ಇತ್ತೀಚೆಗೆ ದೆಹಲಿಯ ಬೀದಿಗಳಲ್ಲಿ ನೀಲ್‌ಗಾಯ್ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡಿನಿಂದ ನಾಡಿಗೆ ಬಂದ ನೀಲ್‌ಗಾಯ್ ಕುತೂಹಲದಿಂದ ಗಲ್ಲಿಗಳಲ್ಲಿ ಅಡ್ಡಾಡುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ಇತ್ತಿಚೆಗೆ ಕಾಡನ್ನು ಬಿಟ್ಟು ನಾಡಿನತ್ತ ಕಾಡುಪ್ರಾಣಿಗಳು ದಾಂಗುಡಿ ಇಡುವುದು ಸಾಮಾನ್ಯ ಎನಿಸಿದೆ. ಕಾಡಂಚಿನ ಗ್ರಾಮಗಳಿಗೆ ಬಂದು ಸಾಕುಪ್ರಾಣಿಗಳನ್ನು ಹೊತ್ತೊಯ್ಯುವ ಘಟನೆಗಳು ಸಾಮಾನ್ಯ ಎನಿಸಿಬಿಟ್ಟಿವೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಇನ್‌ಫೋಸಿಸ್ ಕಚೇರಿಗೆ ಚಿರತೆಯೊಂದು ಪ್ರವೇಶಿಸಿ ಉದ್ಯೋಗಿಗಳನ್ನು ಭಯಬೀಳುವಂತೆ ಮಾಡಿದ್ದ ಘಟನೆ ನಡೆದಿತ್ತು. ಹುಲಿ, ಚಿರತೆ, ಕಾಡಾನೆಗಳು ಹೀಗೆ ನಾಡಂಚಿಗೆ ಬಂದು ಆಗಾಗ ಸುದ್ದಿಯಾಗುತ್ತಿರುತ್ತವೆ. ಅದೇ ರೀತ ಈಗ ಕಾಡಂಚಿನಿಂದ ನಾಡಿಗೆ ಬಂದ ನೀಲ್‌ಗಾಯೊಂದು ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ತಿರುಗುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ಅಂದಹಾಗೆ ಈ ನೀಲ್‌ ಗಾಯ್ ರಸ್ತೆಯಲ್ಲಿ ಸುತ್ತಾಡುತ್ತಿರುವ ದೃಶ್ಯ ಕಂಡುಬಂದಿದ್ದು, ದೆಹಲಿಯಲ್ಲಿ ರಾಷ್ಟ್ರ ರಾಜಧಾನಿಯ ಗಲ್ಲಿಯಲ್ಲಿ ಕುತೂಹಲದಿಂದ ನೀಲ್‌ಗಾಯ್ ಹೆಜ್ಜೆ ಹಾಕುತ್ತಿದ್ದರೆ, ಅಷ್ಟೇ ಕುತೂಹಲದಿಂದ ಅಲ್ಲಿನ ಜನ ಈ ವಿಶೇಷ ಅತಿಥಿಯನ್ನು ಗಮನಿಸಲು ಶುರು ಮಾಡಿದ್ದಾರೆ. ಹೀಗೆ ನೀಲ್‌ಗಾಯ್‌ ದೆಹಲಿಯ ಗಲ್ಲಿಗಳಲ್ಲಿ ಅಡ್ಡಾಡುತ್ತಿರುವ ವೀಡಿಯೋವನ್ನು ಯೂಟ್ಯೂಬರ್‌ ಕಾಕುಸಾಹಿಲ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ. ದೆಹಲಿಯ ಆದರ್ಶನಗರದ ಲೇನ್ 4 ಹಾಗೂ 4ರಲ್ಲಿ ನೀಲ್‌ಗಾಯ್ ಓಡಾಡಿದೆ. ಸ್ಕೂಟರ್‌ನಲ್ಲಿ ಹಿಂಬಾಲಿಸಿ ನೀಲ್‌ಗಾಯ್‌ನ ವಿಡಿಯೋವನ್ನು ಯೂಟ್ಯೂಬರ್ ಸೆರೆ ಹಿಡಿದಿದ್ದಾರೆ. 

