ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಸ್ಟಾಲಿನ್ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ. ಕಾಂಗ್ರೆಸ್‌ನ ಹಿಂದಿನ ರಾಜಕೀಯ ನಿಲುವುಗಳಿಗೆ ಡಿಎಂಕೆ ಐಟಿ ವಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಹಳೆಯ ಮೈತ್ರಿ ಮುರಿದ ಸಿಟ್ಟು ಹೊರಬಿದ್ದಿದೆ.

ನವೆಂಬರ್ 30, 2026 ರಂದು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದ ದೆಹಲಿ ಮತ್ತು ಚೆನ್ನೈ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮಸೂದೆ ವಿರುದ್ಧ ಬೆಂಬಲ ಕೋರಿ ಎಂ.ಕೆ. ಸ್ಟಾಲಿನ್ ಅವರನ್ನು ಸಹೋದರ ಎಂದು ಕರೆದಿದ್ದ ರಾಹುಲ್ ಗಾಂಧಿ ಅವರಿಗೆ ಡಿಎಂಕೆ ನಾಯಕರು ಬೆನ್ನಿಗೆ ಚೂರಿ ಹಾಕುವ ಸಹೋದರ ಎಂದು ತಿರುಗೇಟು ನೀಡುವ ಮೂಲಕ ಹಳೆಯ ಮೈತ್ರಿ ಮುರಿದ ಸಿಟ್ಟನ್ನು ಹೊರಹಾಕಿದ್ದಾರೆ.

ರಾಹುಲ್ ಗಾಂಧಿ ಮನವಿ ಮತ್ತು ಡಿಎಂಕೆ ಐಟಿ ವಿಂಗ್ ಕಿಡಿ!

ಇಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, ಸಹೋದರ ಸ್ಟಾಲಿನ್ ಯಾವಾಗಲೂ ತಮಿಳು ವಿರೋಧಿ ಶಕ್ತಿಗಳ ವಿರುದ್ಧ ಬಂಡೆಯಂತೆ ನಿಂತಿದ್ದಾರೆ. ಲೋಕಸಭಾ ಸ್ಥಾನಗಳನ್ನು 850ಕ್ಕೆ ಏರಿಸುವುದು ಪ್ರಜಾಪ್ರಭುತ್ವವನ್ನು ಮುಗಿಸುತ್ತದೆ. ಸಂವಿಧಾನ ಮತ್ತು ತಮಿಳುನಾಡಿನ ಹಿತಾಸಕ್ತಿಗಾಗಿ ನಾವೆಲ್ಲರೂ ಒಟ್ಟಾಗಿ ಈ ಮಸೂದೆಯನ್ನು ಸೋಲಿಸಬೇಕು" ಎಂದು ಮನವಿ ಮಾಡಿದ್ದರು. ರಾಹುಲ್ ಅವರ ಈ ಪೋಸ್ಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿದ ಡಿಎಂಕೆ ಐಟಿ ವಿಂಗ್ ತನ್ನ ಅಧಿಕೃತ ಖಾತೆಯಲ್ಲಿ, ಮಿಸ್ಟರ್ ರಾಹುಲ್, ನೀವು ನಾಚಿಕೆಯಿಲ್ಲದೆ ಬೆನ್ನಿಗೆ ಚೂರಿ ಹಾಕಿದ್ದು ಇದೇ ಸಹೋದರನಿಗೆ ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡಿದೆ. ಡಿಎಂಕೆ ನಾಯಕರಾದ ಕಾಮೇಶ್ವರನ್ ಸೇರಿ ಹಲವರು ಕೂಡ ಮೇ 4ರ ರಾತ್ರಿ ಬೆನ್ನಿಗೆ ಚೂರಿ ಹಾಕಿ ಟಿವಿಕೆ ಜತೆ ಓಡಿಹೋದವರು ಈಗ ಪಾಠ ಹೇಳಲು ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹಳೆಯ ದ್ರೋಹದ ಹಿನ್ನೆಲೆ ಏನು?

2004ರಿಂದಲೂ ಕಾಂಗ್ರೆಸ್ ಮತ್ತು ಡಿಎಂಕೆ ನಿಕಟ ಮಿತ್ರಪಕ್ಷಗಳಾಗಿದ್ದವು. 2024ರ ಚುನಾವಣೆಯಲ್ಲೂ ರಾಹುಲ್ ಅವರು ಸ್ಟಾಲಿನ್ ಅವರನ್ನು 'ಹಿರಿಯ ಸಹೋದರ' ಎಂದು ಕರೆದಿದ್ದರು. ಆದರೆ, ಮೇ 2026 ರಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ದಶಕಗಳ ಗೆಳೆತನವನ್ನು ಮುರಿದು, ನಟ ಸಿ. ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷದ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಅಂದು ಕಾಂಗ್ರೆಸ್ ಮಾಡಿದ ಈ ರಾಜಕೀಯ ನಡೆ ತಮಗೆ ಬಗೆದ ದ್ರೋಹ ಎಂದು ಡಿಎಂಕೆ ಈಗಲೂ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಸ್ಟಾಲಿನ್ ನೀಡಿದ ಮಾರ್ಮಿಕ ಉತ್ತರ!

