Doctor Muzamil Shakeel Jaish link: ಹರ್ಯಾಣದ ಆಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಮುಜಾಮಿಲ್ ಶಕೀಲ್‌ನನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಈತ ಕಾಲೇಜಿನ ಪ್ರಯೋಗಾಲಯವನ್ನೇ ಆರ್‌ಡಿಎಕ್ಸ್ ತಯಾರಿಸಲು ಬಳಸುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.

ಆಲ್ ಫಲಾಹ್‌ನ ಪ್ರಯೋಗಾಲಯದಲ್ಲಿ ನಡೆದಿತ್ತಾ ಆರ್‌ಡಿಕ್ಸ್ ತಯಾರಿ?

ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್‌ ಜೊತೆಗಿನ ಸಂಪರ್ಕದ ಕಾರಣಕ್ಕೆ ನಿನ್ನೆ ಹರ್ಯಾಣದಲ್ಲಿ ಬಂಧಿತನಾದ ವೈದ್ಯ ಮುಜಾಮಿಲ್ ಶಕೀಲ್ ತಾನು ಕೆಲಸ ಮಾಡುತ್ತಿದ್ದ ವೈದ್ಯಕೀಯ ಕಾಲೇಜು ಆಲ್ ಫಲಾಹ್ ವಿಶ್ವವಿದ್ಯಾಲಯ ಪ್ರಯೋಗಾಲಯವನ್ನೇ ಆರ್‌ಡಿಎಕ್ಸ್ ತಯಾರಿಸಲು ಬಳಸುತ್ತಿದ್ದಾನೆಯೇ ಎಂಬ ಪ್ರಶ್ನೆ ಮೂಡಿದೆ. ಕಾಶ್ಮೀರಿ ಮೂಲದ ಈ ವೈದ್ಯಕೀಯ ಪ್ರಾಧ್ಯಾಪಕನ ಬಂಧನವು ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದು ಎನಿಸಿದೆ. ಜೊತೆಗ ಭಯೋತ್ಪಾದಕ ಸಂಘಟನೆಗಳು ಚೆನ್ನಾಗಿ ಓದಿಕೊಂಡು ಉನನ್ತ ಹುದ್ದೆಯಲ್ಲಿರುವ ಉದ್ಯೋಗಸ್ಥರನ್ನು ಈ ಜಾಲಕ್ಕೆ ಸೆಳೆದುಕೊಂಡಿರುವುದು ಬಹಿರಂಗವಾಗಿದೆ.

ಸುಶಿಕ್ಷಿತರನ್ನೇ ಭಯೋತ್ಪಾದನ ಜಾಲಕ್ಕೆ ಸೆಳೆಯುತ್ತಿರುವ ಉಗ್ರ ಸಂಘಟನೆಗಳು

ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಭದ್ರತಾಪಡೆಗಳು ಸುಮಾರು 2,900 ಕೆಜಿ ಐಇಡಿ ತಯಾರಿಸುವ ವಸ್ತು, ಹಲವು ಆಕ್ರಮಣಕಾರಿ ರೈಫಲ್‌ಗಳು, ಪಿಸ್ತೂಲ್‌ಗಳು, ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್ ಮತ್ತು ಸುಡುವ ವಸ್ತುಗಳನ್ನು ಪತ್ತೆಹಚ್ಚಿದ್ದರು. ಇದರ ಜೊತೆಗೆ ಈ ಒಳ್ಳೆಯ ಉನ್ನತ ಶಿಕ್ಷಣ ಪಡೆದಿರುವ ವೈಟ್ ಕಾಲರ್‌ಗಳೆನಿಸಿದ ವೈದ್ಯರುಗಳೇ ಈ ಭಯೋತ್ಪಾದನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸಾರ್ ಘಜ್ವತುಲ್-ಹಿಂದ್‌ ಈ ಎರಡೂ ಭಯೋತ್ಪಾದಕ ಸಂಘಟನೆಗಳು ಉನ್ನತ ಶಿಕ್ಷಣ ಪಡೆದಿರುವ ಸುಶಿಕ್ಷಿತರನ್ನು ಕೂಡ ತಮ್ಮ ಜಾಲದೊಳಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವ ವಿದ್ಯಾಲಯದ ಜಾಲಗಳನ್ನು ಹಣ ಸಾಗಣೆಗೆ ಬಳಕೆ?

