ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್; ನಿವೃತ್ತ ಜಡ್ಜ್ ಹೇಳಿಕೆಗೆ ಸಚಿವ ಬೆಂಬಲ
ಕೊಲಿಜಿಯಂಗೆ ಪರ್ಯಾಯ ವ್ಯವಸ್ಥೆ ರೂಪಿಸುವವರೆಗೂ ಈಗಿರುವ ವ್ಯವಸ್ಥೆಯನ್ನು ಒಪ್ಪಿಕೊಂಡು ಗೌರವಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿತ್ತು. ಇದರ ಹೊರತಾಗ್ಯೂ, ನಡೆಯುತ್ತಿರುವ ಬೆಳವಣಿಗೆಗಳು ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷದ ಸನ್ನಿವೇಶ ಸೃಷ್ಟಿಸಿವೆ.
ನವದೆಹಲಿ (ಜನವರಿ 23, 2023): ನ್ಯಾಯಾಧೀಶರ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆ ಕುರಿತಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ನಡುವಣ ಶೀತಲ ಸಮರ ಮತ್ತಷ್ಟುತೀವ್ರಗೊಂಡಿದೆ. ನ್ಯಾಯಾಧೀಶರ ನೇಮಕಕ್ಕೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವೇ ಸರಿ ಎಂಬರ್ಥದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಇತ್ತೀಚೆಗೆ ಸಂಸತ್ತಲ್ಲೇ ಪ್ರತಿಪಾದಿಸಿದ ಬಳಿಕ ತೀವ್ರಗೊಂಡ ವಿವಾದ ಈಗ ಮತ್ತಷ್ಟು ಉಲ್ಬಣಿಸಿದೆ. ಕೊಲಿಜಿಯಂನಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಾತಿನಿಧ್ಯ ದೊರಕಬೇಕು ಎಂದು ಸುಪ್ರೀಂಕೋರ್ಟಿಗೆ ಪತ್ರ ಬರೆದಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಸುಪ್ರೀಂಕೋರ್ಟನ್ನೇ ಟೀಕಿಸುವ ಅರ್ಥದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೊಬ್ಬರು ನೀಡಿದ ಸಂದರ್ಶನವನ್ನು ಇದೀಗ ಹಂಚಿಕೊಂಡು ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಕೊಲಿಜಿಯಂಗೆ ಪರ್ಯಾಯ ವ್ಯವಸ್ಥೆ ರೂಪಿಸುವವರೆಗೂ ಈಗಿರುವ ವ್ಯವಸ್ಥೆಯನ್ನು ಒಪ್ಪಿಕೊಂಡು ಗೌರವಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿತ್ತು. ಇದರ ಹೊರತಾಗ್ಯೂ, ನಡೆಯುತ್ತಿರುವ ಬೆಳವಣಿಗೆಗಳು ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷದ ಸನ್ನಿವೇಶ ಸೃಷ್ಟಿಸಿವೆ.
ನ್ಯಾಯಮೂರ್ತಿಗಳ ನೇಮಕಾತಿ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳುವ ಮೂಲಕ ಸಂವಿಧಾನವನ್ನೇ ಸುಪ್ರೀಂಕೋರ್ಟ್ ಹೈಜಾಕ್ ಮಾಡಿದೆ’ ಎಂಬ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಸಂದರ್ಶನವನ್ನು ಬಳಸಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಕೊಲಿಜಿಯಂ ವ್ಯವಸ್ಥೆಗೆ ಟಾಂಗ್ ನೀಡಿದ್ದಾರೆ. ಇದರಿಂದಾಗಿ ಕೊಲಿಜಿಯಂ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡುವಣ ಸಂಘರ್ಷ ಮುಂದುವರಿದಂತಾಗಿದೆ.
ಇದನ್ನು ಓದಿ: ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ
ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಾಗಿರುವ ಆರ್.ಎಸ್.ಸೋಧಿ ಅವರು ಸಂದರ್ಶನದಲ್ಲಿ ಸುಪ್ರೀಂಕೋರ್ಟ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸಮರ್ಥಿಸಿಕೊಂಡಿರುವ ರಿಜಿಜು, ‘ಇದು ನ್ಯಾಯಾಧೀಶರೊಬ್ಬರ ದನಿ. ಬಹುತೇಕ ಜನರು ಇದೇ ರೀತಿಯ ‘ನ್ಯಾಯ ಸಮ್ಮತ’ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಸಂವಿಧಾನದ ಅಂಶಗಳು ಹಾಗೂ ಜನಾದೇಶದ ಬಗ್ಗೆ ಅಗೌರವ ಹೊಂದಿದವರು ಸಂವಿಧಾನಕ್ಕಿಂತ ತಾವೇ ಮೇಲು ಎಂದು ಪರಿಭಾವಿಸುತ್ತಾರೆ’ ಎಂದು ಕಿಡಿಕಾರಿದ್ದಾರೆ.
ನ್ಯಾಯಮೂರ್ತಿ ಸೋಧಿ ಹೇಳಿದ್ದೇನು?:
‘ಸುಪ್ರೀಂಕೋರ್ಟ್‌ಗೆ ಕಾನೂನು ರಚನೆ ಅಧಿಕಾರ ಇಲ್ಲ. ಅದು ಸಂಸತ್ತಿಗೆ ಮಾತ್ರ ಇದೆ. ಆದರೆ, ಸುಪ್ರೀಂಕೋರ್ಟ್ ಸಂವಿಧಾನವನ್ನು ಹೈಜಾಕ್ ಮಾಡಿದೆ. ಬಳಿಕ ನ್ಯಾಯಾಧೀಶರನ್ನು ನಾವೇ ನೇಮಕ ಮಾಡಿಕೊಳ್ಳುತ್ತೇವೆ, ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ ಎಂದು ಹೇಳಿದೆ’ ಎಂದು ಹಿಂದಿ ಸಂದರ್ಶನದಲ್ಲಿ ನ್ಯಾಯಮೂರ್ತಿ ಸೋಧಿ ಹೇಳಿದ್ದರು.
ಇದನ್ನೂ ಓದಿ: ಜಡ್ಜ್ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!
ಇದೇ ಮೊದಲಲ್ಲ:
ರಿಜಿಜು ಅವರು ದೇಶದ ಉನ್ನತ ನ್ಯಾಯಾಲಯಗಳಿಗೆ ಜಡ್ಜ್‌ಗಳ ಹೆಸರು ಶಿಫಾರಸು ಮಾಡುವ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಮಾತನಾಡುತ್ತಿರುವುದು ಇದು ಮೊದಲೇನಲ್ಲ. ‘ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಿಸಬಾರದು. ಸರ್ಕಾರದ ಪಾತ್ರ ಇರಬೇಕು’ ಎಂಬುದು ಅವರ ಅಭಿಪ್ರಾಯ. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಹೇಳಿಕೆ ನೀಡಿದ್ದ ಅವರು, ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಪತ್ರವನ್ನೂ ಬರೆದಿದ್ದರು.
ಇದನ್ನೂ ಓದಿ: ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