ರಾಹುಲ್ ಗಾಂಧಿ ಮನವಿಗೆ ನಯವಾಗಿಯೇ ಉತ್ತರಿಸಿರುವ ಎಂ.ಕೆ. ಸ್ಟಾಲಿನ್, ಸಂವಿಧಾನ ಮತ್ತು ರಾಜ್ಯಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ಡಿಎಂಕೆಯ ಐತಿಹಾಸಿಕ ಪಾತ್ರವನ್ನು ಗುರುತಿಸಿದ್ದಕ್ಕಾಗಿ ಸಹೋದರ ರಾಹುಲ್ ಗಾಂಧಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ. ಮುಂದುವರಿದು, ತಮಿಳುನಾಡು ಮತ್ತು ತಮಿಳರ ಹಿತಾಸಕ್ತಿಯೇ ನಮಗೆ ಮುಖ್ಯ. ಈ ಹಾದಿಯಲ್ಲಿ ಯಾವುದೇ ರಾಜಿ ಇಲ್ಲ. ಇತಿಹಾಸ ನಮ್ಮನ್ನು ವೀರ ಕಟ್ಟಬೊಮ್ಮನ್‌ಗಳಾಗಿ ಗುರುತಿಸುತ್ತದೆಯೇ ಹೊರತು ದ್ರೋಹಿ ಎಟ್ಟಪ್ಪನ್‌ಗಳಾಗಿ ಅಲ್ಲ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇದರ ಅರ್ಥ ಕಳೆದ ಆಗಸ್ಟ್‌ನಲ್ಲಿ ತಮಿಳುನಾಡಿಗೆ ಬಂದಿದ್ದ ರಾಹುಲ್ ಗಾಂಧಿ, ಈ ಮಸೂದೆ ಬೆಂಬಲಿಸುವವರು '21ನೇ ಶತಮಾನದ ಎಟ್ಟಪ್ಪನ್' ಆಗುತ್ತಾರೆ ಎಂದು ಡಿಎಂಕೆಯನ್ನು ಟೀಕಿಸಿದ್ದರು. ಅದಕ್ಕೆ ಸ್ಟಾಲಿನ್ ಈಗ ತಿರುಗೇಟು ನೀಡಿದ್ದಾರೆ.

ಮೋದಿ ಸರ್ಕಾರದ ಮಸೂದೆಗೆ ಸ್ಟಾಲಿನ್ ಜೈ ಎಂದಿದ್ದೇಕೆ?

ಶನಿವಾರ (ನವೆಂಬರ್ 28) ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಪರಿಷ್ಕೃತ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಡಿಎಂಕೆ ಸಂಸದೆ ಕನಿಮೊಳಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬೆಂಬಲ ಖಚಿತಪಡಿಸಿದ್ದಾರೆ. 1971ರ ಜನಗಣತಿ ಆಧಾರದ ಮೇಲೆ ತಮಿಳುನಾಡಿನ ಶೇ. 7.18 ರಷ್ಟು ಸ್ಥಾನಗಳ ಪಾಲನ್ನು ಉಳಿಸಿಕೊಳ್ಳುವುದು ಮತ್ತು ಅದನ್ನು ಮುಂದಿನ 25 ವರ್ಷಗಳವರೆಗೆ (2051ರವರೆಗೆ) ಬದಲಾಯಿಸಬಾರದು ಎಂಬ ಡಿಎಂಕೆಯ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮಸೂದೆಯಲ್ಲಿ ಲಿಖಿತವಾಗಿ ಸೇರಿಸಿದೆ. ಇದರಿಂದ ತಮಿಳುನಾಡಿನ ಲೋಕಸಭಾ ಸ್ಥಾನಗಳು 39 ರಿಂದ 59ಕ್ಕೆ ಏರಲಿವೆ.

ಚೆನ್ನೈಗೆ ದೌಡಾಯಿಸಿದ ಇಂಡಿಯಾ ಒಕ್ಕೂಟದ ದಿಗ್ಗಜರು!

ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಡಿ.ಕೆ. ಶಿವಕುಮಾರ್, ರೇವಂತ್ ರೆಡ್ಡಿ ಸೇರಿದಂತೆ ಹಿರಿಯ ನಾಯಕರ ನಿಯೋಗ ಇಂದು ಮಧ್ಯಾಹ್ನ ಚೆನ್ನೈಗೆ ತೆರಳುತ್ತಿದೆ. ಕೇವಲ ಫೋಟೋ-ಅಪರ್ಚುನಿಟಿ?: "ಸೋನಿಯಾ ಗಾಂಧಿ ಅವರು ನಿಯೋಗದಲ್ಲಿ ಇರುವುದರಿಂದ ಸ್ಟಾಲಿನ್ ಭೇಟಿಗೆ ಸಮಯ ನೀಡಿದ್ದಾರೆ. ಇದು ಕೇವಲ ಸೌಜನ್ಯದ ಭೇಟಿ ಮತ್ತು ಫೋಟೋ-ಅಪರ್ಚುನಿಟಿ ಮಾತ್ರ, ನಿರ್ಧಾರ ಬದಲಾಗುವುದಿಲ್ಲ" ಎಂದು ಡಿಎಂಕೆ ಮೂಲಗಳು ತಿಳಿಸಿರುವುದು ಕುತೂಹಲ ಹೆಚ್ಚಿಸಿದೆ.