ಕಳೆದ ಕೆಲ ತಿಂಗಳುಗಳಿಂದ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ನಿರಂತರವಾಗಿ ಮತಗಳ್ಳತನದ ಆರೋಪ ಮಾಡುತ್ತಾ ಬಂದಿರುವ ಕಾಂಗ್ರೆಸ್‌, ಇದೀಗ ಬೃಹತ್‌ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ.

ನವದೆಹಲಿ (ಡಿ.14): ಕಳೆದ ಕೆಲ ತಿಂಗಳುಗಳಿಂದ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ನಿರಂತರವಾಗಿ ಮತಗಳ್ಳತನದ ಆರೋಪ ಮಾಡುತ್ತಾ ಬಂದಿರುವ ಕಾಂಗ್ರೆಸ್‌, ಇದೀಗ ಬೃಹತ್‌ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಪಕ್ಷವು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರ್‍ಯಾಲಿ ಮತ್ತು ಪ್ರತಿಭಟನೆ ಆಯೋಜಿಸಿದೆ. ಇದರಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿ ದೇಶದ ಎಲ್ಲಾ ರಾಜ್ಯಗಳ ಕಾಂಗ್ರೆಸ್‌ ನಾಯಕರು ಭಾಗಿಯಾಗಲಿದ್ದಾರೆ.

ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ 1000ಕ್ಕೂ ಹೆಚ್ಚು ಪಕ್ಷದ ನಾಯಕರು ಕರ್ನಾಟಕದಿಂದ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಮತಗಳವಿನ ಕುರಿತು ಗಂಭೀರ ಆರೋಪ ಮಾಡಿಕೊಂಡೇ ಬಂದಿದ್ದ ಕಾಂಗ್ರೆಸ್‌, ಇದಕ್ಕೆ ಉದಾಹರಣೆಯಾಗಿ ಮೊದಲಿಗೆ ಲೋಕಸಭಾ ಚುನಾವಣೆಯ ವೇಳೆ ಕರ್ನಾಟಕದ ಮಹದೇವಪುರ ಕ್ಷೇತ್ರ ಮತ್ತು ಆಳಂದ ವಿಧಾನಸಭಾ ಕ್ಷೇತ್ರದ ಬೆಳವಣಿಗೆಯನ್ನು ಪ್ರಸ್ತಾಪಿಸಿತ್ತು. ಬಳಿಕವೂ ಅದು ದೇಶಾದ್ಯಂತ ಇದೇ ವಿಷಯವನ್ನು ಪ್ರಸ್ತಾಪಿಸುತ್ತಲೇ ಬಂದಿತ್ತು. ಅದರ ಬೆನ್ನಲ್ಲೇ ಭಾನುವಾರ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದ್ದು, ಅಲ್ಲಿಯೂ ಮಹದೇವಪುರ ಮತ್ತು ಆಳಂದ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಏನೇನು ಕಾರ್ಯಕ್ರಮ?

ಕಾಂಗ್ರೆಸ್ ನಾಯಕರು ಮೊದಲಿಗೆ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಜಮಾವಣೆಯಾಗಲಿದ್ದಾರೆ. ಆ ಬಳಿಕ ಬಸ್‌ನಲ್ಲಿ ರಾಮಲೀಲಾ ಮೈದಾನಕ್ಕೆ ತೆರಳಲಿದ್ದಾರೆ. ಮತಚೋರಿ ವಿರುದ್ಧ ಪಕ್ಷವು ಈಗಾಗಲೇ ಕರ್ನಾಟಕವೊಂದರಿಂದಲೇ 1 ಕೋಟಿಗಿಂತ ಹೆಚ್ಚು ಸೇರಿದಂತೆ ದೇಶವ್ಯಾಪಿ 5.5 ಕೋಟಿ ಜನರಿಂದ ಸಹಿ ಸಂಗ್ರಹಿಸಿದೆ.

ಮತಕಳ್ಳತನ ವಿರುದ್ಧದ ಹೋರಾಟ ಕರ್ನಾಟಕದಿಂದಲೇ ಆರಂಭವಾಗಿದೆ. ಈಗ ರಾಮಲೀಲಾ ಮೈದಾನದಲ್ಲಿನ ಪ್ರತಿಭಟನೆಯಲ್ಲಿ ರಾಜ್ಯದಿಂದ 1000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಮತದಾರರ ಹಕ್ಕಿನ ರಕ್ಷಣೆಗಾಗಿ ಈ ಹೋರಾಟ ಆರಂಭಿಸಿದ್ದೇವೆ.
- ಡಿ.ಕೆ. ಶಿವಕುಮಾರ್‌, ಡಿಸಿಎಂ

ಪ್ರಜಾಪ್ರಭುತ್ವದ ಧ್ವನಿಯು ಪ್ರತಿಯೊಬ್ಬ ಪ್ರಜೆಯಲ್ಲಿದೆ. ಮತಕಳ್ಳತನವಾದರೆ ನಾಗರಿಕರ ಧ್ವನಿ ಅಡಗಿಸಿದಂತೆ. ಇದರ ವಿರುದ್ಧ ದಿಲ್ಲಿಯಲ್ಲಿ ಕಾಂಗ್ರೆಸ್‌ ಭಾನುವಾರ ಹೋರಾಡಲಿದೆ. ದಿಲ್ಲಿಗೆ ಬರಲು ಆಗದಿದ್ದರೆ, ಎಲ್ಲಿದ್ದಿರೋ ಅಲ್ಲಿಂದಲೇ ಹೋರಾಟಕ್ಕೆ ಧ್ವನಿಯಾಗಿ.
- ಸಿದ್ದರಾಮಯ್ಯ, ಮುಖ್ಯಮಂತ್ರಿ