ಸುಶಿಕ್ಷಿತರಾಗಿರುವುದರಿಂದ ಇವರು ತಮ್ಮ ಶೈಕ್ಷಣಿಕ ಹಿನ್ನೆಲೆ ಬಳಸಿಕೊಂಡು ಅಂದರೆ ಎನ್‌ಕ್ರಿಪ್ಟ್ ಮಾಡಿದ ಚಾನೆಲ್‌ಗಳು, ಚಾರಿಟೇಬಲ್ ಟ್ರಸ್ಟ್‌ಗಳು ಮತ್ತು ವಿಶ್ವವಿದ್ಯಾಲಯ ಜಾಲಗಳನ್ನು ಬಳಸಿಕೊಂಡು ಹಣವನ್ನು ಸಾಗಿಸಲು, ಉಗ್ರ ಸಂಘಟನೆಗೆ ನೇಮಕಾತಿಗಳನ್ನು ತೀವ್ರಗಾಮಿಗೊಳಿಸಲು ಮತ್ತು ಸ್ಫೋಟಕಗಳನ್ನು ಜೋಡಿಸಲು ಬಳಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 19 ರಂದು ಶ್ರೀನಗರದ ಬನ್‌ಪೋರಾ ನೌಗಮ್ ಪ್ರದೇಶದ ಹಲವಾರು ಸ್ಥಳಗಳಲ್ಲಿ ಭಯೋತ್ಪಾದಕ ಸಂಘಟನೆ ಜೆಇಎಂನ ಪೋಸ್ಟರ್‌ಗಳು ಕಾಣಿಸಿಕೊಂಡ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನೌಗಮ್ ಪೊಲೀಸ್ ಠಾಣೆಯಲ್ಲಿ ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಈಗ ಬಂಧಿತರಾದ ಹೈಲಿ ಕ್ವಾಲಿಫೈಡ್ ಎಂದು ಕರೆಯಲ್ಪಡುವ ಬಂಧಿತ ವೈದ್ಯರು ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿನ ಭಯೋತ್ಪಾದಕ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿರುವ ವಿಚಾರ ತಿಳಿದಿದೆ.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ ಮುಜಾಮಿಲ್

ಇದಾದ ನಂತರವೇ ಕಾಶ್ಮೀರದಲ್ಲಿ ಅಳವಡಿಸಲಾದ ಜೆಇಎಂ ಪೋಸ್ಟ್ರ್‌ಗೆ ಸಂಬಂಧಿಸಿದಂತೆ ಫರಿದಾಬಾದ್‌ನ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಮುಜಾಮಿಲ್ ಶಕೀಲ್ (35) ನನ್ನು ಪೊಲೀಸರು ಬಂಧಿಸಿದ್ದರು. ಈತ ವಿಶ್ವವಿದ್ಯಾಲಯದ ಆಸ್ಪತ್ರೆಯ ತುರ್ತು ವಿಭಾಗವನ್ನು ನಿರ್ವಹಿಸುತ್ತಿದ್ದ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ.

ಸ್ಫೋಟಕ ಸಂಗ್ರಹಕ್ಕೆ ಮನೆ ಬಾಡಿಗೆ ಪಡೆದಿದ್ದ:

ಆತನ ವಿಚಾರಣೆಯ ನಂತರ ಆತ ನೀಡಿದ ಸುಳಿವಿನ ಮೇರೆಗೆ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್‌ನ ಧೌಜ್‌ನ ಎರಡು ಬಾಡಿಗೆ ಸ್ಥಳಗಳಿಗೆ ತೆರಳಿದಾಗ ಅಲ್ಲಿ, ಆತನ ಬಂಧನಕ್ಕೆ 15 ದಿನಗಳ ಮೊದಲು ಆತ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ 358 ಕೆಜಿ ಶಂಕಿತ ಅಮೋನಿಯಂ ನೈಟ್ರೇಟ್, ಕ್ರಿಂಕೋವ್ ಅಸಾಲ್ಟ್ ರೈಫಲ್ ಜೊತೆಗೆ ಮೂರು ಮ್ಯಾಗಜೀನ್‌ಗಳು, 83 ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಪಿಸ್ತೂಲ್ ಮತ್ತು ಬಾಂಬ್ ತಯಾರಿಸುವ ಸಾಮಗ್ರಿಗಳು ಪತ್ತೆಯಾಗಿದ್ದವು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಫರಿದಾಬಾದ್ ಪೊಲೀಸ್ ವಕ್ತಾರ ಯಶ್ಪಾಲ್ ಮಾತನಾಡಿ, ಇವರ ಸಹಚರರನ್ನು ಗುರುತಿಸಲು, ಇವರ ಖರೀದಿ ಸರಪಳಿಗಳನ್ನು ಪತ್ತೆಹಚ್ಚಲು ಮತ್ತು ಶಸ್ತ್ರಾಸ್ತ್ರಗಳ ಮೂಲವನ್ನು ನಿರ್ಧರಿಸಲು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆರೋಪಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ತಮ್ಮ ಕೃತ್ಯಕ್ಕೆ ಅಲ್ ಫಲಾಹ್ ಕಾಲೇಜಿನ ಪ್ರಯೋಗಾಲಯ ಬಳಸಿದ್ರಾ?

