ಭಾರತದೊಂದಿಗೆ ನೆರೆಯ ಚೀನಾದ ಸಂಬಂಧ ಸುಧಾರಿಸುತ್ತಿರುವ ಸಂಕೇತವಾಗಿ, ಅಲ್ಲಿನ ವಿದೇಶಾಂಗ ಸಚಿವ ವಾಂಗ್‌ ಯಿ ಅವರು 2 ದಿನಗಳ ಭಾರತ ಭೇಟಿ

ನವದೆಹಲಿ: ಭಾರತದೊಂದಿಗೆ ನೆರೆಯ ಚೀನಾದ ಸಂಬಂಧ ಸುಧಾರಿಸುತ್ತಿರುವ ಸಂಕೇತವಾಗಿ, ಅಲ್ಲಿನ ವಿದೇಶಾಂಗ ಸಚಿವ ವಾಂಗ್‌ ಯಿ ಅವರು 2 ದಿನಗಳ ಭಾರತ ಭೇಟಿ ಕೈಗೊಂಡಿದ್ದು, ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಜೈಶಂಕರ್‌ ಅವರು ಉಭಯದೇಶಗಳ ನಡುವಿನ ಭಿನ್ನತೆಗಳು ಸಂಘರ್ಷಕ್ಕೆ ಕಾರಣವಾಗಬಾರದು ಎಂದಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಮಾತನಾಡಿದ ಜೈಶಂಕರ್‌, ‘ನಮ್ಮ ದ್ವಿಪಕ್ಷೀಯ ಸಂಬಂಧ, ಸಮಸ್ಯೆಗಳು, ಜಾಗತಿಕ ಸ್ಥಿತಿಗತಿ ಬಗ್ಗೆ ಮಾತನಾಡಲು ಇದು ಉತ್ತಮ ಅವಕಾಶ. ಉಭಯ ದೇಶಗಳ ಸಂಬಂಧವು ಕೆಲಕಾಲ ಹಳಸಿತ್ತಾದರೂ, ಈಗ ಒಟ್ಟಿಗೆ ಸಾಗಲು ಮುಂದಾಗಿವೆ. ಇದಕ್ಕೆ ಪರಸ್ಪರ ಗೌರವ, ಸೂಕ್ಷ್ಮತೆ ಮತ್ತು ಆಸಕ್ತಿ ಅಗತ್ಯ’ ಎಂದು ಹೇಳಿದ್ದಾರೆ.

ವಾಂಗ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ರನ್ನೂ ಭೇಟಿಯಾಗಲಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿ

ಶಾಂಘೈ ಕಾರ್ಪೊರೇಷನ್ ಆರ್ಗನೈಸೇಷನ್‌ ಸಭೆ ಹಿನ್ನೆಲೆಯಲ್ಲಿ ಬೀಜಿಂಗ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಗಡಿ ವಿವಾದ ಸೇರಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಾಗುತ್ತಿರುವ ಸುಧಾರಣೆಗಳ ಕುರಿತು ವಿವರಣೆ ನೀಡಿದ್ದಾರೆ.

2020ರ ಅರುಣಾಚಲ ಪ್ರದೇಶದ ಗಾಲ್ವಾನ್‌ ವ್ಯಾಲಿ ಸಂಘರ್ಷದ ಬಳಿಕ ಭಾರತೀಯ ವಿದೇಶಾಂಗ ಸಚಿವರ ಮೊದಲ ಚೀನಾ ಭೇಟಿ ಇದಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಜೈಶಂಕರ್‌, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರ ಶುಭ ಕಾಮನೆಯ ಸಂದೇಶವನ್ನು ಜಿನ್‌ಪಿಂಗ್‌ ಅವರಿಗೆ ತಲುಪಿಸಿದ್ದೇನೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಕುರಿತ ಬೆಳವಣಿಗೆಗಳ ಕುರಿತು ಅವರಿಗೆ ವಿವರಿಸಿದ್ದೇನೆ. ಈ ವಿಚಾರದಲ್ಲಿ ನಾಯಕರ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