ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್, ಭಾರತದ ಮೇಲಿನ ಟ್ರಂಪ್‌ರ ಸುಂಕ ನೀತಿಯನ್ನು ಟೀಕಿಸಿದ್ದಾರೆ. ಈ ನೀತಿಯು ಭಾರತವನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರ ತರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಾಷಿಂಗ್ಟನ್ ಡಿಸಿ, (ಆ.8): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ವಿಧಿಸಿರುವ 50% ಕ್ಕೂ ಹೆಚ್ಚಿನ ಭಾರೀ ಸುಂಕವನ್ನು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮವು ಭಾರತವನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರ ತರಬಹುದು ಎಂದು ಎಚ್ಚರಿಸಿರುವ ಅವರು, ಇದು ದಶಕಗಳಿಂದ ಅಮೆರಿಕ ನಡೆಸಿದ ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರವಿಡುವ ಕಾರ್ಯತಂತ್ರದ ಪ್ರಯತ್ನಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ.
ಬೋಲ್ಟನ್, ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, 'ಟ್ರಂಪ್‌ರ ಚೀನಾದ ಮೇಲಿನ ಮೃದುತ್ವ ಮತ್ತು ಭಾರತದ ಮೇಲಿನ ಕಠಿಣ ಸುಂಕ ನೀತಿಯು ಅಮೆರಿಕಕ್ಕೆ 'ಕೆಟ್ಟ ಪರಿಣಾಮ' ತಂದಿದೆ. ಇದು ಭಾರತವನ್ನು ರಷ್ಯಾ ಮತ್ತು ಚೀನಾದೊಂದಿಗೆ ಒಗ್ಗಟ್ಟಿನಿಂದ ಅಮೆರಿಕದ ವಿರುದ್ಧ ಮಾತುಕತೆಗೆ ತಳ್ಳಬಹುದು ಎಂದು ಹೇಳಿದ್ದಾರೆ. ಟ್ರಂಪ್ ಏಪ್ರಿಲ್‌ನಲ್ಲಿ ಚೀನಾದೊಂದಿಗೆ ವ್ಯಾಪಾರ ಘರ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರೆ, ಭಾರತದ ಮೇಲೆ 25% ದ್ವಿತೀಯ ಸುಂಕ ಸೇರಿದಂತೆ 50% ಕ್ಕಿಂತಲೂ ಹೆಚ್ಚಿನ ಸುಂಕವನ್ನು ವಿಧಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಅಮೆರಿಕದ ಮಾಜಿ ವಿದೇಶಾಂಗ ನೀತಿ ತಜ್ಞ ಕ್ರಿಸ್ಟೋಫರ್ ಪಡಿಲ್ಲಾ ಕೂಡ ಈ ಸುಂಕಗಳು ಭಾರತ-ಅಮೆರಿಕ ಸಂಬಂಧಗಳಿಗೆ ದೀರ್ಘಕಾಲೀನ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ. ಈ ಸುಂಕಗಳು ಭಾರತದಲ್ಲಿ ಅಮೆರಿಕದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಎಂದು ಅವರು ಹೇಳಿದ್ದಾರೆ.
ಭಾರತವು ಈ ಸುಂಕಗಳನ್ನು ಅನ್ಯಾಯಯುತ ಮತ್ತು ಅಪ್ರಾಯೋಗಿಕ ಎಂದು ಕರೆದು, ರಷ್ಯಾದ ತೈಲ ಆಮದುಗಳನ್ನು ಸಮರ್ಥಿಸಿಕೊಂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಅಮೆರಿಕದ ಕ್ರಮವನ್ನು 'ಅಕ್ರಮ ವ್ಯಾಪಾರದ ಒತ್ತಡ' ಎಂದು ಖಂಡಿಸಿ, ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ. ಟ್ರಂಪ್ ಶೀಘ್ರದಲ್ಲಿನ ಪುಟಿನ್ ಭೇಟಿಯಲ್ಲಿ ಈ ವಿಷಯವನ್ನು ರಷ್ಯಾ ತನ್ನ ಕಾರ್ಯತಂತ್ರಕ್ಕೆ ಬಳಸಿಕೊಳ್ಳಬಹುದು ಎಂದು ಬೋಲ್ಟನ್ ಎಚ್ಚರಿಕೆ ನೀಡಿದ್ದಾರೆ.
ದಿ ಹಿಲ್‌ನ ಲೇಖನದಲ್ಲಿ ಬೋಲ್ಟನ್, ಟ್ರಂಪ್‌ರ ಚೀನಾದ ಮೇಲಿನ ಮೃದು ನೀತಿಯನ್ನು 'ಒಪ್ಪಂದದ ಹಂಬಲ' ಎಂದು ವಿಮರ್ಶಿಸಿದ್ದಾರೆ, ಇದು ಅಮೆರಿಕದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಹಾನಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ರಷ್ಯಾದೊಂದಿಗೆ ಚೀನಾ ಹೆಚ್ಚು ತೈಲ ಖರದಿಸುತ್ತಿದ್ದರೂ ಬೀಜಿಂಗ್‌ಗೆ ಕಡಿಮೆ ಸುಂಕ ಮತ್ತು ನವದೆಹಲಿಗೆ ಕಠಿಣ ಸುಂಕಗಳು ಸಂಭಾವ್ಯವಾಗಿ ಇದು ದೊಡ್ಡ ತಪ್ಪು ಎಂದು ಅವರು ಒತ್ತಿ ಹೇಳಿದ್ದಾರೆ.
