ಯುವತಿಯ ತಲೆ ಹೊಕ್ಕಿದ್ದ 70 ಸೂಜಿಗಳ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ವೈದ್ಯರು
19 ವರ್ಷದ ಯುವತಿಯೊಬ್ಬಳ ತಲೆ ಹೊಕ್ಕಿದ್ದ 70ಕ್ಕೂ ಹೆಚ್ಚು ಸೂಜಿಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ಒಡಿಶಾದಲ್ಲಿ ನಡೆದಿದೆ.
ಸಂಬಾಲ್ಪುರ: 19 ವರ್ಷದ ಯುವತಿಯೊಬ್ಬಳ ತಲೆ ಹೊಕ್ಕಿದ್ದ 70ಕ್ಕೂ ಹೆಚ್ಚು ಸೂಜಿಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಸಂಬಾಲ್ಪುರ ಜಿಲ್ಲೆಯ ವಿಮ್ಸರ್ ವೈದ್ಯಕೀಯ ಕಾಲೇಜಿನ ವೈದ್ಯರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯುವತಿಯ ತಲೆ ಸೇರಿದ್ದ ಸೂಜಿಗಳನ್ನು ಹೊರತೆಗೆದಿದ್ದಾರೆ.
ಸೂಜಿಗಳು ಯುವತಿಯ ತಲೆ ಸೇರಿದ್ದು ಹೇಗೆ?
ಇಂಚಗಾವ್‌ನ ರೇಷ್ಮಾ ಬೆಹ್ರಾ ಎಂಬ 19 ವರ್ಷದ ಯುವತಿಗೆ ನಾಲ್ಕು ವರ್ಷದ ಹಿಂದಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಈ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಆಕೆಯನ್ನು ಒಬ್ಬರ ವೈದ್ಯರ ಬಳಿ ಕರೆದೊಯ್ದಿದ್ದರು. ಆ ಹಳ್ಳಿ ವೈದ್ಯ ಈಕೆಯ ಆರೋಗ್ಯ ಸಮಸ್ಯೆಯ ಪರಿಹಾರಕ್ಕಾಗಿ ಹೀಗೆ ತಲೆಗೆ ಸೂಜಿಗಳನ್ನು ಮೊಳೆಯಂತೆ ಹೊಡೆದಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ರೇಷ್ಮಾಗೆ ತಲೆನೋವು ತೀವ್ರವಾಗಿದ್ದು, ಆಕೆಯನ್ನು ಮನೆಯವರು ಮೊದಲಿಗೆ ಬಲಂಗೈರ್‌ನ ಭೀಮಾ ಭಾಯ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಸಿಟಿ ಸ್ಕ್ಯಾನ್ ಮಾಡಿದಾಗ ಯುವತಿಯ ತಲೆಯಲ್ಲಿ ಹಲವು ಸೂಜಿಗಳಿರುವುದು ಪತ್ತೆಯಾಗಿದೆ. ಮೊದಲಿಗೆ ವೈದ್ಯರಿಗೆ 22 ಸೂಜಿಗಳು ಕಾಣಿಸಿದ್ದು, ಅದರಲ್ಲಿ 8ನ್ನು ಮೊದಲಿಗೆ ತೆಗೆದಿದ್ದಾರೆ. ಆದರೂ ಯುವತಿಯ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ, ಇದಾದ ನಂತರ ಕೂಡಲೇ ಆಕೆಯನ್ನು ವಿಮ್ಸರದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಕಾಲಿನ ಗಾಯಕ್ಕೆ ಆಸ್ಪತ್ರೆಗೆ ಹೋದ್ರೆ ಬಾಲಕನಿಗೆ ಸುನ್ನತಿ ಮಾಡಿ ವೈದ್ಯರ ಎಡವಟ್ಟು..!
