ಭಾರತೀಯ ಸೇನೆಯ ಆಪರೇಷನ್ ಸಿಂದೂರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಸೇನಾಧಿಕಾರಿ ಕ। ಸೋಫಿಯಾ ಖುರೇಷಿ ಅವರನ್ನು ‘ಉಗ್ರರ ಸಹೋದರಿ’ ಎಂದಿದ್ದ ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾಗೆ ಮತ್ತೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್
ನವದೆಹಲಿ: ಭಾರತೀಯ ಸೇನೆಯ ಆಪರೇಷನ್ ಸಿಂದೂರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಸೇನಾಧಿಕಾರಿ ಕ। ಸೋಫಿಯಾ ಖುರೇಷಿ ಅವರನ್ನು ‘ಉಗ್ರರ ಸಹೋದರಿ’ ಎಂದಿದ್ದ ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾಗೆ ಮತ್ತೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್, ‘ಇನ್ನೂ ಏಕೆ ಬಹಿರಂಗ ಕ್ಷಮೆ ಕೇಳಿಲ್ಲ?’ ಎಂದು ಪ್ರಶ್ನಿಸಿದೆ.
ಸೋಮವಾರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಪ್ರಮಾಣಿಕತೆ ಮತ್ತು ಉದ್ದೇಶಗಳ ಬಗ್ಗೆ ಸಂಶಯವಾಗುತ್ತಿದೆ’ ಎಂದಿತು. ಆಗ ಶಾ ಪರ ವಾದ ಮಂಡಿಸಿದ ವಕೀಲರು, ‘ಅವರು ಆನ್‌ಲೈನ್‌ನಲ್ಲಿ ಕ್ಷಮೆ ಯಾಚಿಸಿದ್ದರು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಬಗ್ಗೆ ಆ.13ರರೊಳಗಾಗಿ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.
ಮೊದಲು ಛೀಮಾರಿ
ನವದೆಹಲಿ: ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಭೂಷಣ್ ರಾಮಕೃಷ್ಣ ಗವಾಯಿ (CJI BR Gavai), ಸಾಂವಿಧಾನಿಕ ಹುದ್ದೆಯಲ್ಲಿರುವ ಓರ್ವ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಲು ಹೇಗೆ ಸಾಧ್ಯ? ಸಚಿವರಾಗಿ ಯಾವ ರೀತಿಯ ಭಾಷೆ ಬಳಕೆ ಮಾಡಿದ್ದೀರಿ? ಎಂದು ಹೇಳಿ ವಿಜಯ್ ಶಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ ಮತ್ತು ತಡೆ ನೀಡಲು ನ್ಯಾಯಾಲಯ ನಿರಾಕರಿಸಿತು. ಸಚಿವ ಸ್ಥಾನದಲ್ಲಿರೋದರಿಂದ ಏನು ಆಗಲ್ಲ ಎಂದು ಭಾವಿಸಿರಬಹುದು. ಜವಾಭ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯ ನ್ಯಾಯಧೀಶರು ಸೂಚಿಸಿದ್ರು.
ಬಾರ್ ಆಂಡ್ ಬೆಂಚ್ ವರದಿ ಪ್ರಕಾರ, ನ್ಯಾಯಾಲಯದಲ್ಲಿ ಸಚಿವ ವಿಜಯ್ ಶಾ ಪರವಾಗಿ ವಾದ ಮಂಡಿಸಿದ ವಕೀಲ ವಿಭಾ ದತ್ತಾ, ನಮ್ಮ ಕಕ್ಷಿದಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರ ಮತ್ತು ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮಾಧ್ಯಮಗಳು ಈ ವಿಷಯವನ್ನು ವಿಜೃಂಭಣೆಯಿಂದ ತೋರಿಸಿವೆ. ಆದೇಶ ನೀಡುವ ಮುನ್ನ ಹೈಕೋರ್ಟ್ ನಮ್ಮ ಮನವಿಯನ್ನು ಆಲಿಸಿಲ್ಲ. ನಾವು ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ವಾದ ಮಂಡಿಸಿದ್ರು.


