ಮುಂಬೈ(ನ.26): ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅಜಿತ್ ಪವಾರ್ ಬೆಂಬಲ ವಾಪಸ್ ಪಡೆದ ಬೆನ್ನಲ್ಲೇ, ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

ಮುಂಬೈನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಬಿಜೆಪಿಗೆ ಬಹುಮತ ಇರದ ಕಾರಣ ಸರ್ಕಾರ ರಚನೆಯ ಪ್ರಯತ್ನದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು.

ಬಿಜೆಪಿಗೆ ಸೆಟ್ ಬ್ಯಾಕ್: ರಾಜೀನಾಮೆ ನೀಡಿ ಅಜಿತ್ ಪವಾರ್ ಕಮ್ ಬ್ಯಾಕ್!

ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಗೆ ಶಿವಸೇನೆ ಕಾರಣ ಎಂದು ಆರೋಪಿಸಿದ ಫಡ್ನವೀಸ್, ಜನಾದೇಶವನ್ನು ಧಿಕ್ಕರಿಸಿ ಸೈದ್ಧಾಂತಿಕ ವಿರೋಧಿಗಳೊಂದಿಗೆ ಸೇರಿದ ಶಿವಸೇನೆ ಜನತೆಗೆ ದ್ರೋಹ ಮಾಡಿದೆ ಎಂದು ಹರಿಹಾಯ್ದರು.

ಶಿವಸೇನೆಗೆ ಎರಡುವರೆ ವರ್ಷಗಳ ಅಧಿಕಾರ ನೀಡುವ ಒಪ್ಪಂದ ಎಂದೂ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಫಡ್ನವೀಸ್, ಸುಳ್ಳುಗಳ ಸರಮಾಲೆ ಪೋಣಿಸಿ ಅಧಿಕಾರ ಪಡೆಯುವ ಶಿವಸೇನೆಯ ಹುನ್ನಾರ ಯಶಸ್ವಿಯಾಗಿದೆ ಎಂದು ಕಿಡಿಕಾರಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಉದ್ದೇಶದಿಂದ ಈ ಅಪವಿತ್ರ ಮಹಾಮೈತ್ರಿ ರಚನೆಯಾಗಿದೆ ಎಂದು ಫಡ್ನವೀಸ್  ಹರಿಹಾಯ್ದರು.

ಮಹಾರಾಷ್ಟ್ರದಲ್ಲಿ ಸದೃಢ ಹಾಗೂ ಸುಭದ್ರ ಆಡಳಿತ ನೀಡಲು ಇಷ್ಟು ದಿನ ಸರ್ಕಾರ ರಚನೆಗೆ ಪ್ರಯತ್ನಿಸಲಾಯಿತೇ ಹೊರತು ಅಧಿಕಾರ ದಾಹದಿಂದಲ್ಲ ಎಂದು ಫಡ್ನವೀಸ್ ಸ್ಪಷ್ಟಪಡಿಸಿದರು.

ಸದ್ಯ ರಾಜ್ಯದಲ್ಲಿ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ನೇತೃತ್ವದ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಈ ಸರ್ಕಾರಕ್ಕೆ ಶುಭ ಕೋರುವುದಾಗಿ ಫಡ್ನವೀಸ್ ಹೇಳಿದರು.

ಫಡ್ನವೀಸ್‌ಗೆ 'ಮಹಾ' ಪರೀಕ್ಷೆ: ನಾಳೆಯೇ ಬಹುಮತ ಸಾಬೀತುಪಡಿಸಿ, ರಹಸ್ಯ ಮತದಾನ ಬೇಡ: ಸುಪ್ರೀಂ

ಸುದ್ದಿಗೋಷ್ಠಿ ಬಳಿಕ ರಾಜ್ಯಪಾಲರ ಬಳಿ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಫಡ್ನವೀಸ್ ಸ್ಪಷ್ಟಪಡಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕರ್ತವ್ಯ ನಿವರ್ಹಿಸಲಿದೆ ಎಂದು ಅವರು ಈ ವೇಳೆ ಭರವಸೆ ನೀಡಿದರು.

ಇದೇ ವೇಳೆ ಐದು ವರ್ಷ ರಾಜ್ಯದ ಸಿಎಂ ಆಗಿ ಕರ್ತವ್ಯ ನಿರ್ವಹಿಸಿದ್ದು ತಮಗೆ ತೃಪ್ತಿ ತಂದಿದೆ ಎಂದು ಹೇಳಿದ ಫಡ್ನವೀಸ್, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು ಸಾರ್ಥಕ ಎನಿಸಿದೆ ಎಂದು ಹೇಳಿದರು.

"