ಜಡ್ಜ್‌ ನೇಮಕ ಪ್ರಕ್ರಿಯೆ ಹಾಗೂ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಮತ್ತೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜಡ್ಜ್‌ ಹುದ್ದೆ ಖಾಲಿ ಇದ್ದರೂ ನಾವು ಭರ್ತಿ ಮಾಡಲಾಗದು ಎಂದು ಅವರು ಹೇಳಿದ್ದಾರೆ.  ಈ ವಿಚಾರದಲ್ಲಿ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ ಎಂದು ರಾಜ್ಯಸಭೆಯಲ್ಲಿ ಸಚಿವರು ಹೇಳಿದ್ದಾರೆ. 

ನವದೆಹಲಿ (ಡಿ. 16): ಉನ್ನತ ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆ ಹಾಗೂ ಅವುಗಳ ನೇಮಕಾತಿಗೆ ಸಂಬಂಧಿಸಿದ ವಿಚಾರ ಹೊಸ ವ್ಯವಸ್ಥೆಯನ್ನು ಸೃಷ್ಟಿಸುವವರೆಗೂ ಇರಲಿದೆ. ಏಕೆಂದರೆ, ಖಾಲಿ ಹುದ್ದೆ ಭರ್ತಿ ವಿಚಾರದಲ್ಲಿ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ. ಕೊಲಿಜಿಯಂ ಶಿಫಾರಸು ಮಾಡಿದ ಹೆಸರು ಹೊರತುಪಡಿಸಿ ಬೇರೆ ಹೆಸರನ್ನು ನಾವು ನೋಡುವಂತಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ. ತನ್ಮೂಲಕ ಕೊಲಿಜಿಯಂ ವ್ಯವಸ್ಥೆ ಬಗೆಗಿನ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಹೊಸ ವ್ಯವಸ್ಥೆ ಬರುವವರೆಗೂ ಈಗಿರುವ ವ್ಯವಸ್ಥೆ ಬಗ್ಗೆ ಯಾರೂ ಮಾತಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ ಸಚಿವರು ಈ ರೀತಿಯ ಮಾತು ಹೇಳಿರುವುದು ಗಮನಪಡೆದಿದೆ.

ರಾಜ್ಯಸಭೆಯಲ್ಲಿ ಗುರುವಾರ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು, ದೇಶದ ಹೈಕೋರ್ಚ್‌ಗಳಲ್ಲಿ 1108 ಮಂಜೂರಾದ ಜಡ್ಜ್‌ ಹುದ್ದೆಗಳಿವೆ. ಡಿ.9ಕ್ಕೆ 777 ಜಡ್ಜ್‌ಗಳು ಕಾರ್ಯನಿರ್ವಹಿಸುತ್ತಿದ್ದು, 331 ಹುದ್ದೆಗಳು (ಶೇ.30) ಖಾಲಿ ಇವೆ. ಸುಪ್ರೀಂ ಕೋರ್ಟ್‌ನ ಮಂಜೂರಾದ ಜಡ್ಜ್‌ ಹುದ್ದೆ 34. ಇದರಲ್ಲಿ 27 ಭರ್ತಿಯಾಗಿದ್ದು, 7 ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಅರ್ಹರ ಹೆಸರು ಶಿಫಾರಸಿಗೆ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಲಾಗಿದೆ. ನಾವು ಸದನದ ಆಶಯ ಹಾಗೂ ದೇಶದ ಜನತೆಯ ಭಾವನೆಗೆ ತಕ್ಕುದಾಗಿ ನಾವು ನಡೆದುಕೊಳ್ಳುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ ಎಂದು ಹೇಳಿದರು. ಹೊಸ ವ್ಯವಸ್ಥೆವರೆಗೂ ಇಂತಹ ವಿಷಯ ಚರ್ಚೆಯಲ್ಲಿ ಇದ್ದೇ ಇರುತ್ತದೆ. ಹೆಸರು ಶಿಫಾರಸಿಗೆ ಸಿಜೆಗಳನ್ನು ಈಗಾಗಲೇ ಕೋರಿದ್ದೇವೆ ಎಂದು ತಿಳಿಸಿದ್ದಾರೆ.