ಮರದಿಂದ ರೈಲಿನ ಟಾಪ್‌ಗೆ ಜಿಗಿದು 180 ಕಿಲೋ ಮೀಟರ್ ಸಂಚರಿಸಿದ ಕೋತಿಮರಿ

ವೈರಲ್ ಆದ ವೀಡಿಯೋದಲ್ಲಿ ನೀಲ್‌ಗಾಯ್‌, ದೆಹಲಿಗೆ ಬಂದ ಪ್ರವಾಸಿಯಂತೆ ಕುತೂಹಲ ಹಾಗೂ ಗೊಂದಲದಿಂದ ಗಲ್ಲಿ ಗಲ್ಲಿಯಲ್ಲಿ ಹೆಜ್ಜೆ ಹಾಕಿದೆ. ಇದನ್ನು ನೋಡಿ ಹಸುವೊಂದು ಗಾಬರಿಯಾಗಿ ಪಕ್ಕಕ್ಕೆ ಓಡುತ್ತಿರುವ ದೃಶ್ಯ ಕೂಡ ವೀಡಿಯೋದಲ್ಲಿ ಸೆರೆ ಆಗಿದೆ. 

ಇನ್ನು ಈ ನೀಲ್‌ಗಾಯ್ ವೀಡಿಯೋ ನೋಡಿದ ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಚಿಂತಿಸಬೇಡಿ, ಕಾಡುಗಳನ್ನು ಕಡಿಯುವ ಪ್ರಮಾಣ ಎಷ್ಟು ಹೆಚ್ಚಾಗಿದೆ ಎಂದರೆ ಶೀಘ್ರದಲ್ಲೇ ನಾವು ಆನೆಗಳು ಮತ್ತು ಸಿಂಹಗಳನ್ನು ಸಹ ನೋಡುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ದೆಹಲಿಗರು ಈಗ ತುಂಬಾ ಖುಷಿಯಿಂದ ಇದ್ದಾರೆ, ಮೊದಲು ಪ್ರಾಣಿಗಳನ್ನು ನೋಡಲು ಮೃಗಾಲಯಕ್ಕೆ ಹೋಗಬೇಕಿತ್ತು, ಈಗ ಅವರು ಬೀದಿಗಳಲ್ಲಿ ಅವುಗಳನ್ನು ಮುಕ್ತವಾಗಿ ನೋಡಲು ಸಾಧ್ಯವಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ನೀಲ್‌ಗಾಯ್ ಓಡಾಡುತ್ತಿರುವುದಕ್ಕಿಂತ ಹೆಚ್ಚು ಅದರ ಹಿಂದೆ ನೀನು ಓಡುತ್ತಿದ್ದಿಯಾ ಎಂದು ಯೂಟ್ಯೂಬರ್ ಕಾಲೆಳೆದಿದ್ದಾರೆ.

ನೀ ಇಲ್ಲದೇ ನಾ ಹೇಗಿರಲಿ... ಗೆಳೆಯನ ಸಾವಿಗೆ ರೋದಿಸಿದ ಸರ್ಕಸ್ ಆನೆ: ಮನಕಲಕುವ ವೀಡಿಯೋ

ಆದರೆ ಈ ನೀಲ್‌ಗಾಯ್ ತನ್ನ ನೈಸರ್ಗಿಕ ಆವಾಸ ಸ್ಥಾನದಿಂದ ದೂರವಾಗಿ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ದೆಹಲಿ ಮತ್ತು ಸುತ್ತಮುತ್ತ ಇದನ್ನು ನೋಡಿದ್ದು ಇದೇ ಮೊದಲ ಬಾರಿಯಲ್ಲ. ಗ್ರೇಟರ್ ಕೈಲಾಶ್, ನೇತಾಜಿ ನಗರ, ವಿಜಯ್ ಚೌಕ್‌ನ ಕಾರಂಜಿ ಬಳಿ ಮತ್ತು ಒಂದು ಸಂದರ್ಭದಲ್ಲಿ ತಿಲಕ್ ಸೇತುವೆ ರೈಲು ನಿಲ್ದಾಣದ ಬಳಿ ಸೇರಿದಂತೆ ಹಲವಾರು ಕಡೆ ಈ ಹಿಂದೆಯೂ ನೀಲ್‌ಗಾಯ್‌ಗಳು ಕಾಣಿಸಿಕೊಂಡಿದ್ದವು. ಅಂದಹಾಗೆ ಈ ನೀಲ್‌ಗಾಯ್ ದೆಹಲಿ ರಾಜ್ಯದ ರಾಜ್ಯಪ್ರಾಣಿ. ಇದನ್ನೂ ಬ್ಲೂ ಬುಲ್ ಎಂದು ಕೂಡ ಕರೆಯುತ್ತಾರೆ.

ವೈರಲ್ ಆದ ನೀಲ್‌ಗಾಯ್ ವಿಡಿಯೋ ಇಲ್ಲಿದೆ ನೋಡಿ

View post on Instagram