ವಿಶ್ವವಿದ್ಯಾನಿಲಯದ ಬಳಿಯ ಮಸೀದಿಯ ಧಾರ್ಮಿಕ ವಿದ್ವಾಂಸ ಸೇರಿದಂತೆ ಮುಜಾಮಿಲ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಹಲವಾರು ಜನರನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಹಾಗೆಯೇ ಅಲ್-ಫಲಾಹ್ ವಿಶ್ವವಿದ್ಯಾನಿಲಯದ ಪ್ರಯೋಗಾಲಯದ ಸೌಲಭ್ಯಗಳಲ್ಲಿ ಆರ್‌ಡಿಎಕ್ಸ್‌ನಂತಹ ಸುಧಾರಿತ ಸ್ಫೋಟಕಗಳನ್ನು ಸಂಶ್ಲೇಷಿಸಲು ಉದ್ದೇಶಿಸಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ವೈದ್ಯೆಯ ವಿಚಾರಣೆ

ಅದೇ ವಿಶ್ವವಿದ್ಯಾಲಯದ ಮಹಿಳಾ ವೈದ್ಯೆಯೊಬ್ಬರ ಸ್ವಿಫ್ಟ್ ಡಿಜೈರ್‌ನಲ್ಲಿ ಮುಜಾಮಿಲ್‌ಗೆ ಸಂಬಂಧಿಸಿದ ಎಕೆ-47 ಪತ್ತೆಯಾಗಿತ್ತು. ಆದರೆ ಆಕೆಯನ್ನು ಬಂಧಿಸಿಲ್ಲ ಮತ್ತು ಅದರ ಬಳಕೆಯನ್ನು ತಿಳಿಯದೆ ಆಕೆಯ ವಾಹನವನ್ನು ಸಾಲವಾಗಿ ನೀಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆಕೆಯ ಪಾತ್ರದ ಬಗ್ಗೆ ಇನ್ನೂ ಪರಿಶೀಲನೆಯಲ್ಲಿದೆ. ಪ್ರಸ್ತುತ ಆಕೆಯನ್ನು ಜಮ್ಮು ಕಾಶ್ಮೀರದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಮುಜಾಮಿಲ್ ಬಂಧನಕ್ಕೂ ಮುನ್ನ, ಉತ್ತರ ಪ್ರದೇಶದ ಸಹರಾನ್‌ಪುರ ಪೊಲೀಸರು ಮತ್ತೊಬ್ಬ ವೈದ್ಯ ಪುಲ್ವಾಮಾದ ಅದೀಲ್ ಮಜೀದ್ ರಾಥರ್ ಎಂಬಾತನನ್ನು ಬಂಧಿಸಿದ್ದರು. ಆತನ ನೀಡಿದ ಸುಳಿವಿನ ನಂತರವೇ ಮುಜಾಮಿಲ್‌ ಇಷ್ಟೊಂದು ಪ್ರಮಾಣದಲ್ಲಿ ಆರ್‌ಡಿಕ್ಸ್‌ ತಯಾರಿಗೆ ಬೇಕಾಗುವ ಕಚ್ಚಾವಸ್ತು ಹಾಗೂ ಇತರ ಆಕ್ರಮಣಕಾರಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿತ್ತು..

ಬಂಧಿತರೆಲ್ಲರೂ ಕಾಶ್ಮೀರಿಗಳೇ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಗಮ್‌ನ ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್ ಮತ್ತು ಯಾಸಿರ್-ಉಲ್-ಅಶ್ರಫ್, ನೌಗಮ್‌ನ ಮಕ್ಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹಿದ್, ಶೋಪಿಯಾನ್‌ನ ಮೋಲ್ವಿ ಇರ್ಫಾನ್ ಅಹ್ಮದ್, ಗಂಡರ್‌ಬಾಲ್‌ನ ಜಮೀರ್ ಅಹ್ಮದ್ ಅಹಂಗರ್, ಪುಲ್ವಾಮಾದ ಕೊಯಿಲ್‌ನ ಡಾ. ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಕುಲ್ಗಮ್‌ನ ಡಾ. ರಾಥರ್ ಸೇರಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರ, ಅನಂತನಾಗ್, ಗಂಡರ್‌ಬಾಲ್ ಮತ್ತು ಶೋಪಿಯಾನ್‌ನಾದ್ಯಂತ ಶೋಧಗಳನ್ನು ನಡೆಸಲಾಗಿದೆ.

ಇದನ್ನೂ ಓದಿ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ನಿಧನ

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್‌ ಆಗಲು ಶೌಚಾಲಯದ ಹೊರಗೆ ರೈಲಿನ ಬೋಗಿಯೊಳಗೆ ಸ್ನಾನ ಮಾಡಿದ ಯುವಕ