ಅದರಂತೆ ಪೋಷಕರು ಯುವತಿಯನ್ನು ವಿಮ್ಸರ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ನಿರ್ದೇಶಕ, ಬಿ. ರಥ್ ಎಂಬುವವರು ಮಾತನಾಡಿ, ರಾತ್ರಿ 2 ಗಂಟೆಗೆ ಶಸ್ತ್ರಚಿಕಿತ್ಸೆ ಶುರು ಮಾಡಿದೆವು ಇದು ಸುಮಾರು ಒಂದೂವರೆ ಗಂಟೆಗಳ ಕಾಲ ಮುಂದುವರೆಯಿತು. ನಮ್ಮ ಮೂವರು ಶಸ್ತ್ರಚಿಕಿತ್ಸಾ ವಿಶೇಷತಜ್ಞರು ಈ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಭಾಗಿಯಾದರು. ಅದೃಷ್ಟವಶಾತ್ ಒಂದೇ ಒಂದು ಸೂಜಿಯೂ ಆಕೆಯ ತಲೆ ಬುರುಡೆಯನ್ನು ಸೀಳಿರಲಿಲ್ಲ, ಹಾಗೂ ಯಾವುದೇ ಸೋಂಕು( Infection)ಆಗಿರಲಿಲ್ಲ, ಯುವತಿಯೂ ಈಗ ಅಪಾಯದಿಂದ ಪಾರಾಗಿದ್ದಾಳೆ, ಆದರೂ ಕನಿಷ್ಠ ಒಂದು ವಾರದ ಮಟ್ಟಿಗಾದರೂ ಆಕೆಯನ್ನು ಸೂಕ್ಷ್ಮವಾಗಿ ಗಮನಿಸಲು (observation)ಆಸ್ಪತ್ರೆಯಲ್ಲೇ ಉಳಿಸಲಾಗಿದೆ.
ಘಟನೆಯ ಬಳಿಕ ಬಲಂಗೈರ್ ಪೊಲೀಸರು ನಕಲಿ ವೈದ್ಯ ತೇಜರಾಜ ರಾಣ ಎಂಬಾತನನ್ನು ಬಂಧಿಸಿದ್ದಾರೆ. ರೇಷ್ಮಾಳ ಪೋಷಕರು ಹೇಳುವ ಪ್ರಕಾರ ಆಕೆ ನಾಲ್ಕು ವರ್ಷದ ಹಿಂದೆ ಆಕೆಯ ತಾಯಿ ಸಾವಿಗೀಡಾದಾಗಿನಿಂದಲೂ ನಿರಂತರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಯಾವುದೇ ಚಿಕಿತ್ಸೆಯೂ ಆಕೆಯ ಸಮಸ್ಯೆಗೆ ಪರಿಹಾರ ಒದಗಿಸಿರಲಿಲ್ಲ, ಹೀಗಾಗಿ 2021ರಲ್ಲಿ ಕುಟುಂಬವೂ ಆಕೆಯನ್ನು ಈ ನಕಲಿ ವೈದ್ಯ ತೇಜರಾಜನ ಬಳಿಗೆ ಕರೆದುಕೊಂಡು ಹೋಗಿದ್ದರು. ಆಗ ರೇಷ್ಮಾಳನ್ನು ಚಿಕಿತ್ಸೆ ನೀಡುವುದಕ್ಕಾಗಿ ತೇಜರಾಜ ಕೋಣೆಯೊಳಗೆ ಕರೆದುಕೊಂಡು ಹೋಗಿದ್ದ. ಹೀಗಾಗಿ ಈ ಸೂಜಿ ಚುಚ್ಚಿರುವ ಬಗ್ಗೆ ರೇಷ್ಮಾಳ ಪೋಷಕರಿಗೂ ತಿಳಿದಿರಲಿಲ್ಲ, ಇತ್ತೀಚೆಗಷ್ಟೇ ರೇಷ್ಮಾಗೆ ಭಯಂಕರ ತಲೆನೋವು ಶುರುವಾದ ನಂತರವೇ ಆಕೆಯ ತಲೆಯಲ್ಲಿ ಸೂಜಿಗಳಿರುವುದು ಮನೆಯವರಿಗೆ ಗೊತ್ತಾಗಿದೆ ಎಂದು ವರದಿ ಆಗಿದೆ.
ಅಯ್ಯೋ ದೇವ್ರೇ..ಎಡಗಾಲಿನಲ್ಲಿ ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾಕ್ಟರ್ಸ್!