ಅವರ ನಡೆ-ನುಡಿ, ತೀರ್ಪು​ಗ​ಳನ್ನು ಜನರು ಸದಾ ಗಮ​ನಿ​ಸು​ತ್ತಿ​ರು​ತ್ತಾರೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಸೋಮ​ವಾರ ಹೇಳಿ​ದ್ದಾರೆ.

ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ

ಸೋಮವಾರ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ನ್ಯಾಯಮೂರ್ತಿಗಳು ಚುನಾ​ವ​ಣೆ​ಗ​ಳಲ್ಲಿ ಭಾಗಿ​ಯಾ​ಗು​ವು​ದಿಲ್ಲ ಅಥ​ವಾ ನೇರ​ವಾಗಿ ಜನರ ವಿಮ​ರ್ಶೆಗೆ ಒಳ​ಗಾ​ಗು​ವು​ದಿಲ್ಲ. ಆದರೂ ಅವರು ತಮ್ಮ ಕೆಲ​ಸ​ಗಳು, ತೀರ್ಪು​ಗಳ ಮೂಲ​ಕ ಸಾರ್ವ​ಜ​ನಿಕ ನಿಗಾ​ದ​ಲ್ಲಿ​ರು​ತ್ತಾರೆ. ಜನರು ಸದಾ ನಿಮ್ಮನ್ನು (ನ್ಯಾಯಮೂರ್ತಿಗಳು​) ಗಮ​ನಿ​ಸು​ತ್ತಿ​ರು​ತ್ತಾರೆ ಮತ್ತು ವಿಮ​ರ್ಶಿ​ಸು​ತ್ತಾ​ರೆ. ಜನರು ಗಮ​ನಿ​ಸು​ತ್ತಿ​ರು​ತ್ತಾರೆ, ಪರಿ​ಶೀ​ಲಿ​ಸು​ತ್ತಾರೆ. ಅಭಿ​ಪ್ರಾ​ಯ​ಗ​ಳನ್ನು ರೂಪಿ​ಸಿ​ಕೊ​ಳ್ಳು​ತ್ತಾರೆ’ ಎಂದರು.

‘ಈಗ ಸಾಮಾ​ಜಿಕ ಜಾಲ​ತಾ​ಣ​ಗಳ ಬಲ​ದಿಂದ ಎಲ್ಲ​ರಿಗೂ ಮಾತ​ನಾ​ಡುವ ಧೈರ್ಯ ಬಂದಿದೆ. ಇವು​ಗಳು ಇಲ್ಲದ ಕಾಲ​ದಲ್ಲಿ ಕೇವಲ ರಾಜ​ಕಾ​ರ​ಣಿ​ಗಳು ಮಾತ್ರ ಮಾತ​ನಾ​ಡು​ತ್ತಿ​ದ್ದರು. ಜಾಲ​ತಾ​ಣ​ದಲ್ಲಿ ಮುಖ್ಯ ನ್ಯಾಯ​ಮೂರ್ತಿ ಅವರ ವಿರುದ್ಧ ಆಗಿ​ರುವ ನಿಂದ​ನೆಗೆ ಅವರು ಜಾಲ​ತಾ​ಣ​ದಲ್ಲೇ ಉತ್ತ​ರಿ​ಸಲು ಸಾಧ್ಯ​ವಿಲ್ಲ. ಹಾಗಾಗಿ ನಮ್ಮ ಸಹಾಯ ಕೋರಿ​ದ್ದಾರೆ. ದೃಢ​ವಾದ ನಿರ್ಧಾರ ಕೈಗೊ​ಳ್ಳು​ವಂತೆ ನಮಗೆ ಮನವಿ ಮಾಡಿ​ದ್ದಾರೆ’ ಎಂದೂ ಹೇಳಿ​ದರು. 1947 ರಿಂದ ಸಾಕಷ್ಟು ಬದಲಾವಣೆ ಆಗಿವೆ. ಹೀಗಾಗಿ ಹಾಲಿ ವ್ಯವಸ್ಥೆ ಬದಲಾಗಲೇಬಾರದು ಎಂದು ಭಾವಿಸುವುದು ತಪ್ಪು ಎಂದು ಕೊಲಿಜಿಯಂ ವ್ಯವಸ್ಥೆ ಬದಲಾವಣೆಗೆ ವಿರೋಧಿಸುವವರಿಗೆ ಟಾಂಗ್‌ ನೀಡಿದರು.

ಇದನ್ನೂ ಓದಿ: ಜಡ್ಜ್‌ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!