ಕೇಸ್‌ ಜಾಸ್ತಿ ಇವೆ, ಜಾಮೀನು ಅರ್ಜಿ ವಿಚಾರಣೆ ನಿಲ್ಲಿಸಿ: ರಿಜಿಜು
ನವದೆಹಲಿ (ಡಿ. 16): ದೇಶದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಅಗಾಧವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಜಾಮೀನು ಅರ್ಜಿ ಹಾಗೂ ನಿಷ್ಪ್ರಯೋಜಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ಮಾಡಬಾರದು ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಇದು ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ವಾತಂತ್ರ್ಯ ಅರ್ಥ ಏನಾದರೂ ಸಚಿವರಿಗೆ ಗೊತ್ತಿದೆಯೇ ಎಂದು ನಾಯಕರು ಕಿಡಿಕಾರಿದ್ದಾರೆ.

ಜಡ್ಜ್‌​ ನೇಮಕ ವಿಳಂಬ: ಸುಪ್ರೀಂ ಗರಂ; ಕೇಂದ್ರದಿಂದ ಮತ್ತೆ 20 ನ್ಯಾಯಮೂರ್ತಿಗಳ ಹೆಸರು ವಾಪಸ್..!

ಮಸೂದೆಯೊಂದಕ್ಕೆ ಸಂಬಂಧಿಸಿದ ಚರ್ಚೆ ವೇಳೆ ಮಾತನಾಡಿದ ಸಚಿವರು, ಸುಪ್ರೀಂಕೋರ್ಟ್‌ ಜಾಮೀನು ಅರ್ಜಿ ಅಥವಾ ನಿಷ್ಪ್ರಯೋಜಕ ಪಿಐಎಲ್‌ಗಳನ್ನು ವಿಚಾರಣೆ ಮಾಡುವುದರಿಂದ ಹೆಚ್ಚು ಹೊರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತವಾಗಿರುವ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಿ ಎಂದು ಸೌಹಾರ್ದತೆಯಿಂದ ಹೇಳಿದ್ದೇನೆ. ವಿಚಾರಣಾ ನ್ಯಾಯಾಲಯಗಳಲ್ಲಿ 4 ಕೋಟಿ ಪ್ರಕರಣಗಳು ಬಾಕಿ ಇವೆ. ನಾವು ಹಣ ಕೊಡುತ್ತೇವೆ, ಉತ್ತಮ ಮೂಲಸೌಕರ್ಯಕ್ಕೆ ನೆರವು ನೀಡುತ್ತೇವೆ. ಹಾಗೆಯೇ ಅರ್ಹರ ವ್ಯಕ್ತಿಗಳಿಗೆ ನ್ಯಾಯ ನೀಡುವಂತೆ ನಾವು ಕೇಳಬೇಕಾಗಿದೆ ಎಂದಿದ್ದಾರೆ.

ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ

ಇದಕ್ಕೆ ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ತಿರುಗೇಟು ನೀಡಿದ್ದಾರೆ. ಬೇಲ್‌ ಎಂಬುದು ನಿಯಮವೇ ಹೊರತು ಜೈಲು ಅಲ್ಲ ಎಂದು ನ್ಯಾ ಕೃಷ್ಣ ಅಯ್ಯರ್‌ ಅವರು ತೀರ್ಪು ನೀಡಿದ್ದರು. ಅದು ಹೇಗೆ ಕಾನೂನು ಸಚಿವರು ಜಾಮೀನು ಅರ್ಜಿ ವಿಚಾರಣೆ ಮಾಡಬೇಡಿ ಎಂದು ಹೇಳುತ್ತಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಸಚಿವರಿಗೆ ಸ್ವಾತಂತ್ರ್ಯದ ಅರ್ಥ ಏನಾದರೂ ಗೊತ್ತಿದೆಯೇ ಎಂದು ಮಾಜಿ ಕಾನೂನು ಸಚಿವ ಹಾಗೂ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಚಾಟಿ ಬೀಸಿದ್ದಾರೆ. ಸರ್ಕಾರ ನ್ಯಾಯಾಂಗವನ್ನೂ ನಿರ್ವಹಿಸಲು ಮುಂದಾಗಿದೆ. ಮುಂದೇನೋ ಎಂದು ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಟೀಕಿಸಿದ್ದಾರೆ.